ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ರಾಜ್ಯ ಸರ್ಕಾರ ಬುಧವಾರ ಮೀಸಲಾತಿ ಪ್ರಕಟಿಸಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬಾರಿ ಯಾರು ಮೇಯರ್ ಆಗಲಿದ್ದಾರೆ ಎಂಬುದಕ್ಕಿಂತ ಮುಖ್ಯವಾಗಿ ಯಾವ ಪಕ್ಷದ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಕುತೂಹಲ ಪ್ರಾರಂಭವಾಗಿದೆ.
ಮೇಯರ್ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ, ಉಪ ಮೇಯರ್ ಸ್ಥಾನ ‘ಬಿಸಿಎ ಮಹಿಳೆ’ಗೆ ಮೀಸಲಾಗಿದೆ. ಮೇಯರ್ ಅಧಿಕಾರಾವಧಿ ಫೆ.23ಕ್ಕೆ ಅಂತ್ಯಗೊಂಡಿತು. ಆದರೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಲು ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ಆರು ತಿಂಗಳು ತಡವಾಗಿ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿ ಮಾಡಲಿದ್ದು, 10 ರಿಂದ 15 ದಿನಗಳ ಒಳಗೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬಂದ ನಂತರ ಕಾಂಗ್ರೆಸ್ ಪಾಳಯದಲ್ಲಿ ಮೇಯರ್ ಚುನಾವಣೆ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಕಂಡು ಬರುತ್ತಿಲ್ಲ. ಮೇಯರ್ ಸ್ಥಾನ ನೀಡಿದರೆ ಮಾತ್ರ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರೆಸಿ ಎಂದು ಕಳೆದ ಬಾರಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು. ಕಾಂಗ್ರೆಸ್ ಈಗಲೂ ಆ ನಿಲುವಿಗೆ ಬದ್ಧವಾಗಿದೆ. ಹೀಗಾಗಿ ಜೆಡಿಎಸ್‌ನ ನಿಲುವಿನ ಆಧಾರದ ಮೇಲೆ ಮೈತ್ರಿ ಮಾತುಕತೆ ಮುಂದುವರೆಸಲು ಕಾಂಗ್ರೆಸ್ ನಿರ್ಧರಿಸಿದೆ. ಕಳೆದ ಬಾರಿ ಬಿಜೆಪಿ ಮೇಯರ್ ಆಗಿ ಆಯ್ಕೆಗೊಳ್ಳಲು ಜೆಡಿಎಸ್ ಪರೋಕ್ಷ ಸಹಕಾರ ನೀಡಿತು. ಹೀಗಾಗಿ ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಡುವ ಸಾಧ್ಯತೆ ಹೆಚ್ಚಿ ದೆ. ಒಂದುವೇಳೆ ಬಿಜೆಪಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದರೆ ಮೈತ್ರಿ ಸಾಧ್ಯತೆ ಬದಲಾಗಲಿದೆ.
ಯಾರಾಗಲಿದ್ದಾರೆ ಮೇಯರ್?:
ಮೇಯರ್ ರೇಸ್‌ನಲ್ಲಿ ಕಾಂಗ್ರೆಸ್‌ನಲ್ಲಿ ಎಚ್.ಎಂ. ಶಾಂತಕುಮಾರಿ, ಆಯಾಜ್ ಪಾಷ, ಸೈಯ್ಯದ್ ಅಸ್ರತುಲ್ಲಾ, ಗೋಪಿ, ಶೋಭಾ ಸುನಿಲ್, ಜೆಡಿಎಸ್‌ನಲ್ಲಿ ಮೇಯರ್ ರೇಸ್‌ನಲ್ಲಿ ಎಸ್‌ಬಿಎಂ ಮಂಜು, ಕೆ.ವಿ. ಶ್ರೀಧರ್, ನಾಗರಾಜ್, ಪ್ರೇಮಾ ಶಂಕರೇಗೌಡ, ಲಕ್ಷ್ಮೀ ಶಿವಣ್ಣ, ಭಾಗ್ಯ ಮಾದೇಶ್, ಅಶ್ವಿನಿ ಅನಂತು ಹಾಗೂ ಇತರರು, ಬಿಜೆಪಿಯಲ್ಲಿ ಬಿ.ವಿ.ಮಂಜುನಾಥ್, ಶಿವಕುಮಾರ್, ಎಂ.ಯು. ಸುಬ್ಬಯ್ಯ ಹಾಗೂ ಇತರರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಪ ಮೇಯರ್ ರೇಸ್‌ನಲ್ಲಿ ಕಾಂಗ್ರೆಸ್‌ನ ಉಷಾ, ಶೋಭಾ ಸುನಿಲ್, ಹಾಜಿರ ಸೀಮಾ, ಬಿಜೆಪಿಯಲ್ಲಿ ಗೀತಾ ಯೋಗಾನಂದ, ಚಂಪಕಾ, ಜಿ. ರೂಪಾ, ಎಂ. ಛಾಯಾದೇವಿ, ಎನ್. ಸೌಮ್ಯ, ಜೆಡಿಎಸ್‌ನಿಂದ ಕೆ. ನಿರ್ಮಲ, ನಮ್ರತಾ ರಮೇಶ್ ಹಾಗೂ ಇತರರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮೈತ್ರಿ ಅನಿವಾರ್ಯ:
65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಇದ್ದಾರೆ. ಯಾವುದೇ ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರಲು ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ಈ ಬಾರಿ ಯಾವ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಇದ್ದ ಸಂದರ್ಭ ಪಾಲಿಕೆಯ ಮೊದಲ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆ ನಡೆಯಿತು. ಆ ಸಂದರ್ಭ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ, ಜೆಡಿಎಸ್‌ನ ಶಫಿ ಅಹ್ಮದ್ ಉಪ ಮೇಯರ್ ಆಗಿ ಆಯ್ಕೆಗೊಂಡರು. ಎರಡನೇ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆದು ಜೆಡಿಎಸ್‌ನ ತಸ್ನಿಂ ಮೇಯರ್ ಅಗಿ, ಕಾಂಗ್ರೆಸ್‌ನ ಸಿ. ಶ್ರೀಧರ್ ಉಪ ಮೇಯರ್ ಆಗಿ ಆಯ್ಕೆಗೊಂಡರು. 3ನೇ ಅವಧಿಯಲ್ಲಿ ಮೇಯರ್ ಸ್ಥಾನವನ್ನು ಜೆಡಿಎಸ್ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಗಿತ್ತು. ಆದರೆ, ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಥನಗೊಂಡು, ಅದರ ಪರಿಣಾಮ ಮೇಯರ್ ಚುನಾವಣೆಯ ಮೇಲೂ ಬಿತ್ತು. ಹಾಗಾಗಿ ಶಾಸಕ ತನ್ವೀರ್ ಸೇಠ್ ಬಿಜೆಪಿಗೆ ಅಧಿಕಾರವನ್ನು ತಪ್ಪಿಸುವ ಸಲುವಾಗಿ ಅಂತಿಮ ಕ್ಷಣದಲ್ಲಿ ಜೆಡಿಎಸ್ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡರನ್ನು ಬೆಂಬಲಿಸುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚಿಸಿದರು. ಆ ಪ್ರಕಾರ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಪರವಾಗಿ ಮತ ಚಲಾಯಿಸಿದರು. ಕಾಂಗ್ರೆಸ್‌ನ ಅನ್ವರ್ ಬೇಗ್ ಉಪ ಮೇಯರ್ ಆಯ್ಕೆಗೊಂಡರು. ಇದು ತನ್ವೀರ್ ಸೇಠ್ ಅವರ ನಡೆ ಸಿದ್ದರಾಮಯ್ಯ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಅದಾದ ನಂತರ ರುಕ್ಮಿಣಿ ಮಾದೇಗೌಡ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮಾಹಿತಿ ಮರೆಮಾಚಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ಹೈಕೋರ್ಟ್ ಅನರ್ಹಗೊಳಿಸಿತು. ನಂತರ ನಡೆದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬಿತ್ತು. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿತು. ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಗೊಂಡರು. ಕಳೆದ ಬಾರಿ ಬಿಜೆಪಿ ಮೇಯರ್ ಆಗಿ ಆಯ್ಕೆಗೊಳ್ಳಲು ಜೆಡಿಎಸ್ ಪರೋಕ್ಷವಾಗಿ ಸಹಕಾರ ನೀಡಿತ್ತು. ಹೀಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ನಮಗೆ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಬಿಜೆಪಿಯ ಮುಂದೆ ಬೇಡಿಕೆ ಇಡುವುದು ಸಹಜ. ಹಾಗಾಗಿ ಈ ಬಿಜೆಪಿಯ ತೀರ್ಮಾನ ಏನು ಎಂಬುದು ಅತ್ಯಂತ ಮುಖ್ಯವಾಗಿದೆ. ಬಿಜೆಪಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದರೆ ಮೈತ್ರಿ ಕಗ್ಗಂಟಾಗಲಿದೆ.
ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮೀಸಲಾತಿ ಪಟ್ಟಿಯನ್ನು ಗುರುವಾರ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿಕೊಟ್ಟು ಚುನಾವಣೆ ನಡೆಸುವಂತೆ ಕೋರಿಕೊಳ್ಳಲಾಗುವುದು. ಪ್ರಾದೇಶಿಕ ಆಯುಕ್ತರು ಚುನಾವಣೆಗೆ ದಿನಾಂಕ ನಿಗದಿ ಮಾಡಲಿದ್ದಾರೆ. 7 ರಿಂದ 15 ದಿನಗಳ ಅವಧಿಯ ನೋಟಿಸ್ ನೀಡಿ ಚುನಾವಣಾ ಸಭೆ ಏರ್ಪಡಿಸಲಾಗುವುದು.
ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ