ಜಿಲ್ಲೆ

ಮೈಸೂರು: ನೀರಿನ ಸಂಪರ್ಕ ಸಕ್ರಮಕ್ಕೆ ಇದು ಸಕಾಲ

ಸದೇಶ್ ಕಾರ್ಮಾಡ್

ಸದೇಶ್ ಕಾರ್ಮಾಡ್ ಮೈಸೂರು
ನಗರದಲ್ಲಿ ಅನಧಿಕೃತವಾಗಿ ಪಡೆದಿರುವ ಎಲ್ಲ ಕುಡಿಯುವ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಲು ನಗರ ಪಾಲಿಕೆ ಮುಂದಾಗಿ ದ್ದು, ಕೊಳಚೆ ಪ್ರದೇಶದಲ್ಲಿರುವವರು ಹಾಗೂ ಬಿಪಿಎಲ್ ಕುಟುಂಬದವರ ನೀರಿನ ಸಂಪರ್ಕ ಸಕ್ರಮಗೊಳಿಸಲು ಸರಳೀಕೃತ ಪಾವತಿ ವ್ಯವಸ್ಥೆಯನ್ನು ಪಾಲಿಕೆ ರೂಪಿಸಿದೆ.

ಅನಧಿಕೃತವಾಗಿ ಪಡೆದಿರುವ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸುವಂತೆ ಈಗಾಗಲೇ ನಗರ ಪಾಲಿಕೆ ಹಲವರಿಗೆ ಸೂಚನೆ ನೀಡಿ ದ್ದು, ಸಾಕಷ್ಟು ಕಡೆಗಳಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಎಚ್ಚರಿಕೆ ನೀಡುವ ಕಾರ್ಯವನ್ನು ಪಾಲಿಕೆ ಮಾಡಿದೆ. ಆದರೆ, ಬಡತನ ರೇಖೆಗಿಂತ ಕೆಳಗೆ ಇರುವವರು ಹಾಗೂ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಗರ ಪಾಲಿಕೆ ನಿಗದಿ ಮಾಡಿರುವ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಿ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳುವುದು ಕಷ್ಟ. ಅಂತಹ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ನಗರ ಪಾಲಿಕೆಯು ಸರಳೀಕೃತ ವ್ಯವಸ್ಥೆಯಲ್ಲಿ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಟ್ಟಿದೆ.

ಗೃಹ ಬಳಕೆಗೆ ಸಂಬಂಧಿಸಿದಂತೆ ನೀರಿನ ಸಂರ್ಪಕವನ್ನು ಸಕ್ರಮಗೊಳಿಸಲು ಹಾಗೂ ಹೊಸ ಸಂಪರ್ಕ ಪಡೆಯಲು ಜನರು 3,115 ರೂ.ಗಳನ್ನು ಒಂದು ಬಾರಿ ಸಂಪರ್ಕ ಶುಲ್ಕವಾಗಿ ಪಾವತಿ ಮಾಡಬೇಕು. ಈ ಶುಲ್ಕ ಪಾವತಿಸಿದ ನಂತರವಷ್ಟೇ ಅಂತಹ ಮನೆಗಳಿಗೆ ಪ್ರತಿ ತಿಂಗಳು ನೀರಿನ ಬಿಲ್ ನೀಡಲಾಗುವುದು. ಇಲ್ಲವಾದಲ್ಲಿ ಅಂತಹ ಸಂಪರ್ಕಗಳನ್ನು ಅನಧಿಕೃತವೆಂದು ಪರಿಗಣಿಸಿ ನೀರಿನ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ, ಬಿಪಿಎಲ್ ಕುಟುಂಬದವರು ಹಾಗೂ ಕೊಳಚೆ ಪ್ರದೇಶದ ನಿವಾಸಿಗಳ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟು ಕೊಂಡು ಶುಲ್ಕ ಪಾವತಿಗೆ 20 ತಿಂಗಳ ಕಾಲಾವಕಾಶ ನೀಡಲಾಗಿದೆ. ಮೊದಲ ಕಂತು 1,115 ರೂ.ಗಳನ್ನು ಪಾವತಿಸಬೇಕು. ನಂತರ 20 ಕಂತುಗಳಲ್ಲಿ (20 ತಿಂಗಳು) ಶುಲ್ಕ ಪಾವತಿಸಬಹುದು. ಇದಕ್ಕೆ ಮಾಸಿಕ 1 ರೂ. ಸರಳ ಬಡ್ಡಿ ವಿಧಿಸಲಾಗುವುದು. ಪ್ರತಿ ತಿಂಗಳು ನೀರಿನ ಬಿಲ್ ಜತೆಗೆ ಪ್ರತಿ ತಿಂಗಳು ಪಾವತಿಸಬೇಕಾಗುವ ಶುಲ್ಕವನ್ನು ಸೇರ್ಪಡೆ ಮಾಡಲಾಗುವುದು.

ಯಾರಿಗೆ ಎಷ್ಟು ದರ ?

ಗೃಹ, ಗೃಹೇತರ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆಯ ನೀರಿನ ಸಂಪರ್ಕ ಪಡೆಯಲು ಹಾಗೂ ಅಕ್ರಮ ಸಂಪರ್ಕವನ್ನು ಸಕ್ರಮಗೊ ಳಿಸಲು ನಗರ ಪಾಲಿಕೆ ಪ್ರತ್ಯೇಕ ದರ ನಿಗದಿ ಮಾಡಿದೆ. ಗೃಹ ಬಳಕೆಗೆ 3,115 ರೂ., ಗೃಹೇತರ ಬಳಕೆಗೆ 6,340 ರೂ., ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಗೆ 12,640 ರೂ. ಶುಲ್ಕ ನಿಗದಿ ಮಾಡಲಾಗಿದೆ.

18 ಸಾವಿರ ಅನಧಿಕೃತ ಸಂಪರ್ಕ

ನಗರ ಪಾಲಿಕೆಯು ನಗರ ಮಾತ್ರವಲ್ಲದೆ ನಗರದ ಹೊರ ವಲಯದ ಕೆಲವು ಪ್ರದೇಶಗಳಿಗೂ ನೀರು ಪೂರೈಕೆ ಮಾಡುತ್ತಿದೆ. ಅಂದಾಜು 13 ಲಕ್ಷ ಜನರಿಗೆ 1,67,605 ಸಕ್ರಿಯ ನೀರಿನ ಸಂಪರ್ಕಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೆ, ನಗರ ವ್ಯಾಪ್ತಿಯಲ್ಲಿ 18 ಸಾವಿರ ಅನಧಿಕೃತ ನೀರಿನ ಸಂಪರ್ಕವಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಪಾಲಿಕೆ ಬರಬೇಕಾದ ಆದಾಯದಲ್ಲಿ ಸೋರಿಕೆಯಾಗುತ್ತಿದೆ.

ರಾಜ್ಯ ಜಲನೀತಿ ಪ್ರಕಾರ ನಗರ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಸಾರ್ವತ್ರಿಕವಾಗಿ ಶುದ್ಧ ಕುಡಿಯುವ ನೀರನ್ನು ಕೈಗೆಟುಕುವ ದರದಲ್ಲಿ ಕೊಳವೆ ಸಂಪರ್ಕದ ಮೂಲಕ ಒದಗಿಸುವುದು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯವವಾಗಿದೆ. ಅದೇ ರೀತಿ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸುವುದು ಸಹ ಆಯಾ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಈ ಹಿಂದೆ ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕಗಳ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿ ಇತ್ತು. ಆದರೆ, ನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ ನಂತರ ಸಾಕಷ್ಟು ಜನರು ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಜನರ ಮನೆಗಳಲ್ಲಿ ನೀರಿನ ಮೀಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ನಾಟ್‌ವರ್ಕಿಂಗ್ ಮೀಟರ್‌ಗಳ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿ ಇತ್ತು. ನಾಟ್‌ವರ್ಕಿಂಗ್ ಮೀಟರ್‌ದಾ ರರಿಗೆ ನಗರ ಪಾಲಿಕೆ ಎಚ್ಚರಿಕೆ ನೀಡಿದ ನಂತರ ಇದೀಗ ಬಹುಪಾಲು ಮನೆಗಳಲ್ಲಿ ಹೊಸ ಮೀಟರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನಗರ ಪಾಲಿಕೆ ಬರುತ್ತಿರುವ ಆದಾಯದ ಪ್ರಮಾಣದಲ್ಲೂ ಏರಿಕೆ ಕಾಣಲು ಪ್ರಾರಂಭವಾಗಿದೆ.

ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಅನಧಿಕೃತವಾಗಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ನಗರ ಪಾಲಿಕೆಗೆ ಬರಬೇಕಾದ ಆದಾಯ ಬರುತ್ತಿಲ್ಲ. ಹೀಗಾಗಿ ಎಲ್ಲ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿರ್ದೇಶನ ನೀಡಲಾಗಿದೆ. ಬಿಪಿಎಲ್ ಕುಟುಂಬಗಳು ಹಾಗೂ ಕೊಳಚೆ ಪ್ರದೇಶದ ನಿವಾಸಿಗಳಿಗೆ ಒಂದೇ ಬಾರಿ 3,115 ರೂ. ಶುಲ್ಕ ಪಾವತಿಸಲು ಕಷ್ಟಸಾಧ್ಯ ಇರುವ ಹಿನ್ನೆಲೆಯಲ್ಲಿ ಅವರಿಗೆ 20 ತಿಂಗಳ ಸರಳೀಕೃತ ಪಾವತಿ ವ್ಯವಸ್ಥೆ ರೂಪಿಸಲಾಗಿದೆ. ಹಾಗಾಗಿ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವ ಪ್ರತಿಯೊಬ್ಬರು ನೀರಿನ ಸಂಪರ್ಕವನ್ನು ಸಕ್ರಮಗೊಳಿಸಲು ಮುಂದಾಗಬೇಕು. ಆ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು.
ಶಿವಕುಮಾರ್, ಮೇಯರ್