ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಮುಕ್ತಾಯಗೊಂಡು ಐದು ತಿಂಗಳು ಕಳೆದಿದ್ದು, ಶೀಘ್ರದ ಲ್ಲಿಯೇ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ನೀಡಿದ ಹೇಳಿಕೆಯಿಂದ ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಶೀಘ್ರದಲ್ಲಿಯೇ ಮೀಸಲಾತಿ ಪ್ರಕಟವಾದರೆ ದಸರೆಯೊಳಗೆ ನೂತನ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ 2020 ಮತ್ತು 2021ರಲ್ಲಿ ನಾಡಹಬ್ಬ ದಸರಾ ಉತ್ಸವ ಕೇವಲ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ಅದ್ಧೂರಿಯ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಹೀಗಾಗಿ ನೂತನ ಮೇಯರ್ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವ ಸುಯೋಗ ಪಡೆಯಲಿದ್ದಾರೆ. ಒಂದುವೇಳೆ ಮತ್ತಷ್ಟು ವಿಳಂಬವಾದರೆ ಹಾಲಿ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಕುದುರೆ ಸವಾರಿಯ ಭಾಗ್ಯ ಒಲಿಯಲಿದೆ.
ಸರ್ಕಾರ ವಿವಿಧ ಕಾರಣಗಳನ್ನು ಮುಂದೊಡ್ಡಿ ಮೀಸಲಾತಿ ಪ್ರಕಟಿಸುವುದನ್ನು ಮುಂದೂಡುತ್ತಾ ಬಂದಿದೆ. ಆದರೆ, ಇದೀಗ ಶೀಘ್ರದಲ್ಲಿಯೇ ಮೀಸಲಾತಿ ಪ್ರಕಟಿಸಲಾಗುವುದು, ದಸರೆಯೊಳಗೆ ನೂತನ ಮೇಯರ್ ಬರಲಿದ್ದಾರೆ ಎಂಬ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಯಿಂದ ಪಾಲಿಕೆ ಸದಸ್ಯರು ಉತ್ಸಾಹದಲ್ಲಿ ಇದ್ದಾರೆ. ಮೇಯರ್ ಅಧಿಕಾರಾವಧಿ ಫೆ.23 ರಂದು ಮುಕ್ತಾಯಗೊಂಡಿತು. ಸಾಮಾನ್ಯವಾಗಿ ಮೇಯರ್ ಅಧಿಕಾರಾವಧಿ ಮುಕ್ತಾಯಗೊಂ ಡು ಒಂದೂವರೆಯಿಂದ 2 ತಿಂಗಳ ಒಳಗೆ ಚುನಾವಣೆ ನಡೆಯುತ್ತದೆ. ಆದರೆ, ಬಿಜೆಪಿ ಮೇಯರ್ ಸುನಂದಾ ಪಾಲನೇತ್ರ ಅವರ ಅಧಿಕಾರಾವಧಿ ಮತ್ತಷ್ಟು ದಿನಗಳ ಮಟ್ಟಿಗೆ ವಿಸ್ತರಿಸುವ ಉದ್ದೇಶದಿಂದ ಸರ್ಕಾರ ಮೀಸಲಾತಿ ಪ್ರಕಟಿಸಲು ಹಿಂದೇಟು ಹಾಕಿತು ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಮುಂದಿನ ಮೇಯರ್ ಚುನಾಯಿತರಾಗುವವರೆಗೆ ಹಾಲಿ ಮೇಯರ್ ಮುಂದುವರೆ ಯುತ್ತಾರೆ. ಈ ರೀತಿ ಮುಂದುವರೆಯುವ ಮೇಯರ್‌ಗೆ ಸಾಮಾನ್ಯ ಮೇಯರ್ ರೀತಿಯಲ್ಲಿಯೇ ಎಲ್ಲ ಅಧಿಕಾರಗಳು ಇರುತ್ತವೆ. ಈ ಅಧಿಕಾರವನ್ನು ಬಳಸಿಕೊಂಡು ಸರ್ಕಾರದ ಅನುಮತಿಯೊಂದಿಗೆ ಅಧಿಕಾರಾವಧಿ ಮುಕ್ತಾಯಗೊಂಡರೂ ಮೇಯರ್ ಸುನಂದಾ ಪಾಲನೇತ್ರ ಬಜೆಟ್ ಸಭೆ ನಡೆಸಿದರು. ಅದಾದ ನಂತರ ಕೌನ್ಸಿಲ್ ಸಭೆ ಕರೆದು ಕೇಂದ್ರ ಸರ್ಕಾರದ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಪ್ರತಿಪಕ್ಷಗಳ ವಿರೋಧದ ನಡುವೆಯೂ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಈ ಎಲ್ಲ ಸಭೆಗಳು ಮುಕ್ತಾಯಗೊಳ್ಳುವಷ್ಟರೊಳಗೆ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಲಿಲ್ಲ.
ಎಲ್ಲ ಪಕ್ಷಗಳಿಗೂ ಅಧಿಕಾರ:
ಈ ಬಾರಿಯ ಮೇಯರ್ ಸ್ಥಾನವನ್ನು ಮೂರು ಪಕ್ಷಗಳು ಸಹ ಅನುಭವಿಸಿದ್ದು ವಿಶೇಷ. ಈ ಬಾರಿ ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಕಾಂಗ್ರೆಸ್‌ನ ಬೆಂಬಲದೊಂದಿಗೆ ಮೇಯರ್ ಸ್ಥಾನ ಅಲಂಕರಿಸಿದರು. ಆದರೆ, ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ದಾಖಲೆಗಳನ್ನು ಮರೆಮಾಚಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರ ಸದಸ್ಯತ್ವವನ್ನು ವಜಾಗೊಳಿಸಿತು. ಹೀಗಾಗಿ ತೆರವುಗೊಂಡ ಮೇಯರ್ ಸ್ಥಾನಕ್ಕೆ ಉಪ ಮೇಯರ್ ಕಾಂಗ್ರೆಸ್‌ನ ಅನ್ವರ್ ಬೇಗ್ ನೇಮಕಗೊಂಡರು. ಇದಾದ ನಂತರ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದ ಸಂದರ್ಭ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಂಪೂರ್ಣ ಹಳಸಿತ್ತು. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಪ್ರತ್ಯೇಕ ಸ್ಪರ್ಧೆ ನಡೆಯಿತು. ಹೆಚ್ಚಿನ ಸಂಖ್ಯಾಬಲ ಹೊಂದಿದ್ದ ಬಿಜೆಪಿಗೆ ಮೇಯರ್ ಸ್ಥಾನ ಒಲಿಯಿತು. ಒಟ್ಟಾರೆ ಒಂದೇ ಅವಧಿಯಲ್ಲಿ ಮೂರು ಪಕ್ಷಗಳ ಸದಸ್ಯರು ಮೇಯರ್ ಸ್ಥಾನ ಅಲಂಕರಿಸಿದ್ದು ಈ ಬಾರಿಯ ವಿಶೇಷ.
ಮೈತ್ರಿ ಅನಿವಾರ್ಯ:
65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಇದ್ದಾರೆ. ಯಾವುದೇ ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರಲು ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ಈ ಬಾರಿ ಯಾವ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಇದ್ದ ಸಂದರ್ಭ ಪಾಲಿಕೆ ಮೇಯರ್ ಚುನಾವಣೆಯಲ್ಲೂ ಈ ಮೈತ್ರಿಕೂಟ ಮುಂದು ವರೆಯಿತು. ಈ ಮೈತ್ರಿಯಲ್ಲಿ ಮೊದಲ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಚುನಾಯಿತರಾದರು. ಎರಡನೇ ಅವಧಿಯಲ್ಲಿ ಜೆಡಿಎಸ್‌ನ ತಸ್ನಿಂ ಆಯ್ಕೆಗೊಂಡಿದ್ದರು. ಉಭಯ ಪಕ್ಷಗಳ ನಡುವೆ ನಡೆದ ಒಡಂಬಡಿಕೆ ಪ್ರಕಾರ ಮೂರನೇ ಅವಧಿ ಕಾಂಗ್ರೆಸ್‌ಗೆ ಹಾಗೂ ಇನ್ನುಳಿದ ಎರಡು ಅವಧಿಯನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಿತ್ತು. ಆದರೆ, ಮೂರನೇ ಅವಧಿಯ ಮೇಯರ್ ಚುನಾವಣೆ ಸಂದರ್ಭ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರರ್ಕಾರ ಪಥನವಾಗಿತ್ತು. ಅದರ ಪರಿಣಾಮ ಮೇಯರ್ ಚುನಾವಣೆಯ ಮೇಲೂ ಬಿತ್ತು. ಮೇಯರ್ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಡಲು ಹಿಂದೇಟು ಹಾಕಿದ ಸಂದರ್ಭ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಅನಿವಾರ್ಯವಾಗಿ ಜೆಡಿಎಸ್‌ಗೆ ಅಂತಿಮ ಕ್ಷಣದಲ್ಲಿ ಬೆಂಬಲ ನೀಡಿತು. ಇದು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿ ದೆಹಲಿ ಹೈಕಮಾಂಡ್‌ವರೆಗೂ ಮೇಯರ್ ಸ್ಥಾನದ ಚುನಾವಣೆಯ ವಿಚಾರ ತಲುಪಿತ್ತು. ಹಾಗಾಗಿ ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ನಡೆ ಯಾವ ರೀತಿ ಇರಲಿದೆ ಎಂಬ ಕುತೂಹಲ ಇದೆ.
ಅಧಿಕಾರಾವಧಿ ಕಡಿಮೆ
ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯಬೇಕಾಗಿದ್ದು, ಇವರು ಒಂದು ವರ್ಷದ ಪೂರ್ಣ ಅವಧಿಯನ್ನು ಪೂರೈಸಲು ಅವಕಾಶ ಇದೆ. ಆದರೆ, ಈ ಬಾರಿ ಮೇಯರ್ ಸ್ಥಾನಕ್ಕೆ ಚುನಾವಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕಡೆಯ (5ನೇ ಅವಧಿ) ಅವಧಿಯ ಮೇಯರ್‌ಗೆ ಒಂದು ವರ್ಷ ಅಧಿಕಾರ ದೊರೆಯುವ ದೊರೆಯುವುದಿಲ್ಲ.