ಸುನಿಲ್ ಪೊನ್ನೇಟಿ ಮಡಿಕೇರಿ:
ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿಗೆ ದಿನಗಣನೆ ಶುರುವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಪರಿಸರ ಇಲಾಖೆಯಿಂದ ಅನುಮತಿಯೂ ಸಿಕ್ಕಿದೆ. ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟ ಆಗುವುದರೊಳಗಾಗಿ ಕೆಲಸ ಆರಂಭವಾಗುವುದು ಬಹುತೇಕ ಖಚಿತವಾಗಿದೆ. ಸಂಸದ ಪ್ರತಾಪ್ ಸಿಂಹ ಭರವಸೆಯ ಪ್ರಕಾರ ಕಾಮಗಾರಿ ಶುರುವಾದ ೧೫ ತಿಂಗಳ ಒಳಗೆ ೯೨ ಕಿಮೀ ಉದ್ದದ ಈ ಮಾರ್ಗ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಲಭ್ಯವಾದ ನಂತರ ರಾಷ್ಟ್ರೀಯ ಹೆದ್ದಾರಿ ೨೭೫ರ ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಅಲ್ಲದೆ ರಾಜ್ಯ ರಾಜಧಾನಿಗೆ ಕೊಡಗು ತುಂಬಾ ಹತ್ತಿರ ಎನ್ನುವಂತಾಗಿದ್ದು, ಬೆಂಗಳೂರು ಸಮೀಪದ ಒಂದು ದಿನದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ವಾರಾಂತ್ಯ ದಿನಗಳು ಮತ್ತು ರಜೆಯ ದಿನಗಳಲ್ಲಿ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದೆ. ಪ್ರತಿನಿತ್ಯವೂ ಇಲ್ಲಿ ಅಪಘಾತಗಳ ವರದಿ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಹೆದ್ದಾರಿ ಮೇಲ್ದರ್ಜೆಗೆ ಏರುವ ತುರ್ತು ಅಗತ್ಯ ಇರುವುದರಿಂದ ಉದ್ದೇಶಿತ ಮೈಸೂರು-ಮಡಿಕೇರಿ ೪ ಪಥದ ಎಕ್ಸ್‌ಪ್ರೆಸ್‌ವೇ ಯೋಜನೆ ಸಾರ್ವಜಕನಿಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಸಂದರ್ಭದಲ್ಲೇ ೯೨ ಕಿಮೀ ಉದ್ದದ ೪,೧೩೦ ಕೋಟಿ ರೂ. ವೆಚ್ಚದ ಮೈಸೂರು-ಮಡಿಕೇರಿ ೪ ಪಥದ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಗುತ್ತಿಗೆದಾರರನ್ನು ನಿಗದಿ ಮಾಡಲಾಗಿದೆ. ಶ್ರೀರಂಗಪಟ್ಟಣ-ಹುಣಸೂರು ಮತ್ತು ಹುಣಸೂರು-ಕುಶಾಲನಗರ ಎಂದು ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಸಲಾಗುವುದು. ಮೈಸೂರು-ಮಡಿಕೇರಿ ೪ ಪಥದ ಎಕ್ಸ್‌ಪ್ರೆಸ್‌ವೇ ಮೈಸೂರು, ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ.
ನಾಲ್ಕು ಪಥದ ಜತೆಗೆ ಸರ್ವೀಸ್ ರಸ್ತೆಗಳನ್ನೂ ಹೊಂದಿರುವ ಈ ಯೋಜನೆಗಾಗಿ ೧,೩೫೧.೬೭ ಎಕರೆ ಭೂಮಿ ಬೇಕಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ೬೯೧.೮೯ ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ೪೭೭ ಕೋಟಿ ರೂ. ಪರಿಹಾರ ಸಂಬಂಧಿಸಿದವರಿಗೆ ಕೊಡಲಾಗಿದೆ. ಶ್ರೀರಂಗಪಟ್ಟಣ-ಹುಣಸೂರು ಕಾಮಗಾರಿ ಮೊದಲು ಆರಂಭವಾಗುವ ಸಾಧ್ಯತೆ ಇದೆ. ಶ್ರೀರಂಗಪಟ್ಟಣ, ಮೈಸೂರು, ಪಿರಿಯಾಪಟ್ಟಣ, ಕುಶಾಲನಗರ ತಾಲೂಕಿನ ರೈತರು ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಭೂ ಮಾಲೀಕರಿಗೆ ಭೂಸ್ವಾಧೀನ ನಿಯಮಾವಳಿಗಳ ಪ್ರಕಾರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಪರಿಹಾರವಾಗಿ ಕೊಡಲಾಗುತ್ತಿದೆ. ೪,೧೩೦ ಕೋಟಿ ರೂ. ಯೋಜನಾ ವೆಚ್ಚದಲ್ಲಿ ಭೂ ಸ್ವಾಧೀನ ಪರಿಹಾರಕ್ಕೆಂದು ೧,೧೦೦ ಕೋಟಿ ರೂ. ಮೀಸಲಿಡಲಾಗಿದೆ.
ಚತುಷ್ಪಥ ರಸ್ತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಶುರುವಾಗಲಿದೆ. ಇದು ಕೊಡಗು ಜಿಲ್ಲೆಯಲ್ಲಿ ೨.೩ ಕಿ. ಮೀ. ಹಾದುಹೋಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ ೭೫.೯ ಕಿ. ಮೀ. ಹಾಗೂ ಮಂಡ್ಯದಲ್ಲಿ ೧೪ ಕಿ.ಮೀ. ದೂರ ಇರಲಿದೆ. ಈ ಹೆದ್ದಾರಿ ಯೋಜನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮತ್ತು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನಲ್ಲಿ ೧೩೫ ಎಕರೆ ಅರಣ್ಯ ಭೂಮಿ ಮೂಲಕವೂ ಹಾದು ಹೋಗಲಿದ್ದು, ಈ ಕಾಮಗಾರಿಗೆ ಜ. ೨೯ರಂದು ಅನುಮತಿ ಕೂಡ ಸಿಕ್ಕಿದೆ. ಕೊಡಗು ಭಾಗದಲ್ಲಿ ೧ ಹಳ್ಳಿಯ ೫೦ ಕುಟುಂಬಗಳು ಈ ಕಾಮಗಾರಿಯ ಪ್ರಭಾವಕ್ಕೆ ಒಳಗಾಗಲಿವೆ. ೨೫ ಕಟ್ಟಡಗಳು ಅಥವಾ ಆಸ್ತಿಪಾಸ್ತಿಗಳು ಹಾನಿಗೀಡಾಗಲಿವೆ.