ಜಿಲ್ಲೆ

ಮಂಡ್ಯ ಸಮಸ್ಯೆಗೆ ಸ್ಪಂದಿಸಿದ ಮೈಸೂರು ಸಂಸದ: ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ಪ್ರತಾಪ್ ಸಿಂಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನಿಲುಗಡೆಗೊಳಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕೆನ್ನುವ ಮನವಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ ಸ್ಪಂದಿಸಿದ್ದಾರೆ.

ಸಮಸ್ಯೆ ಸಂಬಂಧ ಜಿಲ್ಲಾ ಪದವೀಧರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಶಿಧರ್‌ಗೌಡ ಅಜ್ಜಹಳ್ಳಿ ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಫೋಸ್ಟ್ ಮಾಡಿ ಅದನ್ನು ಪ್ರತಾಪ್‌ಸಿಂಹ ಅವರಿಗೆ ಟ್ಯಾಗ್ ಮಾಡಿದರು. ನಿಮ್ಮ ಪ್ರಯತ್ನದ ಲವಾಗಿ ಮಂಗಳೂರು ಜಂಕ್ಷನ್‌ವರೆಗಿದ್ದ 16585 ಸಂಖ್ಯೆಯ ರೈಲನ್ನು ಮುರುಡೇಶ್ವರದವರೆಗೂ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಮುರುಡೇಶ್ವರ ದೇವಸ್ಥಾನ ನೋಡಿಕೊಂಡು ಬರಲು ಜನರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಿದೆ. ಆದರೆ ಈ ರೈಲು ಮಂಡ್ಯ ಜಿಲ್ಲಾ ಕೇಂದ್ರ ಹೊರತುಪಡಿಸಿ ತಾಲೂಕು ಕೇಂದ್ರವಾದ ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ನಿಲುಗಡೆಯಾಗದಿರುವುದು ಬೇಸರದ ವಿಷಯ. ಆದ್ದರಿಂದ ತಾಲೂಕು ಕೇಂದ್ರದಲ್ಲಿಯೂ ನಿಲುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಫೋಸ್ಟ್ ಗೆ ಕೆಲವೇ ಕ್ಷಣದಲ್ಲಿ ಸ್ಪಂದಿಸಿರುವ ಸಂಸದ ಪ್ರತಾಪ್‌ಸಿಂಹ, ಸಮಸ್ಯೆ ಕುರಿತಂತೆ ಅರ್ಜಿ ಬರೆದು ಕಳುಹಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಸಂಸದರ ತುರ್ತು ಸ್ಪಂದನೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.