ಜಿಲ್ಲೆ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮೈಸೂರಿಗೆ 17ನೇ ಸ್ಥಾನ

ಮೈಸೂರು: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿದ್ದರೂ, ಉತ್ತೀಣರಾದವರ ಸಂಖ್ಯೆ ಏರಿಕೆಯಾಗಿ ಫಲಿತಾಂಶದಲ್ಲಿ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಕುವೆಂಪುನಗರದ ಆದಿಚುಂಚನಗಿರಿ ಪಿಯು (ಬಿಜಿಎಸ್) ಕಾಲೇಜಿನ ಕೆ.ಎಚ್.ಉರ್ವಿಶ್ ಪ್ರಶಾಂತ್ ಹಾಗೂ ಮಹಾಜನ ವಿದ್ಯಾಸಂಸ್ಥೆಗೆ ಸೇರಿದ ಮೇಟಗಳ್ಳಿಯ ಆರ್‌ವಿಪಿಬಿ ಕಾಲೇಜಿನ ಜಾಹ್ನವಿ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉರ್ವಿಶ್ ಪ್ರಶಾಂತ್ ಅವರು ಕನ್ನಡ, ಇಂಗ್ಲಿಷ್, ಭೌತವಿಜ್ಞಾನದಲ್ಲಿ ತಲಾ 99, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವ ವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ.
ಜಾಹ್ನವಿ ಅವರು ಸಂಸ್ಕೃತ, ಗಣಿತ, ಜೀವ ವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ ತಲಾ 100 ಅಂಕ, ಇಂಗ್ಲಿಷ್‌ನಲ್ಲಿ 99 ಮತ್ತು ಭೌತವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಮಹಾರಾಣಿ ಪಿಯು ಕಾಲೇಜಿನ ಶ್ರೇಯಾ ಗಣೇಶ್ ಅಯ್ಯರ್ 5ನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಗರದ ಸದ್ವಿದ್ಯಾ ಪಿಯು ಕಾಲೇಜಿನ ಸ್ವಾತಿ ಎಸ್. ಭಟ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವ್ಯವಹಾರಿಕ ಅಧ್ಯಯನ, ಅಕೌಂಟೆನ್ಸಿ, ಗಣಿತ ಹಾಗೂ ಸಂಸ್ಕೃತದಲ್ಲಿ ತಲಾ 100, ಇಂಗ್ಲಿಷ್‌ನಲ್ಲಿ 96, ಸಂಖ್ಯಾಶಾಸ್ತ್ರದಲ್ಲಿ 98 ಅಂಕ ಪಡೆದಿದ್ದಾರೆ.
ಕಳೆದ ಸಾಲಿನಲ್ಲಿ ಜಿಲ್ಲೆ 13ನೇ ಸ್ಥಾನದಲ್ಲಿದ್ದರೂ ಶೇ.79.89 ಫಲಿತಾಂಶ ಬಂದಿತ್ತು. ಆದರೆ ಈ ಸಾಲಿನಲ್ಲಿ ಟಾಪ್‌ಟೆನ್ ಸ್ಥಾನ ಪಡೆಯಬೇಕು ಎನ್ನುವ ಜಿಲ್ಲೆಯ ಸ್ಥಾನದಲ್ಲಿ ಇಳಿಕೆ ಕಂಡರೂ ಶೇ.83.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಈ ಮೂರು ವಿಭಾಗದಿಂದ ಒಟ್ಟು 30,756 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 25,566 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತೀಣರಾಗಿದ್ದಾರೆ. 15568 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11188 ವಿದ್ಯಾರ್ಥಿಗಳು ಪಾಸ್ ಅಗುವ ಮೂಲಕ ಶೇ. 71.87 ರಷ್ಟು ಫಲಿತಾಂಶ ಬಂದಿದೆ.
18,308 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದು, 15653 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ.85.50 ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಪರೀಕ್ಷೆ ತೆಗೆದುಕೊಂಡಿದ್ದ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ.
ಖಾಸಗಿಯಾಗಿ 1268 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 557 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 43.93ರಷ್ಟು ಫಲಿತಾಂಶ ಪಡೆದಿದ್ದಾರೆ. ಇನ್ನೂ ಪುರ್ನಾವತಿ 1852 ವಿದ್ಯಾರ್ಥಿಗಳಲ್ಲಿ 718 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕೇವಲ ಶೇ.38.77ರಷ್ಟು ಸಾಧನೆ ಮಾಡಿದ್ದಾರೆ.
ಕಲಾ ವಿಭಾಗ ವಿಭಾಗದಲ್ಲಿ 6550 ವಿದ್ಯಾರ್ಥಿಗಳಲ್ಲಿ 4563 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.69.66ರಷ್ಟು ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 10341 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8706 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 84.19ರಷ್ಟು ಫಲಿತಾಂಶ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 13,865 ವಿದ್ಯಾರ್ಥಿಗಳಲ್ಲಿ 12297 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 88.69 ಫಲಿತಾಂಶ ಪಡೆದಿದ್ದಾರೆ.
ನಗರ ಪ್ರದೇಶದಲ್ಲಿ ಹೆಚ್ಚು ಫಲಿತಾಂಶ:
ಪಿಯುಸಿ ಪರೀಕ್ಷೆಯಲ್ಲಿ ನಗರ ಪ್ರದೇಶದ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಹೆಚ್ಚಿನ ಸಾಧನೆ ಮಾಡಿದ್ದಾರೆ. 26885 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 22579 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 83.98ರಷ್ಟು ಸಾಧನೆ ಮಾಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಕೇವಲ 3871 ವಿದಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದು, 2987 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.77.16ರಷ್ಟು ಫಲಿತಾಂಶ ಬಂದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮರಿಸ್ವಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.