ಮೈಸೂರು: ಒಕ್ಕಲಿಗ ಎಂಬ ಕಾರಣಕ್ಕೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್‌ಸಿಂಹಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಒಕ್ಕಲಿಗ ಸಮುದಾಯದ ಎಂ. ಲಕ್ಷ್ಮಣ್ ಅವರನ್ನು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲಿಸಲಿದೆ ಎಂದು ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಹೇಳಿದರು.
ಒಕ್ಕಲಿಗರನ್ನು ಎಲ್ಲೆಡೆ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮ ಶಕ್ತಿ ಪ್ರದರ್ಶನ ತೋರಬೇಕು. ಒಕ್ಕಲಿಗರ ಹಿತರಕ್ಷಣೆಗೆ ತಮ್ಮ ಸಂಘ ಬದ್ಧವಾಗಿದೆ. ನಮ್ಮ ಸಂಘ ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಆದರೆ, ಲಕ್ಷ್ಮಣ್ ಒಕ್ಕಲಿಗರು ಎಂಬ ಕಾರಣಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲಕ್ಷ್ಮಣ್ ಒಕ್ಕಲಿಗರಲ್ಲ ಎಂಬ ಆರೋಪ ಸರಿಯಲ್ಲ. ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿಂದೆ ನಮ್ಮ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆಲತ್ತೂರು ಜಯರಾಂ, ಬೋರೇಗೌಡ, ರವಿ ರಾಜಕೀಯ, ಕುಮಾರ್, ಲಕ್ಷ್ಮಣ್, ಉಮೇಶ್, ಸುಶೀಲಾ ನಂಜಪ್ಪ ಇದ್ದರು.