ಜಿಲ್ಲೆ

ಮೇಯರ್ ಸ್ಥಾನಕ್ಕೆ 3 ಪಕ್ಷಗಳಿಂದ ಪ್ರತ್ಯೇಕ ಸ್ಪರ್ಧೆ…!

Mysuru

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಡುವೆ ಮೈತ್ರಿ ಸಾಧ್ಯತೆ ಕಡಿಮೆ

ಕುತೂಹಲ ಕೆರಳಿಸಿದ ಸೆ.6ರ ಮೇಯರ್ ಚುನಾವಣೆ

ಸದೇಶ್ ಕಾರ್ಮಾಡ್ ಮೈಸೂರು
ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ, ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಮೇಯರ್ ಸ್ಥಾನ ಅಲಂಕರಿ ಸುವ ಜೆಡಿಎಸ್‌ನ ಕನಸು ಭಗ್ನಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಹ ಸ್ವತಂತ್ರವಾಗಿ ಸ್ಪರ್ಧಿಸುವ ಅನಿವಾರ್ಯತೆಗೆ ಸಿಲುಕಿದೆ.
ನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಏರಲು ಒಂದು ಪಕ್ಷಕ್ಕೆ ಮತ್ತೊಂದು ಪಕ್ಷದ ಬೆಂಬಲ ಅನಿವಾರ್ಯ. ಆದರೆ, ಈ ಬಾರಿ ಜೆಡಿಎಸ್‌ನೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಶನಿವಾರ ನಗರದಲ್ಲಿ ಪ್ರತ್ಯೇಕವಾಗಿ ಪಾಲಿಕೆ ಸದಸ್ಯರ ಸಭೆ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದರು.

ಕಳೆದ ಬಾರಿ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ದವು. ಹೀಗಾಗಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಬಿಜೆಪಿ ಸಹಜವಾಗಿಯೇ ಮೇಯರ್ ಸ್ಥಾನ ಅಲಂಕರಿಸಿತು. ಈ ಬಾರಿಯೂ ಅದೇ ತಂತ್ರಗಾರಿಕೆಯನ್ನು ಅನುಸರಿಸಲು ಬಿಜೆಪಿ ನಿರ್ಧರಿಸಿದೆ. ಮೂರು ಪಕ್ಷಗಳ ಪ್ರತ್ಯೇಕ ಸ್ಪರ್ಧೆಯಿಂದ ಸೆ.6 ರಂದು ನಡೆಯುವ ಮೇಯರ್, ಉಪಮೇಯರ್ ಚುನಾವಣೆ ಕುತೂಹಲ ಕೆರಳಿಸಿದೆ.

ಪಾಲಿಕೆಯ ಬಲಾಬಲ ಹೀಗಿದೆ: ಪಾಲಿಕೆಯಲ್ಲಿ 65 ಪಾಲಿಕೆ ಸದಸ್ಯರು ಇದ್ದು, ಇದರೊಂದಿಗೆ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 11 ಮತದಾರರು ಇದ್ದಾರೆ. ಹೀಗಾಗಿ ಪಾಲಿಕೆಯ ಸದಸ್ಯ ಬಲ 76 ಇದ್ದು, ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 39 ತಲುಪುವುದು ಅನಿವಾರ್ಯ. ಆದರೆ, ಮೂರು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಈ ಮ್ಯಾಜಿಕ್ ನಂಬರ್‌ನ ಅವಶ್ಯಕತೆ ಇರುವುದಿಲ್ಲ. ಆ ಸಂದರ್ಭ ಅತಿ ಹೆಚ್ಚು ಮತ ಪಡೆದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ.

ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷೇತರ ಸದಸ್ಯರಾದ ಶಿವಕುಮಾರ್, ಶ್ರೀನಿವಾಸ್ ಕಾಂಗ್ರೆಸ್ ಪಕ್ಷದೊಂದಿಗೆ, ಮಾ.ವಿ. ರಾಮಪ್ರಸಾದ್ ಬಿಜೆಪಿಯೊಂದಿಗೆ, ಸಮೀವುಲ್ಲಾ ಮತ್ತು ಕೆ.ವಿ. ಶ್ರೀಧರ್ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಎಸ್‌ಪಿ ಸದಸ್ಯೆ ಪಲ್ಲವಿ ಬೇಗಂ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿ ದ್ದಾರೆ. ಬಿಜೆಪಿಯ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೇಯರ್ ಚುನಾವಣೆಯ ಮತದಾರರಾಗಿದ್ದಾರೆ. ಕಾಂಗ್ರೆಸ್‌ನ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಮಧು ಜಿ. ಮಾದೇಗೌಡ, ಎಂ.ಜಿ. ದಿನೇಶ್ ಗೂಳಿಗೌಡ, ಜೆಡಿಎಸ್‌ನ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ ಮತದಾರರಾಗಿದ್ದಾರೆ. ಪಕ್ಷೇತರ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಬಿಜೆಪಿ ಒಟ್ಟು 27, ಕಾಂಗ್ರೆಸ್ ಒಟ್ಟು 26 ಹಾಗೂ ಜೆಡಿಎಸ್ ಒಟ್ಟು 23 ಸದಸ್ಯ ಬಲವನ್ನು ಹೊಂದಿದೆ.

ಪಕ್ಷೇತರರಿಗೆ ಹೆಚ್ಚಿದ ಬೇಡಿಕೆ:
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯರಿಗೆ ಬೇಡಿಕೆ ಹೆಚ್ಚಾ ಗಿದೆ. ಪಕ್ಷೇತರರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಪಕ್ಷೇತರರನ್ನು ಸೆಳೆಯಲು ಮೂರು ಪಕ್ಷಗಳು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುವ ಸಾಧ್ಯತೆ ಇದೆ.
ಈ ಬಾರಿಯ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಯಾರ ಪರ ಮತ ಚಲಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಮೇಯರ್, ಉಪ ಮೇಯರ್ ಆಕಾಂಕ್ಷಿಗಳು
ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನಕ್ಕೆ ಶಿವಕುಮಾರ್, ಶ್ರೀನಿವಾಸ್, ಗೋಪಿ, ಶಾಂತಕುಮಾರಿ, ಅಯಾಜ್ ಪಾಷ, ಸೈಯ್ಯದ್ ಹಸ್ರತ್‌ವುಲ್ಲ, ಉಪ ಮೇಯರ್ ಸ್ಥಾನಕ್ಕೆ ಶೋಭಾ ಸುನಿಲ್, ಹಾಜಿರಾ ಸೀಮಾ ಹಾಗೂ ಉಷಾ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಲ್ಲಿ ಮೇಯರ್ ಸ್ಥಾನಕ್ಕೆ ಎಸ್‌ಬಿಎಂ ಮಂಜು, ಎಂ.ಡಿ.ನಾಗರಾಜ್, ಕೆ.ವಿ. ಶ್ರೀಧರ್, ಸಿ. ರಮೇಶ್ (ರಮಣಿ), ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಅಶ್ವಿನಿ ಅನಂತು ಹಾಗೂ ಲಕ್ಷ್ಮಿ ಶಿವಣ್ಣ, ಉಪ ಮೇಯರ್ ಸ್ಥಾನಕ್ಕೆ ರೇಷ್ಮಾ ಬಾನು, ನಿರ್ಮಲ ಹರೀಶ್, ನಮೃತಾ ರಮೇಶ್, ಪಲ್ಲವಿ ಬೇಗಂ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಬಿ.ವಿ. ಮಂಜುನಾಥ್, ಮಾ.ವಿ.ರಾಮಪ್ರಸಾದ್, ಶಿವಕುಮಾರ್, ಸತೀಶ್, ಸಾತ್ವಿಕ್, ಶರತ್, ಪ್ರಮೀಳಾ ಭರತ್, ಉಪಮೇಯರ್ ಸ್ಥಾನಕ್ಕೆ ಗೀತಾಶ್ರೀ ಯೋಗಾನಂದ, ಚಂಪಕಾ, ರೂಪಾ, ಉಷಾ ನಾರಾಯಣ್ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ನಿಂದ ದೂರು
ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಹೆಸರು ಸೇರ್ಪ ಡೆಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ಈ ಕುರಿತು ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಿಗೆ ಶನಿವಾರ ದೂರು ನೀಡಿದೆ. ದಿನೇಶ್ ಗೂಳಿಗೌಡ ಅವರು ಮಂಡ್ಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೊಂಡಿದ್ದಾರೆ. ಅಲ್ಲದೆ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ ಹಾಗೂ ಅವರು ಮೈಸೂರಿನ ಜೆಪಿ ನಗರದಲ್ಲಿ ಮನೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಸೇರ್ಪಡೆ ಮಾಡಿರುವುದು ಸರಿಯಲ್ಲ. ಇದೇ ರೀತಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಶಾಸಕರು ಮೈಸೂರಿನಲ್ಲಿ ಮನೆ ಹೊಂದಿದ್ದು, ಅವರಿಗೂ ಮತದಾನದ ಹಕ್ಕು ನೀಡಬೇಕಾಗುತ್ತದೆ. ಹೀಗಾಗಿ ಅವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬೇಕು ಎಂದು ಜೆಡಿಎಸ್‌ನ ವಕೀಲ ರವಿಚಂದ್ರೇಗೌಡ ದೂರು ನೀಡಿದರು. ಪ್ರಾದೇಶಿಕ ಆಯುಕ್ತರ ಪರವಾಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ರೂಪಾ ದೂರು ಸ್ವೀಕರಿಸಿದರು.