ಜಿಲ್ಲೆ

ಮೈಸೂರು ಮ-ನರೇಗಾದಲ್ಲಿ ಶೇ.100ರಷ್ಟು ಗುರಿ ಸಾಧನೆ

ಆರ್.ಕೃಷ್ಣ

ವಿಜಯವಾಣಿ ವಿಶೇಷ ಮೈಸೂರು

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ಮ-ನರೇಗಾ) ಯೋಜನೆಯ ಮೂಲಕ ಉದ್ಯೋಗ ಕ್ರಾಂತಿಗೆ ಮುಂದಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ಉದ್ಯೋಗ ನೀಡುವ ಮಾನವ ದಿನ ಸೃಷ್ಟಿಯಲ್ಲಿ ಶೇ.100ರಷ್ಟು ಗುರಿ ಸಾಧಿಸಿದೆ.

ಗ್ರಾಮೀಣ ಭಾಗದ ಜನರ ಜೀವನಕ್ಕೆ ಬಲವಾಗಿ ನಿಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2024-25ನೇ ಸಾಲಿನಲ್ಲಿ ಶೇ.101.83ರಷ್ಟು ಗುರಿ ಮೀರಿದ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ 3,38,973 ಲಕ್ಷ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಅವುಗಳಲ್ಲಿ 1,46,368 ಕುಟುಂಬಗಳ ಜಾಬ್ ಕಾರ್ಡ್‌ಗಳು ಸಕ್ರಿಯವಾಗಿ 2,77,379 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಗುರಿ ಸಾಧಿಸಿರುವ ಆರು ತಾಲೂಕು:

ಜಿಲ್ಲೆಯಲ್ಲಿ ಒಟ್ಟು 24ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಇದರಲ್ಲಿ ಜಿಲ್ಲೆ 24,43,834ರಷ್ಟು ಮಾನವ ದಿನ ಸೃಷ್ಟಿಸಿದೆ. ಇದರಲ್ಲಿ ಕೆ.ಆರ್.ನಗರ ತಾಲೂಕು ಶೇ.119.59ರಷ್ಟು ಗುರಿ ಸಾಧನೆ ಮಾಡುವ ಮೂಲಕ ಮುಂಚೂಣಿಯಲ್ಲಿದೆ. ತಾಲೂಕಿನಲ್ಲಿ ಒಟ್ಟು 1,51,084 ಮಾನವ ದಿನ ಸೃಜನೆ ಗುರಿ ಹೊಂದಲಾಗಿದ್ದು, ಇದರಲ್ಲಿ 1,80,678 ಮಾನವ ದಿನಗಳನ್ನು ಪೂರ್ತಿಗೊಳಿಸಿ ದಾಖಲೆ ಬರೆದಿದೆ.

ತಿ.ನರಸೀಪುರ 3,56,975 ಮಾನವ ದಿನ ಗುರಿಯಲ್ಲಿ 4,02,286 ಪೂರೈಸಿ ಶೇ.112.69ರಷ್ಟು ಸಾಧನೆ ಮಾಡಿದೆ. ಸರಗೂರು ತಾಲೂಕು 1,76,261 ಮಾನವ ದಿನ ಗುರಿಯಲ್ಲಿ 1,94,478 ಪೂರೈಸಿ ಶೇ.110.34 ಸಾಧಿಸಿದ್ದು, ಪಿರಿಯಾಪಟ್ಟಣ ತಾಲೂಕು 3,14,707 ಮಾನವ ದಿನ ಗುರಿಯಲ್ಲಿ 3,32,733 ಮಾನವ ದಿನ ಸೃಷ್ಟಿಸಿ ಶೇ.105.73 ಸಾಧನೆ ಮಾಡಿದೆ.

ಸಾಲಿಗ್ರಾಮ ತಾಲೂಕು 1,55,098 ಮಾನವ ದಿನ ಗುರಿಯಲ್ಲಿ 1,61,140 ಮಾನವ ದಿನ ಸೃಷ್ಟಿಸಿ ಶೇ.103.90ರಷ್ಟು ಸಾಧನೆ ಮಾಡಿದೆ. ಎಚ್.ಡಿ.ಕೋಟೆ ತಾಲೂಕು 3,87,119 ಮಾನವ ದಿನಗಳಿಗೆ 4,01,055 ಮಾನವ ದಿನಗಳನ್ನು ಪೂರೈಸಿ ಶೇ.103.60 ಗುರಿ ಸಾಧಿಸಿದೆ. ಆ ಮೂಲಕ ಒಂಬತ್ತು ತಾಲೂಕಿನಲ್ಲಿ ಆರು ತಾಲೂಕುಗಳು ಶೇಕಡ 100ರಷ್ಟು ಗುರಿ ಮೀರಿದ ಸಾಧನೆ ತೋರಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕ್ರಾಂತಿ ಆರಂಭಿಸಿದೆ.

ಏನೆಲ್ಲ ಮಾಡಬಹುದು?:

ನರೇಗಾ ಯೋಜನೆ ಅಡಿ ಮಾನವ ದಿನ ಸೃಷ್ಟಿಸಲು ಕಾರ್ಡ್ ಮಾಡಿಸಿದವರು ತಮ್ಮ ತೋಟ, ಹೊಲ, ಗದ್ದೆಗಳಲ್ಲಿಯೂ ಕಾರ್ಯ ನಿರ್ವಹಿಸಬಹುದಾಗಿದೆ. ಅಂತರ್ಜಲ ಚೇತನ ಸಂರಕ್ಷಣೆ ಕಾಮಗಾರಿ, ರೈತರ ಕ್ರಿಯಾ ಯೋಜನೆ, ಹಸಿರೀಕರಣ ಕಾಮಗಾರಿ, ಶಾಲಾಭಿವೃದ್ಧಿ ಕಾಮಗಾರಿಗಳು, ಸಂಜೀವಿನಿ ಶೆಡ್ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿ, ಚರಂಡಿ ಹಾಗೂ ಇನ್ನಿತರ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಸೇರಿಸಲಾಗಿದೆ. ಇದರಿಂದ ಜನರಿಗೆ, ರೈತರಿಗೆ ಹಾಗೂ ಕೆಲಸ ಮಾಡುವವರಿಗೆ ಪ್ರಯೋಜನ ಸಿಗುತ್ತಿದೆ. ಪುರುಷರು, ಮಹಿಳೆಯರು ಹಾಗೂ ಹಿರಿಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೃಷಿಯಲ್ಲಿ ಅನೇಕರ ಬದಕನ್ನೇ ನರೇಗಾ ಬದಲಿಸಿರುವ ಹಲವು ಉದಾಹರಣೆಗಳಿವೆ.

ಯೋಜನೆ ಅಡಿ ಕೂಲಿ ಹೆಚ್ಚಳ:

ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮ-ನರೇಗಾ ಯೋಜನೆ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಇದರನ್ವಯ ಕರ್ನಾಟಕದಲ್ಲಿ 2024-25ನೇ ಸಾಲಿನಲ್ಲಿ 349 ರೂ.ಗಳಿಂದ ಕೂಲಿಯನ್ನು 2025-26ನೇ ಸಾಲಿನಲ್ಲಿ 370 ರೂ.ಗಳಿಗೆ ಹೆಚ್ಚಳ ಮಾಡಿದೆ. ಏಪ್ರಿಲ್ 1, 2025ರಿಂದ 370 ರೂ.ಗಳ ಕೂಲಿ ಚಾಲ್ತಿಗೆ ಬಂದಿದೆ.

ಏಕೀಕೃತ ಸಹಾಯವಾಣಿ:

ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿಗಾಗಿ ಹಾಗೂ ಕುಂದು ಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ.

ಯಾವುದೇ ಮಾಹಿತಿ ಅಗತ್ಯವಿರುವವರು ಮೊಬೈಲ್ ಸಂಖ್ಯೆ 8277506000 ಅನ್ನು ಸಂಪರ್ಕಿಸಬಹುದಾಗಿದೆ.

===========

ಮ-ನರೇಗಾ ಊರುಗೋಲಾಗಿದೆ

ಮ-ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಊರುಗೋಲಾಗಿದೆ. ಜಿಲ್ಲೆಯ 9 ತಾಲೂಕಿನಲ್ಲಿ ಆರು ತಾಲೂಕುಗಳು ನೂರರ ಗುರಿ ಸಾಧನೆ ಮೀರಿ ಜನರಿಗೆ ಉದ್ಯೋಗ ನೀಡಿರುವುದು ಸಂತಸ ತರಿಸಿದೆ. ಮ-ನರೇಗಾ ಯೋಜನೆ ಅಡಿ ಕೈಗೊಂಡ ಹಲವು ಯೋಜನೆಗಳು ಕಾರಣವಾಗಿದೆ. ಗ್ರಾಮೀಣ ಭಾಗದ ಜನರು ಮತ್ತಷ್ಟು ಜಾಗೃತರಾಗಿ ಮ-ನರೇಗಾ ಯೋಜನೆ ಬಳಸಿಕೊಳ್ಳಬೇಕು.

ಎಸ್.ಯುಕೇಶ್‌ಕುಮಾರ್

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಮೈಸೂರು