ಮೈಸೂರು-ಕುಶಾಲನಗರ ಹೆದ್ದಾರಿ(ಎನ್‌ಎಚ್-275) ಕಾಮಗಾರಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭ ಮಾಡುವ ಜತೆಗೆ 2024ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಎನ್‌ಎಚ್-275 ಹೆದ್ದಾರಿ ಕಾಮಗಾರಿ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನ ವ್ಯಾಪ್ತಿಗೆ ಬರುವ ನಾನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೈಸೂರು-ಕುಶಾಲನಗರದ ನಡುವೆ 93 ಕಿಮೀ ಆ್ಯಕ್ಸಸ್ ಕಂಟ್ರೋಲ್ಡ್ ಹೈವೇ ಯೋಜನೆ ಇದಾಗಿದೆ. ಹೆದ್ದಾರಿಯನ್ನು 4,130 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಆರಂಭವಾಗಲಿದೆ. ಈ ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದಾರೆ.
ನಾಲ್ಕು ಹಂತದ ಕಾಮಗಾರಿಯನ್ನು 3 ಜನ ಗುತ್ತಿಗೆದಾರರು ವಹಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ, ನೀರು, ವಿದ್ಯುತ್, ನಾಲೆ ಮುಂತಾದವುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಭಾಗಶಃ ಮುಗಿಸಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಎಲ್ಲ ಅನುಮತಿ ಪಡೆಯಲಾಗುತ್ತದೆ. ಬೇಸ್ ಕ್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗಳನ್ನು ಈ ತಿಂಗಳ 30 ರೊಳಗೆ ಮುಕ್ತಾಯಗೊಳಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ ಮೊದಲ ವಾರದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಾವಕಾಶವಿದೆ. ನಾನು ಈ ಕಾಮಗಾರಿಯನ್ನು ಸವಾಲಾಗಿ ತೆಗೆದುಕೊಂಡಿದ್ದು 2024 ಡಿಸೆಂಬರ್ ಒಳಗೆ ಮುಕ್ತಾಯಗೊಳಿಸಿ ರಸ್ತೆಯನ್ನು ಲೋಕಾರ್ಪಣೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಯೋಜನೆಯಿಂದ ಹುಣಸೂರು, ಪಿರಿಯಾಪಟ್ಟಣ, ನಾಗರಹೊಳೆ, ಕೇರಳಕ್ಕೆ ತೆರಳುವವರು ಅನವಶ್ಯಕವಾಗಿ ಮೈಸೂರು ನಗರದ ಒಳಗೆ ಪ್ರವೇಶಿಸುವುದು ತಪ್ಪುತ್ತದೆ. ಇದೀಗ ಕೈಗಾರಿಕೆಗಳು ನಂಜನಗೂಡು ಭಾಗಕ್ಕೆ ಬೆಳವಣಿಗೆ ಹೊಂದಿವೆ. ಹೆದ್ದಾರಿ ನಿರ್ಮಾಣದಿಂದ ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ ಭಾಗಕ್ಕೂ ಕೈಗಾರಿಕೆಗಳು ವಿಸ್ತರಣೆಗೊಂಡು ಈ ಭಾಗದ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.