ಮಂಜುನಾಥ ತಿಮ್ಮಯ್ಯ ಮೈಸೂರು
ಕುತೂಹಲ ಕೆರಳಿಸಿರುವ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡದ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತೆ ಮುಖಾಮುಖಿ ಆಗಿವೆ. ಬಿರುಸಿನ ಪೈಪೋಟಿ ನಿಕ್ಕಿಯಾಗಿದೆ.
ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡು, ನಾಮಪತ್ರ ಪರಿಶೀಲನೆಯೂ ಮುಕ್ತಾಯಗೊಂಡಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್‌ನ ಎಂ.ಲಕ್ಷ್ಮಣ್ ನಾಮಪತ್ರಗಳು ಕ್ರಮಬದ್ಧವಾಗಿವೆ. ಅಧಿಕೃತ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. 28 ಅಭ್ಯರ್ಥಿಗಳ ಪೈಕಿ ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. 24 ಅಭ್ಯರ್ಥಿಗಳು ಸ್ಪರ್ಧಾ ಅಂಗಳದಲ್ಲಿದ್ದಾರೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕೊನೇ ದಿನವಾಗಿದೆ. ಏ.26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಕಮಲ, ಕೈ ಅಭ್ಯರ್ಥಿಗಳನ್ನು ಹೊರತುಪಡಿಸಿ ಪ್ರಮುಖ ಹುರಿಯಾಳುಗಳು ಕಣದಲ್ಲಿಲ್ಲ. ಹೀಗಾಗಿ, ಮೊದಲ ಸಲ ಎದುರು-ಬದುರಾಗಿರುವ ಈ ಇಬ್ಬರ ನಡುವೆ ನಡೆಯುವ ಬಿಗ್‌ಫೈಟ್‌ಗೆ ವೇದಿಕೆ ಸಜ್ಜಾಗಿದ್ದು, ಚುನಾವಣೆ ರಂಗೇರುವುದು ನಿಶ್ಚಿತ.
ಎಲೆಕ್ಷನ್ ಕಣದಲ್ಲಿ ಒಬ್ಬರು ಮಾತ್ರ ಮಹಿಳಾ ಅಭ್ಯರ್ಥಿ. ಮೈಸೂರು ನಗರದವರೇ ಅಧಿಕ(13 ಅಭ್ಯರ್ಥಿಗಳು), 9 ಅಭ್ಯರ್ಥಿಗಳು ಕ್ಷೇತ್ರದ ಹೊರಗಿನವರು. ಬೆಂಗಳೂರಿನವರು 2 ಹುರಿಯಾಳುಗಳು. ಕೊಡಗಿನವರು ಒಬ್ಬರು ಮಾತ್ರ. ಪಕ್ಕದ ಕ್ಷೇತ್ರವಾದ ಚಾಮರಾಜನಗರದ ಇಬ್ಬರು, ಮಂಡ್ಯದ ಒಬ್ಬ ಅಭ್ಯರ್ಥಿ ಇದ್ದಾರೆ. ಮಾನ್ಯತೆ ಪಡೆದ ರಾಷ್ಟ್ರೀಯ, ರಾಜ್ಯ ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್, ಬಿಜೆಪಿನಿಂದ ಇಬ್ಬರು ಅಭ್ಯರ್ಥಿಗಳು, 9 ಅಭ್ಯರ್ಥಿಗಳು ನೋಂದಾಯಿತ ರಾಜಕೀಯ ಪಕ್ಷಗಳ ಹುರಿಯಾಳುಗಳಿದ್ದಾರೆ. 13 ಜನ ಪಕ್ಷೇತರ ಅಭ್ಯರ್ಥಿಗಳಿದ್ದಾರೆ.
ಕರ್ನಾಟಕ ಜನತಾಪಕ್ಷದಿಂದ ಚಾಮರಾಜನಗರ ತಾಲೂಕಿನ ದೊಡ್ಡರಾಯನಪೇಟೆಯ ಕದಂಬ ನಾ ಅಂಬರೀಷ, ಕರುನಾಡು ಪಾರ್ಟಿಯಿಂದ ಮಂಡ್ಯದ ನಾಗಮಂಗಲ ತಾಲೂಕಿನ ಹೊನಕೆರೆ ಗ್ರಾಮದ ಎಚ್.ಕೆ.ಕೃಷ್ಣ, ಸಮಾಜವಾದಿ ಜನತಾ ಪಾರ್ಟಿಯಿಂದ(ಕರ್ನಾಟಕ)ಬೆಂಗಳೂರಿನ ಸಹಕಾರನಗರದ ಡಾ.ಎಚ್.ಎಂ.ನಂಜುಂಡಸ್ವಾಮಿ, ಕಂಟ್ರಿ ಸಿಟಿಜನ್ ಪಾರ್ಟಿಯ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯಂ ಆರ್.ಮಹೇಶ್,
ಕರ್ನಾಟಕ ರಾಷ್ಟ್ರ ಸಮಿತಿಯಿಂದ ಮೈಸೂರಿನ ವಿಜಯನಗರದ ಮಾ.ಸ.ಪ್ರವೀಣ್, ಸೆಕ್ಯುಲರ್ ಡೆಮಾಕ್ರಟಿಕ್ ಕಾಂಗ್ರೆಸ್‌ನಿಂದ ಸಿದ್ದಾರ್ಥನಗರದ ಎ.ಜಿ.ರಾಮಚಂದ್ರರಾವ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಪ್ರಜಾಕೀಯ ಲೀಲಾ ಶಿವಕುಮಾರ್, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ (ಕಮ್ಯುನಿಸ್ಟ್) ಗಂಗೋತ್ರಿ ಬಡಾವಣೆಯ ಕಾಮ್ರೆಡ್ ಟಿ.ಆರ್.ಸುನಿಲ್, ಸೋಷಿಯಲಿಷ್ಟ್ ಪಾರ್ಟಿ(ಇಂಡಿಯಾ) ವತಿಯಿಂದ ಬನ್ನಿಮಂಟಪದ ಶಿವರಾತ್ರೀಶ್ವರ ನಗರದ ಹರೀಶಗೌಡ ಕಣದಲ್ಲಿದ್ದಾರೆ.
ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಬೆಂಗಳೂರು ಬಾಣಸವಾಡಿಯ ಕ್ರಿಸ್ಟೋಫರ್ ರಾಜ್ ಕುಮಾರ್, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕುಂದಚೇರಿಯ ದರ್ಶನ್ ಪೊನ್ನೆಟಿ, ಪಿರಿಯಾಪಟ್ಟಣ ತಾಲೂಕಿನ ಚಾಮರಾಯನಕೋಟೆಯ ಸಿ.ಜೆ.ಅಂಬೇಡ್ಕರ್, ಪಿರಿಯಾಪಟ್ಟಣ ಪಟ್ಟಣದ ಪಿ.ಎಸ್.ಯಡೂರಪ್ಪ, ಎಚ್.ಡಿ.ಕೋಟೆಯ ಬೋರ್ಡ್ ಕಾಲನಿಯ ಎಸ್.ದೊರೆಸ್ವಾಮಿ, ನಂಜನಗೂಡು ತಾಲೂಕಿನ ರಾಜಣ್ಣ, ಸರಗೂರು ತಾಲೂಕಿನ ಶಂಖಹಳ್ಳಿಯ ಸಣ್ಣನಾಯಕ, ಕುವೆಂಪುನಗರದ ರಾಜು, ಪ್ಯಾಲೇಸ್ ಕ್ವಾಟ್ರಸ್‌ನ ಎಂ.ರಾಮಮೂರ್ತಿ, ಕೆಸರೆಯ ಎಂ.ರಂಗಸ್ವಾಮಿ, ನಜರ್‌ಬಾದ್‌ನ ಶಿವನಂಜಯ್ಯ, ಬೋಗಾದಿಯ ಶ್ರೀನಿವಾಸ್ ಬೋಗಾದಿ, ರಾಮಕೃಷ್ಣನಗರದ ಎ.ಎಸ್.ಸತೀಶ್ ಅವರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲಿದ್ದಾರೆ.
ಕೊಡಗು ಜಿಲ್ಲೆಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಬ್ಬ ಹುರಿಯಾಳು ಮಾತ್ರ ಆ ಜಿಲ್ಲೆಯವರು. ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭೆ ಕ್ಷೇತ್ರವನ್ನು ಸೇರಿರುವ ಈ ಜಿಲ್ಲೆಯಲ್ಲಿ 4.66 ಲಕ್ಷ ಮತದಾರರಿದ್ದಾರೆ. ಆದರೆ ಕೊಡಗು ಜಿಲ್ಲೆಯಿಂದ ಏಕೈಕ ಅಭ್ಯರ್ಥಿ ಇರುವುದು ಗಮನಿಸಬೇಕಿರುವ ಅಂಶ.
ಎಲೆಕ್ಷನ್ ಕಣದಲ್ಲಿರುವ 24 ಅಭ್ಯರ್ಥಿಗಳ ಪೈಕಿ ಒಬ್ಬರು ಮಾತ್ರ ಮಹಿಳಾ ಅಭ್ಯರ್ಥಿ. ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಮೈಸೂರಿನ ಪ್ರಜಾಕೀಯ ಲೀಲಾ ಶಿವಕುಮಾರ್ ಆ ಮಹಿಳಾ ಸ್ಪರ್ಧಿ. ಇವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಪುರುಷರು. ಕ್ಷೇತ್ರದಲ್ಲಿರುವ 20.72 ಲಕ್ಷ ಮತದಾರ ಪೈಕಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಅಧಿಕ. ಅರ್ಧಕ್ಕಿಂತ ಹೆಚ್ಚಿನ ಮಹಿಳಾ ಮತದಾರರು(10.55 ಲಕ್ಷ ಮತ). ಆದಾಗ್ಯೂ, ವನಿತೆಯರು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಬಹಳ ಕಡಿಮೆ ಇದ್ದು, ಇದು ನಿರಾಶೆಯ ಸಂಗತಿ.
ಚುನಾವಣಾ ಅಖಾಡದಿಂದ ‘ಆನೆ’ ಹೊರಬಿದ್ದಿದೆ. ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ರೇವತಿ ರಾಜ್ ನಾಮಪತ್ರ ತಿರಸ್ಕೃತಗೊಂಡಿದೆ. ಕಳೆದ 3 ಚುನಾವಣೆಯಲ್ಲೂ ಪ್ರಮುಖ ಪಕ್ಷಗಳಿಗೆ ಪೈಪೋಟಿ ನೀಡುವ ಮೂಲಕ ಬಿಎಸ್‌ಪಿ 4ನೇ ಸ್ಥಾನ ಪಡೆದುಕೊಂಡಿತ್ತು. 2009ರಲ್ಲಿ 19,895(ಶೇ.1.2ರಷ್ಟು ಮತ), 2014ರಲ್ಲಿ 13,637(ಶೇ.0.79ರಷ್ಟು ಮತ), 2019ರಲ್ಲಿ 24,597(ಶೇ.1.87ರಷ್ಟು ಮತ) ಮತಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು.
ಆದರೀಗ ರಾಜ್ಯದಲ್ಲಿ ಬಿಎಸ್‌ಪಿ ಕೊಂಚಮಟ್ಟಿಗೆ ಸಂಘಟನಾ ಬಲ ಇರುವ ಮೈಸೂರು ಕ್ಷೇತ್ರದಲ್ಲೇ ಸ್ಪರ್ಧೆಗೂ ಮುನ್ನವೇ ಹೊರಬಿದ್ದಿದೆ. ಇದು ಸಂಘಟನೆ ಇನ್ನಷ್ಟು ಕುಸಿಯಲು ಕಾರಣವಾಗಲಿದೆ. ಅಲ್ಲದೆ ಇದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಮತ ವಿಭಜನೆಗೆ ತಡೆಬಿದ್ದಿದೆ.
ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ನೇರ ಕಾದಾಟ ಏರ್ಪಟ್ಟಿದೆ. ಯದುವೀರ್, ಲಕ್ಷ್ಮಣ್ ಹೊರತುಪಡಿಸಿ ಪ್ರಮುಖ ಉರಿಯಾಳುಗಳು ಕಣದಲ್ಲಿಲ್ಲ. ಹೀಗಾಗಿ, ಮೊದಲ ಸಲ ಮುಖಾಮುಖಿಯಾಗಿರುವ ಈ ಇಬ್ಬರ ನಡುವೆ ನಡೆಯುವ ಬಿಗ್‌ಫೈಟ್‌ಗೆ ವೇದಿಕೆ ಸಜ್ಜಾಗಿದ್ದು, ಚುನಾವಣೆ ರಂಗೇರಿಸಲಿದೆ.
32 ವರ್ಷ ಯದುವೀರ ಮತ್ತು 59 ವರ್ಷದ ಲಕ್ಷ್ಮಣ್ ಅವರಿಬ್ಬರಿಗೂ ಮೊದಲ ಲೋಕಸಭಾ ಚುನಾವಣೆ. ಲಕ್ಷ್ಮಣ್ ರಾಜಕೀಯವಾಗಿ ಮಾಗಿದ್ದರೆ, ಯದುವೀರ್‌ಗೆ ಹೊಸ ಉತ್ಸಾಸ. ವಿಧಾನಸಭೆ ಪರಿಷತ್ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಲಕ್ಷ್ಮಣ್ ಗೆದ್ದರೆ ಸಂಸತ್ ಪ್ರವೇಶದಿಂದ ಹೊಸ ರಾಜಕೀಯ ಸುವರ್ಣಾವಕಾಶ ತೆರೆದುಕೊಳ್ಳುತ್ತದೆ.
ಪರಾಜಯಗೊಂಡರೆ ಚುನಾವಣಾ ರಾಜಕೀಯ ಕೊನೆಗೊಳ್ಳಲಿದೆ. ಜತೆಗೆ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮುಖಭಂಗವಾಗಲಿದೆ. ಹೀಗಾಗಿ, ಅವರು, ಆ ಪಕ್ಷ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.
ಯದುವೀರ್ ಗೆದ್ದರೆ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ. ರಾಷ್ಟ್ರಮಟ್ಟದಲ್ಲೂ ಮಿಂಚಬಹುದಾಗಿದೆ. ಸೋತರೆ ರಾಜಕೀಯವಾಗಿ ದೊಡ್ಡ ಹಿನ್ನಡೆಯಾಗಲಿದ್ದು, ಬಿಜೆಪಿಗೂ ಸತತ 2 ಬಾರಿ ಗೆದ್ದಿರುವ ಕ್ಷೇತ್ರ ಕೈತಪ್ಪಲಿದೆ.