ಜಿಲ್ಲೆ

ಮೈಸೂರು: ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

ಸದೇಶ್ ಕಾರ್ಮಾಡ್

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿದರೂ ಮುಂಗಾರಿನಲ್ಲಿ ಮಳೆಯ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಶೇ.42 ರಷ್ಟು ಮಳೆಯ ಕೊರತೆ ಕಂಡು ಬಂದಿದೆ.

ಜಿಲ್ಲೆಯಲ್ಲಿ ಜೂ.1 ರಿಂದ 15ರವರೆಗೆ ಮುಂಗಾರು ಸಂದರ್ಭ 46.3 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, 26.8 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.42 ರಷ್ಟು ಕಡಿಮೆ ಮಳೆಯಾಗಿದೆ. ನಂಜನಗೂಡು ಹಾಗೂ ಮೈಸೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಕೊರತೆ ಕಂಡು ಬಂದಿಲ್ಲ. ಆದರೆ, ಉಳಿದ ಎಲ್ಲ ತಾಲೂಕುಗಳಲ್ಲಿ ತೀವ್ರ ಮಳೆಯ ಕೊರತೆ ಎದುರಾಗಿದೆ. ಸರಗೂರು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯ ಕೊರತೆ ಕಂಡು ಬಂದಿದೆ.

ತಾಲೂಕುವಾರು ವಿವರ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಜೂನ್ 1 ರಿಂದ 15ರವರೆಗೆ 37.4 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, 17.2 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.54 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಅದೇ ರೀತಿ ಹುಣಸೂರಿನಲ್ಲಿ 41.2 ಮಿ.ಮೀ. ವಾಡಿಕೆ ಮಳೆ, 30.1 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.27 ರಷ್ಟು ಮಳೆ ಕೊರತೆ, ಕೆ.ಆರ್. ನಗರದಲ್ಲಿ 42 ಮಿ.ಮೀ. ವಾಡಿಕೆ ಮಳೆ, 20.4 ವಾಸ್ತವಿಕ ಮಳೆಯಾಗಿದ್ದು, ಶೇ.51 ಕೊರತೆ, ಪಿರಿಯಾಪಟ್ಟಣದಲ್ಲಿ 56.2 ಮಿ.ಮೀ. ವಾಡಿಕೆ, 14.7 ವಾಸ್ತವಿಕ ಮಳೆಯಾಗಿದ್ದು, ಶೇ.74 ರಷ್ಟು ಕೊರತೆ, ತಿ.ನರಸೀಪುರದಲ್ಲಿ 54.9 ಮಿ.ಮೀ. ವಾಡಿಕೆ ಮಳೆ, 14.7 ವಾಸ್ತವಿಕ ಮಳೆಯಾಗಿದ್ದು, ಶೇ.20 ರಷ್ಟು ಕೊರತೆ, ತಿ.ನರಸೀಪುರದಲ್ಲಿ 44.9 ಮಿ.ಮೀ. ವಾಡಿಕೆ, 43.8 ವಾಸ್ತವಿಕ ಮಳೆಯಾಗಿದ್ದು, ಶೇ.20 ರಷ್ಟು ಕೊರತೆ, ಸರಗೂರಿನಲ್ಲಿ 49.7 ವಾಡಿಕೆ ಮಳೆ, 11 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.78 ಕೊರತೆ, ಸಾಲಿಗ್ರಾಮದಲ್ಲಿ 42.5 ಮಿ.ಮೀ. ವಾಡಿಕೆ, 14.9 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.65 ರಷ್ಟು ಕೊರತೆ ಕಂಡು ಬಂದಿದೆ. ನಂಜನಗೂಡಿನಲ್ಲಿ 31.5 ಮಿ.ಮೀ. ವಾಡಿಕೆ ಮಳೆಯಾಗಿದ್ದು, 31.4 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಮಳೆಯ ಕೊರತೆ ಕಂಡು ಬಂದಿಲ್ಲ. ಮೈಸೂರಿನಲ್ಲಿ 49.8 ವಾಡಿಕೆ ಮಳೆ, 46.7 ವಾಸ್ತವಿಕ ಮಳೆಯಾಗಿದ್ದು, ಶೇ.6 ರಷ್ಟು ಮಾತ್ರ ಮಳೆಯ ಕೊರತೆ ಕಂಡು ಬಂದಿದೆ.

ಪೂರ್ವ ಮುಂಗಾರು ವರದಾನ: ಪೂರ್ವ ಮುಂಗಾರು ಹಾಗೂ ಬೇಸಿಗೆ ಮಳೆ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಿದೆ. ಪೂರ್ವ ಮುಂಗಾರು ಸಂದರ್ಭ (ಮಾರ್ಚ್ 1 ರಿಂದ 31 ಮೇ) ಜಿಲ್ಲೆಯಲ್ಲಿ 198.1 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, ಜಿಲ್ಲೆಯಲ್ಲಿ 285 ಮಿ.ಮೀ. ಮಳೆ ಸುರಿಯುವ ಮೂಲಕ ಶೇ.44 ರಷ್ಟು ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಪೂರ್ವ ಮುಂಗಾರು ಸಂದರ್ಭ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ ಶೇ.67, ಹುಣಸೂರಿನಲ್ಲಿ ಶೇ.42, ಕೆ.ಆರ್. ನಗರದಲ್ಲಿ ಶೇ.39, ಮೈಸೂರಿನಲ್ಲಿ ಶೇ.10, ನಂಜನಗೂಡಿನಲ್ಲಿ ಶೇ.14, ಪಿರಿಯಾಪಟ್ಟಣದಲ್ಲಿ ಶೇ.63, ತಿ.ನರಸೀಪುರದಲ್ಲಿ ಶೇ.24, ಸರಗೂರಿನಲ್ಲಿ ಶೇ.50, ಸಾಲಿಗ್ರಾಮದಲ್ಲಿ ಶೇ.62 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜನವರಿಯಿಂದ ಜೂ.15ರವರೆಗೆ ಜಿಲ್ಲೆಯಲ್ಲಿ 251.6 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, 312.1 ಮಿ.ಮಿ. ಮಳೆ ಸುರಿಯುವ ಮೂಲಕ ವಾಡಿಕೆಗಿಂತ ಶೇ.24 ರಷ್ಟು ಹೆಚ್ಚು ಮಳೆಯಾಗಿದೆ.