ಮೈಸೂರು: ಮೈಸೂರು-ಮನಮಧುರೈ ನಡುವೆ ಸಂಚರಿಸುವ ನೂತನ ರೈಲಿಗೆ ಸಂಸದ ಪ್ರತಾಪ್ ಸಿಂಹ ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಿದರು.
ಮೈಸೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ ಇದಾಗಿದ್ದು, ಸಂಜೆ 6.30ಕ್ಕೆ ರಾಮೇಶ್ವರದ ಕಡೆ ಹೊರಡಲಿದೆ. ರಾಮೇಶ್ವರದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸದ್ಯಕ್ಕೆ ತಮಿಳುನಾಡಿನ ಮನಮಧುರೈವರೆಗೆ ರೈಲು ಸಂಚಾರ ಮಾಡಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನೇರ ರಾಮೇಶ್ವರಂವರೆಗೂ ಸಂಚರಿಸಲಿದೆ.
ಹತ್ತು ವರ್ಷಗಳಲ್ಲಿ ಮೈಸೂರಿಗೆ ತಂದಿರುವ ನನ್ನ ಪ್ರಯತ್ನದಿಂದ ತಂದ 12ನೇ ರೈಲು ಇದಾಗಿದೆ. ಮೈಸೂರು ರೈಲ್ವೆ ನಿಲ್ದಾಣ ಬಹಳ ಚಿಕ್ಕದಾಗಿರುವ ಪರಿಣಾಮ ನಾಗನಹಳ್ಳಿ ಸ್ಯಾಟಲೈಟ್ ರೈಲು ನಿಲ್ದಾಣ ಪ್ರಾರಂಭವಾಯಿತು. ಮೈಸೂರು ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಎಲ್ಲ ಇಲಾಖೆಯ ಸಹಾಯ, ಸಹಕಾರ ಇದೆ ಎಂದು ಸಂಸದ ಪ್ರತಾಪ್‌ಸಿಂಹ ಪ್ರತಿಕ್ರಿಯಿಸಿದರು.ಮೈಸೂರು ವಿಭಾಗೀಯ ರೈಲ್ವೆ ನಿಯಂತ್ರಣಾಧಿಕಾರಿ ಶಿಲ್ಪಿ ಅಗರ್‌ವಾಲ್, ಸಹಾಯಕ ರೈಲ್ವೆ ನಿಯಂತ್ರಣಾಧಿಕಾರಿಗಳಾದ ವಿನಾಯಕ ನಾಯಕ್, ಇ.ವಿಜಯ, ಹಿರಿಯ ವ್ಯವಸ್ಥಾಪಕಿ ಅಂಕಿತಾಶರ್ಮ, ಸಾರ್ವಜನಿಕ ಸಂಪರ್ಕಾಧಿಕಾರಿ ಲೋಹಿತೇಶ್ವರ ಇತರರು ಇದ್ದರು.
ರೈಲು ಎಲ್ಲೆಲ್ಲಿ ನಿಲುಗಡೆ?
ಪ್ರಯಾಣಿಕರ ಬೇಡಿಕೆ ಮೇರೆಗೆ ಚಾಲನೆಗೊಂಡ ಮೈಸೂರು-ಮನಮಧುರೈ ರೈಲು ಸಂಜೆ 6.35ಕ್ಕೆ ಮೈಸೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 9.10ಕ್ಕೆ ಮನಮಧುರೈ ತಲುಪಲಿದೆ. ಮರುದಿನ ಮಧ್ಯಾಹ್ನ 12 ಗಂಟೆಗೆ ಮನಮಧುರೈನಿಂದ ಹೊರಟು ರಾತ್ರಿ 1.55ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಬಂಗಾರಪೇಟೆ, ತಿರುಪತ್ತೂರು, ಸೇಲಂ, ನಾಮಕ್ಕಲ್, ತಿರುಚನಪಳ್ಳಿ, ದಿಂಡಿಗಲ್ ಮಧುರೈ ನಿಲ್ದಾಣದಲ್ಲಿ ರೈಲು ನಿಲುಗಡೆ ಇರಲಿದೆ.
ವಿಶೇಷ ರೈಲಿನಲ್ಲಿ ಎರಡನೇಯ ಹವಾನಿಯಂತ್ರಿಕ ದರ್ಜೆಯ ಎರಡು, ಮೂರನೇ ಹವಾನಿಯಂತ್ರಿತ ದರ್ಜೆಯ 6, ಸ್ವೀಪರ್ ಕ್ಲಾಸ್‌ನ 9, ಸಾಮಾನ್ಯ ದ್ವಿತೀಯ ದರ್ಜೆಯ 2 ಹಾಗೂ ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರು 2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿದೆ.