ಜಿಲ್ಲೆ

ಮೈಸೂರು: ಜನಾಕರ್ಷಿಸಲಿದೆ ವಿಶೇಷ ಮತಗಟ್ಟೆಗಳು

ಸದೇಶ್ ಕಾರ್ಮಾಡ್

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವ, ವಿಶೇಷಚೇತನ, ಮಾದರಿ ಹಾಗೂ ವಿಷಯದಾರಿತ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಲಿದೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2915 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ 99 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. 11 ಕ್ಷೇತ್ರಗಳಲ್ಲಿ ತಲಾ 5 ಸಖಿ ಮತಗಟ್ಟೆಗಳು, 11 ಕಡೆಗಳಲ್ಲಿ ವಿಶೇಷಚೇತನರ ಮತಗಟ್ಟೆ, 11 ಯುವ ಮತಗಟ್ಟೆ, 12 ಸಾಂಪ್ರಾದಾಯಿಕ ಮತಗಟ್ಟೆ ಮತ್ತು 10 ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ.

ವಿಶೇಷಚೇತನ ಮತದಾರರ ಸಂಖ್ಯೆ ಹೆಚ್ಚು ಇರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ವಿಶೇಷಚೇತನ ಮತಗಟ್ಟೆ, ಹೆಚ್ಚು ಯುವ ಮತದಾರರನ್ನು ಹೊಂದಿರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ಯುವ ಮತದಾರರ ಮತಗಟ್ಟೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಆಕರ್ಷಕವಾಗಿರುವ 1 ವಿಷಯಾಧಾರಿತ ಮತಗಟ್ಟೆ ಹಾಗೂ ಗಿರಿಜನ ಮತದಾರರ ಸಂಖ್ಯೆ ಹೆಚ್ಚು ಇರುವ ಹುಣಸೂರಿನಲ್ಲಿ 4, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕುಗಳಲ್ಲಿ ತಲಾ 3 ರಂತೆ ಸಾಂಪ್ರಾದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತಗಟ್ಟೆಯಲ್ಲಿ ಅಂಗವಿಕಲರಿಗೆ ರ‌್ಯಾಂಪ್, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಹಾಯಕರ ನಿಯೋಜಿಸಲಾಗುವುದು. ಅಂಧ ಮತದಾರರಿಗೆ ಬ್ರೈಲ್‌ಲಿಪಿಯಲ್ಲಿ ಸಿದ್ಧಪಡಿಸಿರುವ ಮಾದರಿ ಮತಪತ್ರದ ಪ್ರದರ್ಶನ ಹಾಗೂ ಅದರ ವಿವರಣೆಯ ಆಡಿಯೋ ಮತಗಟ್ಟೆಗಳಲ್ಲಿ ಲಭ್ಯವಿರುತ್ತದೆ. ಭಾಗಶಃ ಅಂಧತ್ವ ಹೊಂದಿರುವ ಮತದಾರರಿಗೆ ಮ್ಯಾಗ್ನಿಫೈಡ್ ಲೆನ್ಸ್ ಬಳಸಿ ಮತದಾನ ಮಾಡುವ ಸೌಲಭ್ಯ ದೊರಕುತ್ತದೆ. ಕಿವುಡ ಮತ್ತು ಮೂಗ ಮತದಾರರಿಗೆ ಸಂಜ್ಞೆ ಭಾಷೆ ಬಳಸಿ ಮತದಾನ ಮಾಡುವ ವಿಧಾನದ ಬಗ್ಗೆ ಸಹಾಯಕರು ಲಭ್ಯವಿರುತ್ತಾರೆ.

ವಿಷಯಾಧಾರಿತ ಮತಗಟೆಗಳು

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ವಿಷಯಾಧಾರಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಪ್ರದರ್ಶಿಕೆಗಳ ಪ್ರದರ್ಶನ ಹಾಗೂ ಮಾಹಿತಿಗಳನ್ನು ಗೋಡೆ ಬರಹಗಳ ಮೂಲಕ ಆಕರ್ಷಿಣೀಯವಾಗಿ ಚಿತ್ರದ ಮೂಲಕ ಮೂಡಿಸಿ ಮತದಾರರ ಮನಸೂರೆಗೊಳ್ಳುವಂತೆ ನಿರ್ಮಿಸಲಾಗಿದೆ.

ಪಿರಿಯಾಪಟ್ಟಣದ ಪಂಚವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಟಿಕಯುಕ್ತ ಆಹಾರ ಮತ್ತು ಮಕ್ಕಳ ಸುರಕ್ಷತೆ ವಿಷಯಾಧಾರಿತ ಮತಗಟ್ಟೆ, ಕೆ.ಆರ್.ನಗರದ ಚೌಕಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗತಿಕ ತಾಪಮಾನ ವಿಷಯಾಧಾರಿತ ಮತಗಟ್ಟೆ, ಹುಣಸೂರಿನ ಬನ್ನಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಸಂರಕ್ಷಣೆ ವಿಷಯಾಧಾರಿತ ಮತಗಟ್ಟೆ, ಎಚ್.ಡಿ. ಕೋಟೆಯ ಕಾಕನಕೋಟೆ ಅರಣ್ಯ ಕಚೇರಿಯಲ್ಲಿ ವನಸಿರಿ ನಾಡು ವಿಷಯಾಧಾರಿತ ಮತಗಟ್ಟೆ, ನಂಜನಗೂಡು ಹೆಮ್ಮರಗಾಲ ಮತ್ತು ಬಂಕಹಳ್ಳಿಯಲ್ಲಿ ಕೃಷಿ ಖುಷಿ ವಿಷಯಾಧಾರಿತ ಮತಗಟ್ಟೆ, ತಿ.ನರಸೀಪುರ ತಾಲೂಕಿನ ಕಲಿಯೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಹಳೇ ಕಟ್ಟಡ) ಹಸಿರೇ ಉಸಿರು ವಿಷಯಾಧಾರಿತ ಮತಗಟ್ಟೆ, ವರುಣಾ ಕ್ಷೇತ್ರದ ಮಲ್ಲೂಪುರದಲ್ಲಿ ವರ್ಲಿ ಕಲೆ ವಿಷಯಾಧಾರಿತ ಮತಗಟ್ಟೆ, ಚಾಮುಂಡೇಶ್ವರಿ ಕ್ಷೇತ್ರದ ಯಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಕಲೆ ಮತ್ತು ಗ್ರಾಮೀಣ ಕ್ರೀಡೆ ವಿಷಯಾಧಾರಿತ ಮತಗಟ್ಟೆ, ಕೃಷ್ಣರಾಜ ಕೇತ್ರ ಕುರುಬರಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಸಿರಿ ವಿಷಯಾಧಾರಿತ ಮತಗಟ್ಟೆ, ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿಜಯನಗರದ ಭಾರತೀಯ ವಿದ್ಯಾಭವನದಲ್ಲಿ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆ, ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಮೆಸ್ಕೊ ಐಟಿಐನಲ್ಲಿ ಮಹಿಳಾ ಸಬಲೀಕರಣ ದೇಶದ ಪ್ರಗತಿಗೆ ಕಾರಣ ವಿಷಯಾಧಾರಿತ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.