ಜಿಲ್ಲೆ

ಮೈಸೂರು: ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡಬೇಕು, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಬಾಕಿ ಮನ್ನಾ ಮಾಡಬೇಕು, ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಭತ್ತ ಕಟಾವು ಯಂತ್ರಗಳ ಕಟಾವಿಗೆ ಬೆಲೆ ನಿಗದಿ ಪಡಿಸಬೇಕು, ಕಟಾವು ಸಂದರ್ಭ ದಲ್ಲಾಳಿಗಳ ಹಾವಳಿ ತಪ್ಪಿಸಿ ಯಂತ್ರವು ಮಾಲೀಕರ ನಿಯಂತ್ರಣದಲ್ಲಿ ಇರಬೇಕು, ಭತ್ತ ಖರೀದಿ ಕೇಂದ್ರವನ್ನು ಭತ್ತ ಕಟಾವು ಮಾಡುವುದಕ್ಕಿಂತಲೂ ಮುಂಚೆಯೇ ತೆರೆಯಬೇಕು, ಪ್ರತಿ ಟನ್ ಕಬ್ಬಿಗೆ 4,500 ರೂ. ದರ ನಿಗದಿ ಪಡಿಸಬೇಕು. ಕಬ್ಬಿಗೆ ನಿಗದಿ ಪಡಿಸಿರುವ ದರ ಮೇಲೆ ರಾಜ್ಯ ಸರ್ಕಾರ 500 ರೂ.ಗಳನ್ನು ನೀಡಬೇಕು, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ರಿಯಾಯಿತಿ ನೀಡಬೇಕು, ಸರ್ಕಾರ ಕೂಡಲೇ ಕಬ್ಬು ಬೆಳೆಗಾರರ ಸಭೆ ಕರೆದು ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಅಶ್ವಥ್ ನಾರಾಯಣ ರಾಜೇ ಅರಸ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ನೇತ್ರಾವತಿ, ಪಿ. ಮರಂಕಯ್ಯ, ಆನಂದೂರು ಪ್ರಭಾಕರ್, ಕರೊಟ್ಟಿ ಕುಮಾರಸ್ವಾಮಿ, ಸಿರಮಳ್ಳಿ ಸಿದ್ದಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.