ಜಿಲ್ಲೆ

ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಮೋದಿ: ಮೈಸೂರು-ಕೊಡಗು ಸಂಸದ ಯಧುವೀರ್ ಒಡೆಯರ್ ಶ್ಲಾಘನೆ

ಮಂಡ್ಯ: ಕಳೆದ ಹನ್ನೊಂದು ವರ್ಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋಟ್ಯಂತರ ಉದ್ಯೋಗ ಸೃಷ್ಠಿ, ಬಡತನ ನಿರ್ಮೂಲನೆ, ಹಣದುಬ್ಬರ ನಿಯಂತ್ರಣ ಹಾಗೂ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ ತಂದು ಪ್ರಮುಖ ಕ್ಷೇತ್ರದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಯಧುವೀರ್ ಒಡೆಯರ್ ಶ್ಲಾಘಿಸಿದರು.

ಜಾಗತಿಕ, ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆ ಕುಸಿಯದಂತೆ ತಡೆಯುವಲ್ಲಿ ಮೋದಿ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. 2014ರಲ್ಲಿ ಅಸಮತೋಲಿತ ಆರ್ಥಿಕತೆಯನ್ನು ಗುರುತಿಸಲಾಗಿತ್ತು. ಈಗ 5 ಪ್ರಬಲ ಆರ್ಥಿಕತೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೇಶದ ಜಿಡಿಪಿ 4ನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ನೀತಿ ನಿಯಮಗಳಿಂದಾಗಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದ ಬೆಳವಣಿಗೆಗೆ ಉತ್ತಮವಾದ ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ಕಾರಣವಾಗಿದೆ. ಇದರೊಂದಿಗೆ ಪಾರಂಪರಿಕತೆಯ ಜತೆಗೆ ಸಂಸ್ಕೃತಿ-ಪರಂಪರೆಯನ್ನು ಮುಂದುವರಿಸಲು ಮೋದಿ ಅವರು ಉತ್ತೇಜನ ನೀಡಿದ್ದಾರೆ. ಪರಿಣಾಮ ಕಾಶಿ ಕಾರಿಡಾರ್, ಉಜ್ಜಯನಿಯ ಮಹಾಕಾಳೇಶ್ವರ ದೇವಾಲಯ ಜೀರ್ಣೋದ್ಧಾರ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಸೇರಿದಂತೆ ಹತ್ತು ಹಲವು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಲಾಗಿದೆ. ದೇಶದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 2 ಕೋಟಿ ಉದ್ಯೋಗ ಸೃಷ್ಠಿಸಲಾಗಿತ್ತು. ಅದೇ ಎನ್‌ಡಿಎ ಸರ್ಕಾರದ ಅವದಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಠಿಸಲಾಗಿದೆ. ಬಲಿಷ ಭಾರತಕ್ಕಾಗಿ ಮೂಲ ಸೌಕರ್ಯ ನಿರ್ಮಾಣ ಮಾಡಲಾಗಿದೆ. ರಸ್ತೆ, ರೈಲ್ವೆ, ನಗರಾಭಿವೃದ್ಧಿ ಮತ್ತು ಇಂಧನ ಕ್ಷೇತ್ರಗಳಲ್ಲಿ 5 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ವಿವರಿಸಿದರು.

ರೈಲ್ವೆ ಮಾರ್ಗಗಳ ವಿದ್ಯುದೀಕರಣದಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಲಾಗಿದೆ. ವಿಮಾನಯಾನ ಉಡಾನ್ ಯೋಜನೆಯಡಿ 6 ಹೊಸ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿರುವ ವಿಮಾನ ನಿಲ್ದಾಣದ ಅಭಿವೃದ್ಧಿಗೆ 120 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದು ಈ ಭಾಗದ ಬಹು ದಿನದ ಬೇಡಿಕೆಯೂ ಆಗಿದೆ. ಕೃಷಿ ಬಜೆಟ್‌ನಲ್ಲಿ ಐತಿಹಾಸಿಕ ಏರಿಕೆ ಮಾಡಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತ ಶೇ.50ಕ್ಕೂ ಹೆಚ್ಚು ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕಕ್ಕೆ 58 ಲಕ್ಷಕ್ಕೂ ಹೆಚ್ಚು ರೈತರಿಗೆ 13,669 ಕೋಟಿ ರೂ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಲಾಗಿದೆ ಎಂದು ತಿಳಿಸಿದರು.

ಬಡವರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಆಧ್ಯತೆ ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಉಜ್ವಲ, ಮುದ್ರಾ, ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ದೇಶದ ಎಲ್ಲ ವರ್ಗದ ಜನರಿಗೂ ಜನ್‌ಧನ್ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ಸ್ಥಾಪಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲೂ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮೈಸೂರು-ಕೊಡಗು ಜಿಲ್ಲೆಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪ್ಲೈ ಓವರ್ ರಸ್ತೆಯ ಯೋಜನೆ ರೂಪಿಸಲಾಗಿದೆ. 12 ಹೊಸ ರಸ್ತೆಗಳ ನಿರ್ಮಾಣಕ್ಕೆ ಆಧ್ಯತೆ ನೀಡಿದ್ದು, ಇದರಿಂದ ರಸ್ತೆಗಳನ್ನೇ ಕಾಣದ ಹಾಡಿಗಳಿಗೆ ಅನುಕೂಲವಾಗಲಿದೆ. ಕರಿಮೆಣಸು ಬೆಳೆಯನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಮೈಸೂರು, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ತಂಬಾಕು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೆಚ್ಚು ದರ ಸಿಗುವಂತೆ ಮಾಡಲಾಗಿದೆ. ಇವೆಲ್ಲವೂ ಕೇವಲ ಮೈಸೂರು-ಕೊಡಗು ಜಿಲ್ಲೆಗಳಿಗಷ್ಟೇ ಸೀಮಿತವಾಗದೆ ಇಡೀ ರಾಜ್ಯಾದ್ಯಂತ ಎಲ್ಲ ಬೆಳೆಗಾರರಿಗೂ ಅನ್ವಯವಾಗಲಿದೆ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಸಂದರ್ಭದಲ್ಲಿ ಮೈಸೂರಿನಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗಿದೆ. 50 ಸ್ಥಳಗಳಲ್ಲಿ ಅನ್ನಸಂತರ್ಪಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಕೊಡಗು ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇದ ಹೇರುವಂತೆ ಒತ್ತಾಯಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸಬೇಕಾಗಿದೆ. ಮಂಡ್ಯ ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಟ್ಟಿಗೆ ಚರ್ಚೆ ನಡೆಸಿ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವಂತೆ ಮನವಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಆನಂದ್, ಎಚ್.ಆರ್.ಅಶೋಕ್, ಡಾ.ಸದಾನಂದ ಇತರರಿದ್ದರು.