ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು. ಹೀಗಾಗಿ, ಚುನಾವಣೆಯಲ್ಲಿ ನಾರಿ‘ಶಕ್ತಿ’ ನಿರ್ಣಾಯಕವಾಗಲಿದೆ…!
ಮುಂದಿನ ಮೂರು ತಿಂಗಳಿನಲ್ಲಿ ಎದುರಾಗಲಿರುವ ಲೋಕಸಭಾ ಎಲೆಕ್ಷನ್ ಮಹಾ ಸಮರಕ್ಕಾಗಿ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಸಲ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದು, ಅವರ ಓಲೈಕೆಗೆ ಪಾರ್ಟಿಗಳು ಗಾಳ ಹಾಕಲು ವಿವಿಧ ಕಸರತ್ತು ಮಾಡುವುದು ನಿಶ್ಚಿತ.
ಮೈಸೂರು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು, ಕೊಡಗು ಜಿಲ್ಲೆಯ 2 ಕ್ಷೇತ್ರಗಳನ್ನು ಒಳಗೊಂಡಿರುವ ಈ ಲೋಕಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. 20,51,040 ಮತಪ್ರಭುಗಳಿದ್ದಾರೆ.
ಈ ಪೈಕಿ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದೆ. 10,42,419 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರ ಸಂಖ್ಯೆ 10,08,438ರಷ್ಟಿದೆ. ಇವರಿಗಿಂತ ಮಹಿಳಾ ಮತದಾರರು 33,981 ಹೆಚ್ಚಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಮೊದಲ ಸ್ಥಾನದಲ್ಲಿದ್ದಾರೆ ಎಂಬುದು ವಿಶೇಷ.
ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟು ಶಕ್ತರಾಗಿರುವ ಹೆಣ್ಣುಮಕ್ಕಳ ಮನವೊಲಿಕೆಗೆ ರಾಜಕೀಯ ಸರ್ಕಸ್ ಮಾಡಲು ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರನ್ನೇ ಕೇಂದ್ರೀಕರಿಸಿ ಕಾಂಗ್ರೆಸ್ ಮತಪ್ರಚಾರ ಮಾಡಿತ್ತು. ಅದಕ್ಕಾಗಿ ಪಂಚ ಗ್ಯಾರಂಟಿ ಯೋಜನೆ ಭರವಸೆಯನ್ನೂ ನೀಡಿತ್ತು.
ಇದಕ್ಕೆ ಮನಸೋತ ವನಿತೆಯರು ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ನೀಡಿ ಅಧಿಕಾರಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ್ದರು. ನರೇಂದ್ರ ಮೋದಿ ನೇತೃತ್ವದಲ್ಲಿ ಅಬ್ಬರದ ಪ್ರಚಾರ ಮಾಡಿದರೂ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ, ಇದೀಗ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿಕೊಂಡಿದೆ.
ಮತ್ತೊಂದೆಡೆ, ಗೆಲುವಿಗೆ ಕಾರಣವಾದ ಗ್ಯಾರಂಟಿ ಯೋಜನೆ ಜಾರಿಗೆ ತಂದು, ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಸಹ ಅಣಿಯಾಗಿದೆ. ಇದು ಮಹಿಳಾ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಕ್ಷೇತ್ರದಲ್ಲಿ ತೃತೀಯ ಲಿಂಗಿ ಮತದಾರರ ಸಂಖ್ಯೆ ತೀರ ಕಡಿಮೆ ಇದೆ. ಮತದಾರರ ಪಟ್ಟಿಗೆ ನೋಂದಣಿ ಆಗಲು ಇವರು ತೀವ್ರ ನಿರಾಸಕ್ತಿ ತೋರಿದ್ದಾರೆ. ಇಡೀ ಕ್ಷೇತ್ರದಲ್ಲಿ ಈ ಮತದಾರರ ಸಂಖ್ಯೆ ಬರೀ 183. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಇವರ ಸಂಖ್ಯೆ 50ರ ಗಡಿ ದಾಟಿಲ್ಲ.
ಪಿರಿಯಾಪಟ್ಟಣದಲ್ಲಿ 7, ಹುಣಸೂರಿನಲ್ಲಿ 17, ಚಾಮುಂಡೇಶ್ವರಿಯಲ್ಲಿ 34, ಕೃಷ್ಣರಾಜದಲ್ಲಿ 28, ಚಾಮರಾಜದಲ್ಲಿ 31, ನರಸಿಂಹರಾಜದಲ್ಲಿ 48, ಮಡಿಕೇರಿಯಲ್ಲಿ 10, ವಿರಾಜಪೇಟೆಯಲ್ಲಿ 11 ತೃತೀಯ ಲಿಂಗಿ ಮತದಾರರು ಮಾತ್ರ ಇದ್ದಾರೆ.
2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಇವರ ಸಂಖ್ಯೆ ಕೊಂಚ ಏರಿಕೆಯಾಗಿದೆ. ಹೊಸದಾಗಿ 56 ಮತದಾರರು ಹೆಚ್ಚಾಗಿದ್ದಾರೆ. ಕಳೆದ ಸಲ ಇವರ ಸಂಖ್ಯೆ 127ರಷ್ಟಿತ್ತು. ಈಗ 183 ಇದೆ. ಕಳೆದ ಬಾರಿ ಮಡಿಕೇರಿ-10, ವಿರಾಜಪೇಟೆ-15, ಹುಣಸೂರು-4, ಚಾಮುಂಡೇಶ್ವರಿ-34, ಕೃಷ್ಣರಾಜ-21, ಚಾಮರಾಜ-1 ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 42 ತೃತೀಯ ಲಿಂಗಿಗಳು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು.
127 ಪೈಕಿ ಕೇವಲ 14 ಜನರು ಮತದಾನ ಮಾಡಿದ್ದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತ ಚಲಾವಣೆಯಲ್ಲೂ ಇವರು ಉತ್ಸಾಹ ತೋರುತ್ತಿಲ್ಲ. ಪ್ರಜಾತಂತ್ರ ಹಬ್ಬದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತೃತೀಯ ಲಿಂಗಿಗಳಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಕ್ರಮ ವಹಿಸಬೇಕಿದೆ. ಮತಪಟ್ಟಿಗೆ ಇವರು ಹೆಸರು ನೋಂದಾಯಿಸಿಕೊಂಡು, ಮತದಾನದಲ್ಲಿ ಸಕ್ರಿಯವಾಗಬೇಕಾಗಿದೆ.
3 ತಿಂಗಳು ಬಾಕಿ ಇರುವ ಲೋಕಸಭಾ ಚುನಾವಣೆಗೆ ಹೊತ್ತಿಗೆ ಮತದಾರರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಈಗಲೂ ಅವಕಾಶ ಕಲ್ಪಿಸಿಕೊಡಲಾಗಿದೆ. 18 ವರ್ಷ ತುಂಬಿರುವ ಅರ್ಹ ಮತದಾರರು ತಮ್ಮ ಹೆಸರನ್ನು ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಮತಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.
ಆದ್ದರಿಂದ ಅಂದಾಜು 50 ಸಾವಿರ ಹೊಸ ಮತದಾರರು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಆನ್‌ಲೈನ್ ಮೂಲಕವೇ ನೋಂದಣಿಯಾಗಬಹುದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಮತದಾನ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಆನ್‌ಲೈನ್ ಮೂಲಕವೇ ಅವಶ್ಯಕ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು.
voter service portal, vha ಮೊಬೈಲ್ ಆ್ಯಪ್ ಬಳಕೆ ಮಾಡಿಕೊಳ್ಳಬಹುದು. ಪಟ್ಟಿಯ ಪರಿಷ್ಕರಣೆಗಾಗಿ 1950 ಮತದಾರರ ಸಹಾಯವಾಣಿಯನ್ನೂ ತೆರೆಯಲಾಗಿದೆ.
ಮೈಸೂರು ಜಿಲ್ಲೆಯಲ್ಲಿ 50,969 ಯುವ ಮತದಾರರಿದ್ದಾರೆ. ಯುವ ಮತದಾರರಲ್ಲಿ 27,195 ಪುರುಷ, 23,770 ಮಹಿಳಾ, 4 ತೃತೀಯ ಲಿಂಗಿಗಳಿದ್ದಾರೆ. ಕರಡು ಮತದಾರರ ಪಟ್ಟಿಗಿಂತ ಹೊಸದಾಗಿ 16,899 ಯುವ ಮತದಾರರು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ 86 ಸಾವಿರ ಯುವ ಮತದಾರರಿದ್ದಾರೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ, ನೋಂದಣಿ ಇನ್ನೂ ಅವಕಾಶ ಇರುವುದರಿಂದ ಈ ಸಂಖ್ಯೆಯ ಇನ್ನಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ.
ಈಗಾಗಲೇ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆಯಾದ ಕುರಿತು ಪರಿಶೀಲನೆ ಮಾಡಬಹುದು. ಹೊಸದಾಗಿ ಮತದಾರ ಪಟ್ಟಿಗೆ ಸೇರ್ಪಡೆಗೆ ಈಗಲೂ ಅವಕಾಶ ಇದೆ. ಯುವ ಮತದಾರರು ಹೆಸರು ನೋಂದಣಿ ಮಾಡಿಕೊಳ್ಳಬೇಕು
ಡಾ.ಕೆ.ವಿ.ರಾಜೇಂದ್ರ
ಜಿಲ್ಲಾಧಿಕಾರಿ, ಮೈಸೂರು