ಜಿಲ್ಲೆ

ಮೈಸೂರು ಲೋಕಸಭೆ: ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಬಯಸಿ ಸಲ್ಲಿಸಿದ್ದ 28 ಅಭ್ಯರ್ಥಿಗಳ ನಾಮಪತ್ರದಲ್ಲಿ ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. ಈಗ 24 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಏ.8ರಂದು ಉಮೇದುವಾರಿಕೆ ವಾಪಸ್ ಪಡೆಯಲು ಅಂತಿಮ ದಿನವಾಗಿದೆ.
ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ನಾಮಪತ್ರ ಪರಿಶೀಲನೆ ಶುಕ್ರವಾರ ನಡೆಯಿತು.
ಬಿಎಸ್‌ಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದ ಬೆಂಗಳೂರಿನ ರೇವತಿರಾಜ್, ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಆರ್.ನಗರದ ರಾಮಯ್ಯ, ನಂಜನಗೂಡು ದೇವರಸನಹಳ್ಳಿಯ ಡಿ.ಎನ್.ನವೀನ್‌ಕುಮಾರ್ ಅವರ ನಾಮಪತ್ರ ಎಲ್ಲ ಕಾಲಂಗಳನ್ನು ಭರ್ತಿ ಮಾಡಿದ ಅಫಿಡವಿಟ್ ನೀಡದಿರುವುದರಿಂದ ತಿರಸ್ಕೃತಗೊಳಿಸಲಾಗಿದೆ. ಅಲ್ಲದೇ ಹುಣಸೂರಿನ ಸರಸ್ವತಿಪುರಂ ನಿವಾಸಿ ಶಿವಕುಮಾರ್, ಜೆ.ಶಿವಣ್ಣ ಅವರ ಸೂಚಕರ ಮಾಹಿತಿ ಹಾಗೂ ಸಹಿ ಇಲ್ಲದಿರುವುದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ.