ಜಿಲ್ಲೆ

ಮೈಸೂರು ರೈಲ್ವೆ ನಿಲಾಣಕ್ಕೆ 140 ವರ್ಷ ಪೂರ್ಣ

ಮೈಸುರು; ಮೈಸೂರು ರೈಲ್ವೆ ನಿಲ್ದಾಣ 140 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣದಲ್ಲಿ ಸರಳ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಮೈಸೂರು ರೈಲ್ವೆ ನಿಲ್ದಾಣ ನಡೆದು ಬಂದ ದಾರಿಯ ಕುರಿತು ಬೆಳಕು ಚೆಲ್ಲಲಾಯಿತು. ಇದಕ್ಕೆ ಸಂಬಂಧಿಸಿದ ಮಾದರಿಗಳನ್ನೂ ಪ್ರದರ್ಶಿಸಲಾಯಿತು. ರೈಲ್ವೆಯ ಕೊಡುಗೆ, ಪರಂಪರೆ, ಸ್ಥಳಗಳ ನಡುವೆ ಸಂಪರ್ಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮೈಸೂರಿನ ಅಭಿವೃದ್ಧಿಯನ್ನು ಕಾರ್ಯಕ್ರಮ ಪ್ರತಿಬಿಂಬಿಸಿತು.


ಮೈಸೂರು ರೈಲು ನಿಲ್ದಾಣವನ್ನು 1881ರ ಡಿಸೆಂಬರ್ 1ರಂದು ಅಂದಿನ ಮೈಸೂರು ರಾಜ್ಯ ರೈಲ್ವೆಯಿಂದ ಔಪಚಾರಿಕವಾಗಿ ತೆರೆಯಲಾಯಿತು. ಈ ರೈಲು ಯೋಜನೆಯಲ್ಲಿ 86 ಮೈಲಿಗಳ ಮೀಟರ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರ ಮತ್ತು ಮೈಸೂರಿನ ನಡುವೆ ಸಂಪರ್ಕ ಏರ್ಪಡಿಸಲಾಯಿತು. ಈ ರೈಲು ಮಾರ್ಗವು ಆರಂಭದಲ್ಲಿ ಕ್ಷಾಮ ಪರಿಹಾರ ಉಪಕ್ರಮವಾಗಿ ಕಾರ್ಯನಿರ್ವಹಿಸಿತು.

ದೂರದ ಪ್ರದೇಶಗಳಿಗೆ ಆಹಾರ ಸಾಗಿಸುವುದು ಮತ್ತು ಸಂಬಳ, ಕೂಲಿಗೆ ಬದಲಾಗಿ ಧಾನ್ಯಗಳನ್ನು ನೀಡಿ ರೈಲು ಮಾರ್ಗದ ನಿರ್ಮಾಣದಲ್ಲಿ ಜನರನ್ನು ತೊಡಗಿಸಿಕೊಳ್ಳುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು ಎಂದು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.


ನೈಋತ್ಯ ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಮಾತನಾಡಿ, ಹಿಂದೆ ಕ್ಷಾಮಗಳಿಗೆ ಸಾಕ್ಷಿಯಾದ ಈ ಪ್ರದೇಶದ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಲು 19ನೇ ಶತಮಾನದ ಉತ್ತರಾರ್ಧದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಾಪಿಸಲು ಆಗಿನ ಮೈಸೂರು ಸಾಮ್ರಾಜ್ಯದ ಆಡಳಿತಗಾರರ ದೂರಾಲೋಚನೆ ಮತ್ತು ದೂರದೃಷ್ಟಿಯನ್ನು ಸ್ಮರಿಸಿಕೊಂಡರು.


ಮೈಸೂರು ರೈಲು ನಿಲ್ದಾಣವು ಶೀಘ್ರದಲ್ಲೇ ವಿಶ್ವದರ್ಜೆಯ ನಿಲ್ದಾಣವಾಗುವ ಹೊಸ್ತಿಲಲ್ಲಿದ್ದು, ಭವಿಷ್ಯದಲ್ಲಿ ಜನದಟ್ಟಣೆ ನಿಭಾಯಿಸಲು ನಿಲ್ದಾಣವನ್ನು ಸಜ್ಜುಗೊಳಿಸುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ, ಆಧುನಿಕ ಸೌಕರ್ಯ ಒದಗಿಸಲಾಗುವುದು ಎಂದರು.


ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಈ ಸ್ಮರಣೀಯ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ.ಲೋಹಿತೇಶ್ವರ ಸೇರಿದಂತೆ ಇತರರಿದ್ದರು.