ಜಿಲ್ಲೆ

ಮೈಸೂರು ಮೇಯರ್ ಅದಾಲತ್‌ಗೆ ಜನಸ್ಪಂದನೆ

  • ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ
  • ಅರ್ಜಿ ವಿಲೇವಾರಿಗೆ ತಪ್ಪಿದ ಕಚೇರಿ ಅಲೆದಾಟ

ಸದೇಶ್ ಕಾರ್ಮಾಡ್ ಮೈಸೂರು
ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುವುದಿಲ್ಲ. ಒಂದು ಅರ್ಜಿ ವಿಲೇವಾರಿಗೆ ಹತ್ತಾರು ಬಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ಸಾಮಾನ್ಯ. ನಗರ ಪಾಲಿಕೆಯಲ್ಲೂ ಇಂತಹ ವಿಳಂಬ ನೀತಿಗೆ ಅದಾಲತ್ ಮೂಲಕ ಮೇಯರ್ ಶಿವಕುಮಾರ್ ಚಾಟಿ ಬೀಸಿದ್ದಾರೆ.

ಹಲವಾರು ಜನರು ತಾವು ಸಲ್ಲಿಸಿದ ಅರ್ಜಿ ವಿಲೇವಾರಿ ಮಾಡಿಸಿಕೊಳ್ಳಲು ಕೆಲಸ ಕಾರ್ಯಗಳನ್ನು ಬಿಟ್ಟು ಪಾಲಿಕೆ ವಲಯ ಕಚೇರಿಗೆ ಅಲೆಯುವ ಚಿತ್ರಣ ಸಾಮಾನ್ಯವಾಗಿ ಕಂಡು ಬರುತಿತ್ತು. ಇದರಿಂದ ಜನರ ಸಮಯ, ಹಣ ಎಲ್ಲವೂ ವ್ಯರ್ಥವಾಗುತಿತ್ತು. ವಿಶೇಷವಾಗಿ ಅನಕ್ಷರಸ್ಥರು, ಅಂಗವಿಕಲರು, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರು ಕಚೇರಿಗಳಿಗೆ ಅಲೆಯುವ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿ ಸುತ್ತಿದ್ದರು.

ಈ ಹಿಂದೆ ಪಾಲಿಕೆ ಮುಖ್ಯ ಕಚೇರಿ, ವಲಯ ಕಚೇರಿಗಳಲ್ಲಿ ಹಲವಾರು ಅರ್ಜಿಗಳು ತಿಂಗಳಾನುಟ್ಟಗಲೇ ವಿಲೇವಾರಿ ಆಗುತ್ತಿರಲಿಲ್ಲ. ಸಕಾರಣವಿಲ್ಲದೆ 8-10 ತಿಂಗಳು ಕಾಲ ಅರ್ಜಿ ವಿಲೇವಾರಿ ಮಾಡದೆ ಇರುವ ಕುರಿತು ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ಪಾಲಿಕೆ ಅದಾಲತ್ ಪ್ರಾರಂಭಿಸಲು ನಿರ್ಧರಿಸಿದರು. ಪಾಲಿಕೆ ಮುಖ್ಯ ಕಚೇರಿಯಲ್ಲಿ ‘ಪಾಲಿಕೆ ಅದಾಲತ್’ ನಡೆಸಿ ಜನರ ಅರ್ಜಿಗಳನ್ನು ವಿಲೇವಾರಿ ಮಾಡಿದರು. ಇದಾದ ನಂತರ 9 ವಲಯ ಕಚೇರಿಗಳಲ್ಲಿ ‘ವಲಯ ಅದಾಲತ್’ ನಡೆಸಿದರು. ಆ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದರು.

ಪಾಲಿಕೆ ವಲಯ ಕಚೇರಿಗೆ ಅಲೆದು ಸಾಕಾಗಿದ್ದ ಹಲವಾರು ಜನರು ‘ವಲಯ ಅದಾಲತ್’ಗೆ ಆಗಮಿಸಿ ಅರ್ಜಿಗಳನ್ನು ವಿಲೇವಾರಿ ಮಾಡಿಸಿಕೊಂಡರು. ವಲಯ ಅದಾಲತ್‌ನಲ್ಲಿ ಇದುವರೆಗೆ 500ಕ್ಕೂ ಹೆಚ್ಚು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಅರ್ಜಿಗಳನ್ನು ವಿಲೇ ವಾರಿ ಮಾಡಲಾಗಿದೆ. ಪಾಲಿಕೆ ಅದಾಲತ್ ಹಾಗೂ ವಲಯ ಅದಾಲತ್‌ಗೆ ಉತ್ತಮ ಜನ ಸ್ಪಂದನೆ ದೊರೆಯಲು ಪ್ರಾರಂಭವಾದ ನಂತರ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಕೆಲವರು ಮೇಯರ್‌ಗೆ ಕರೆ ಮಾಡಿ ‘ನಮಗೆ ಅದಾಲತ್‌ನಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ, ನಾವು ಸಲ್ಲಿಸಿದ ಅರ್ಜಿಗಳು ಪಾಲಿಕೆ ವಲಯ ಕಚೇರಿಗಳಲ್ಲಿ ಸಕಾಲದಲ್ಲಿ ವಿಲೇವಾರಿ ಆಗುತ್ತಿಲ್ಲ. ಇದಕ್ಕೊಂದು ಪರಿಹಾರ ಕಲ್ಪಿಸಿ’ ಎಂದು ಸಾಕಷ್ಟು ಜನರು ಮನವಿ ಮಾಡಿಕೊಂಡರು.

ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಮೈಸೂರಿಗರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಸಲುವಾಗಿ ‘ಮೇಯರ್ ಆನ್‌ಲೈನ್ ಅದಾಲತ್’ ಪ್ರಾರಂಭಿಸಲಾಯಿತು. ಮೇಯರ್ ಆನ್‌ಲೈನ್ ಅದಾಲತ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 111 ಜನರು ಅರ್ಜಿ ಸಲ್ಲಿಸಿ ಅರ್ಜಿಗಳನ್ನು ವಿಲೇವಾರಿ ಮಾಡಿಸಿಕೊಂಡಿದ್ದಾರೆ. ವಿಶೇಷವಾಗಿ ಕೊಲ್ಕತ್ತದಿಂದ ಸಾರ್ವಜನಿಕರೊಬ್ಬರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಂಡಿದ್ದಾರೆ.

ವಲಯ ಅದಾಲತ್ ನಡೆಸುವ ಸಂದರ್ಭ 8-10 ತಿಂಗಳು ಸಕಾರಣವಿಲ್ಲದೆ ಅರ್ಜಿ ವಿಲೇವಾರಿ ಮಾಡಲು ವಿಳಂಬ ನೀತಿ ತೋರಿದ ಅಧಿಕಾರಿಯೊಬ್ಬರನ್ನು ಮೇಯರ್ ವರ್ಗಾವಣೆ ಮಾಡುವ ಮೂಲಕ ಇತರೆ ಅಧಿಕಾರಿಗಳಿಗೆ ವರ್ಗಾವಣೆಯ ಎಚ್ಚರಿಕೆಯನ್ನು ನೀಡಿ ದರು. ಹೀಗಾಗಿ ಹಲವಾರು ಅದಾಲತ್‌ಗಳಲ್ಲಿ ಅರ್ಜಿಗಳ ವಿಲೇವಾರಿ ತ್ವರಿತಗತಿಯಲ್ಲಿ ನಡೆಯಿತು. ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲೇ ಬೇಕು, ಮಾಡಲು ಸಾಧ್ಯವಾಗದೆ ಇದ್ದರೆ ಹಿಂಬರಹ ನೀಡಬೇಕು. 8-10 ತಿಂಗಳು ಕಾಯಿಸಿದ ನಂತರ ಹಿಂಬರಹ ನೀಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆಯನ್ನು ಮೇಯರ್ ನೀಡಿದ್ದಾರೆ.

ಎಲ್ಲ ದಾಖಲೆಗಳು ಸರಿ ಇದ್ದು ಅಧಿಕಾರಿಗಳು ವಿನಾಕಾರಣ ಅಲೆಯುವಂತೆ ಮಾಡಿದರೆ ಇನ್ನು ಮುಂದೆ ವಲಯ ಅದಾಲತ್ ಅಥವಾ ಮೇಯರ್ ಆನ್‌ಲೈನ್ ಅದಾಲತ್‌ನಲ್ಲಿ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮೇಯರ್ ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನಕ್ಕೆ ನಗರದ ಜನರು ಕೈಜೋಡಿಸುವ ಅವಶ್ಯಕತೆ ಇದ್ದು, ಅದಾಲತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅರ್ಜಿಗಳನ್ನು ವಿಲೇವಾರಿ ಮಾಡಿಸಿಕೊಂಡರೆ ಮೇಯರ್ ಪ್ರಯತ್ನಕ್ಕೆ ಸಾರ್ಥಕತೆ ದೊರೆಯುತ್ತದೆ.

ಯಾವ ವಿಭಾಗದಲ್ಲಿ ಎಷ್ಟು ಅರ್ಜಿ ವಿಲೇವಾರಿ?
ಕಂದಾಯ : 22
ಸ್ವಚ್ಛತೆ :11
ಒಳಚರಂಡಿ :15
ಕುಡಿಯುವ ನೀರು : 9
ಆಶ್ರಯ :5
ನಗರ ಯೋಜನೆ :8
ತಾಂತ್ರಿಕ :12
ಇತರೆ: 29

ಪಾಲಿಕೆ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಹಲವಾರು ತಿಂಗಳು ಕಳೆದರೂ ಸಕಾರಣವಿಲ್ಲದೆ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೆ ಇರುವ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅದಾಲತ್ ಹಾಗೂ ನಂತರ ವಲಯ ಅದಾಲತ್ ನಡೆಸಲಾಯಿತು. ಈ ಅದಾಲತ್‌ಗೆ ಬಾರಲು ಸಾಧ್ಯವಾಗದೆ ಇರುವವರಿಗೋಸ್ಕರ ‘ಮೇಯರ್ ಆನ್‌ಲೈನ್ ಅದಾಲತ್’ ನಡೆಸಲಾ ಯಿತು. ನಗರದ ನಿವಾಸಿಯಾಗಿದ್ದು, ಉದ್ಯೋಗ ನಿಮಿತ್ತ ಹೊರ ಜಿಲ್ಲೆಗಳಲ್ಲಿ, ಹೊರ ರಾಜ್ಯ ಅಥವಾ ವಿದೇಶದಲ್ಲಿ ಇರುವವರಿಗೆ ಆನ್‌ಲೈನ್ ಅದಾಲತ್‌ನಿಂದ ಸಾಕಷ್ಟು ಅನುಕೂಲವಾಗಿದೆ. ಪ್ರಥಮ ಬಾರಿಗೆ ನಡೆಸಿದ ಆನ್‌ಲೈನ್ ಅದಾಲತ್‌ನಲ್ಲಿ ಒಟ್ಟು 111 ಅರ್ಜಿಗಳನ್ನು ಸ್ವೀಕೃತವಾಗಿದ್ದು, ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಶಿವಕುಮಾರ್, ಮೇಯರ್