ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಮೈಲಾರಿ ಹೋಟೆಲ್ ಅಂದರೆ ಅಚ್ಚುಮೆಚ್ಚು. ಶನಿವಾರ ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅಗ್ರಹಾರದ ಮೈಲಾರಿ ಹೋಟೆಲ್‌ನಲ್ಲಿ ಬೆಳಗ್ಗೆ ತಮ್ಮ ಇಷ್ಟದ ಬೆಣ್ಣೆ ಮಸಾಲೆ ದೋಸೆ ಸವಿದರು.
ಬೆಂಗಾಲು ಪಡೆಯನ್ನು ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿ ಹೋಟೆಲ್‌ನಲ್ಲಿ ದೋಸೆಯ ರುಚಿಯನ್ನು ಸವಿದರು. ಅಗ್ರಹಾರಕ್ಕೆ ಸಿಎಂ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಮಾಜಿ ಸದಸ್ಯ ಸಂದೇಶ್ ನಾಗರಾಜ್ ಸಾಥ್ ದೋಸೆ ಸವಿದರು.
ಬಳಿಕ ಟಿ.ಕೆ.ಲೇಔಟ್‌ನಲ್ಲಿರುವ ತಮ್ಮ ಮನೆಗೆ ತೆರಳಿದ ಅವರು ಜನರ ಅಹವಾಲು ಆಲಿಸಿದರು. ನಂತರ ತಮ್ಮ ಸ್ನೇಹಿತ ಹಾಗೂ ಹಿರಿಯ ವಕೀಲ ಶ್ರೀನಿವಾಸನ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ ರಾಚಯ್ಯ ಪತ್ನಿ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.