ಜಿಲ್ಲೆ

ʼಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿ ಬೇಕಿರಲಿಲ್ಲʼ; ತಮನ್ನಾ ಆಯ್ಕೆಯನ್ನು ಟೀಕಿಸಿದ ನಟಿ ರಮ್ಯಾ | Social Media Post

Social Media Post: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ ಅಧಿಕೃತ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇದಕ್ಕೆ ತಮನ್ನಾರಿಗೆ 6.20 ಕೋಟಿ ರೂ. ಕೊಡುತ್ತಿರುವುದು ಕನ್ನಡಿಗರನ್ನ ಇನ್ನಷ್ಟು ಕೆರಳಿಸಿದೆ. ಹೀಗಾಗಿ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯದ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿರುವ ಮೈಸೂರು ಸ್ಯಾಂಡಲ್‌ ಸೋಪ್‌ ಉತ್ಪನ್ನವನ್ನು ಪ್ರತಿನಿಧಿಸಲು ಕನ್ನಡದಲ್ಲಿ ಯಾವ ನಟಿಯರೂ ಇರಲಿಲ್ಲವಾ ಎಂದು ಸಾಕಷ್ಟು ಜನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕಿ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಈ ಕುರಿತು ವಿರೋಧ ಪಕ್ಷದ ನಾಯಕರು, ಕನ್ನಡ ನಟ-ನಟಿಯರೂ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ನಟಿ, ಮಾಜಿ ಸಂಸದೆ, ಕಾಂಗ್ರೆಸ್‌ ನಾಯಕಿ ರಮ್ಯಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಪೋಸ್ಟ್‌ವೊಂದು ಇದೀಗ ವೈರಲ್​​ ಆಗುತ್ತಿದೆ.

ನಟಿ ರಮ್ಯಾ ಪೋಸ್ಟ್‌

ಒಂದು ಉತ್ಪನ್ನಗಳನ್ನ ಪ್ರಚಾರ ಮಾಡಲೂ ಸಹ ಸಾಕಷ್ಟು ದಾರಿಗಳು ಇವೆ. ಅದರಲ್ಲೂ ದಶಕಗಳಷ್ಟು ಹಳೆಯದಾಗಿ, ಸಾಂಪ್ರದಾಯಿಕ ಮನ್ನಣೆ ಪಡೆದಿರುವ ಉತ್ಪನ್ನಗಳಿಗೆ ರಾಯಭಾರಿ ನೇಮಕ ಅಗತ್ಯವೇ ಇರುವುದಿಲ್ಲ. ಹಾಗೊಮ್ಮೆ ರಾಯಭಾರಿ ನೇಮಕ ಮಾಡಿದ್ದೇ ಆದರೆ ಅದು ತೆರಿಗೆದಾರರ ಹಣವನ್ನ ವ್ಯರ್ಥ ಮಾಡಿದಂತೆ.

ಯಾವುದೇ ಒಬ್ಬ ಸೆಲೆಬ್ರಿಟಿ ಒಂದು ಉತ್ಪನ್ನವನ್ನ ಬಳಸಿದಾಕ್ಷಣ, ಅದನ್ನ ನೋಡಿ ಜನಸಾಮಾನ್ಯರು ಅದೇ ಪ್ರೊಡಕ್ಟ್‌ನ್ನ ಖರೀದಿಸುವ ಕಾಲ ಇದಲ್ಲ. ಈ ಸೋಪ್‌ ಅಥವಾ ಯಾವುದೇ ಉತ್ಪನ್ನ ಬಳಸಿದಾಕ್ಷಣ ನಾವೂ ಅದರ ರಾಯಭಾರಿಯಂತೆ ಆಗುವುದಿಲ್ಲ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಮೈಸೂರು ಸ್ಯಾಂಡಲ್‌ ಸೋಪ್‌ ಬಳಸುವ ಪ್ರತಿಯೊಬ್ಬರೂ ಅದರ ರಾಯಭಾರಿಗಳೇ. ಈ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿಯೇ. ಮೈಸೂರ್‌ ಸ್ಯಾಂಡಲ್‌ನ್ನ ಜಗತ್ತಿಗೆ ಪಸರಿಸಿ ಎಂದು ಕನ್ನಡಿಗರಿಗೆ ಹೇಳಿ..ಅವರು ಪ್ರೀತಿಯಿಂದ ಮಾಡುತ್ತಾರೆ. ನಮ್ಮ ಹೆಮ್ಮೆ ಎಂದು ಭಾವಿಸಿ ಯಾವುದೇ ಖರ್ಚಿಲ್ಲದೆ ಆ ಕೆಲಸ ಮಾಡಿಕೊಡುತ್ತಾರೆ. ಉದಾಹರಣೆಗೆ, ಆಪಲ್‌ ಇಂದು ಬಹುದೊಡ್ಡ ಬ್ರ್ಯಾಂಡ್‌ ಆಗಿ ಬೆಳೆದಿದೆ. ಆದರೆ ಎಂದಿಗೂ ಬ್ರ್ಯಾಂಡ್‌ ಅಂಬಾಸಿಡರ್‌ಗಾಗಿ ಹಣ ವ್ಯಯ ಮಾಡಿಲ್ಲʼ ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ ಹಾಕಿದ್ದಾರೆ. ಮೈಸೂರ್‌ ಸ್ಯಾಂಡಲ್‌ ಸೋಪ್‌ಗೆ ರಾಯಭಾರಿಯೇ ಬೇಕಿರಲಿಲ್ಲ ಎಂಬರ್ಥದಲ್ಲಿ ನಟಿ ರಮ್ಯಾ ಪೋಸ್ಟ್‌ ಮಾಡಿದ್ದಾರೆ. (ಏಜೆನ್ಸೀಸ್​)