ಮಂಜುನಾಥ ತಿಮ್ಮಯ್ಯ ಮೈಸೂರು
ತೀವ್ರ ಪೈಪೋಟಿಯಿಂದ ಕೂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾರಿಶಕ್ತಿ ಗುಪ್ತಗಾಮಿನಿಯಂತಿದ್ದು, ಇದು ಫಲಿತಾಂಶ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಊಹಿಸಲಾಗುತ್ತಿಲ್ಲ.
ಮಹಿಳಾ ಮತದಾರರು ಯಾವ ಅಭ್ಯರ್ಥಿಯ ಕೈ ಹಿಡಿಯಲಿದ್ದಾರೆ? ಯಾರನ್ನು ಕೈ ಬಿಡಲಿದ್ದಾರೆ ಎಂಬುದು ಕೌತುಕವಾಗಿದೆ. ಜೂ.4ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆಲ್ಲಿ ಈ ಚಿದಂಬರ ರಹಸ್ಯ ಬಯಲಾಗಲಿದೆ. ಹೀಗಾಗಿ ಅಭ್ಯರ್ಥಿಗಳಲ್ಲಿ ಢವಢವ ಶುರುವಾಗಿದೆ.
ಚುನಾವಣಾ ಅಖಾಡದಲ್ಲಿ 18 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತ್ತು ಬಿಜೆಪಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಇವರಲ್ಲಿಯೇ ಒಬ್ಬರು ಸಂಸದರಾಗಿ ಆಯ್ಕೆಯಾಗಲಿದ್ದಾರೆ. ಅದು ಯಾರು ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಮಾರ್ದನಿಸುತ್ತಿದೆ.
ಏ.26ರಂದು ಕ್ಷೇತ್ರಾದ್ಯಂತ ಮತದಾನ ನಡೆದು ಶೇ.70ರಷ್ಟು ಮತ ಪ್ರಮಾಣ ದಾಖಲಾಗಿದೆ. 20,92,222 ಮತದಾರರ ಪೈಕಿ 14,77,571 ಜನರು ಮತ ಚಲಾಯಿಸಿದ್ದಾರೆ. 10,26,324 ಪುರುಷರ ಮತದಾರರಲ್ಲಿ 7,32,605 ಮತ ಚಲಾಯಿಸುವ ಮೂಲಕ ಶೇ.71ರಷ್ಟು ಮತದಾನವಾಗಿದೆ. ಇನ್ನು ಮಹಿಳಾ ಮತದಾನ ಶೇ.69.90ರಷ್ಟಾಗಿದೆ.
10,65,714 ಮಹಿಳೆ ಮತದಾರರಲ್ಲಿ 7,44,927 ವನಿತೆಯರು ಮತ ಚಲಾವಣೆ ಮಾಡಿದ್ದಾರೆ. ಪುರುಷರಿಗಿಂತ ಶೇ.1.48ರಷ್ಟು ಮತದಾನ ಕಡಿಮೆಯಾಗಿದ್ದರೂ ಮಹಿಳಾ ಮತದಾರರೇ ನಿರ್ಣಾಯಕರು. ಇವರು ಯಾರಿಗೆ ಆಶೀರ್ವಾದ ಮಾಡಿದ್ದಾರೆ ಎಂಬುದೇ ಚರ್ಚಾ ವಿಷಯ. ಇದಕ್ಕೆ ಉತ್ತರ ಸಿಗುವ ಕಾಲವೂ ಸನಿಹವಾಗಿದೆ.
ಈ ಕ್ಷೇತ್ರದಲ್ಲೂ ಗ್ಯಾರಂಟಿ ಯೋಜನೆಗಳ ಗಾಳಿ ಬೀಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಾರಿ ಶಕ್ತಿಯೇ ಕಾಂಗ್ರೆಸ್‌ನ ಕೈ ಹಿಡಿದಿರುವುದು ಇದೀಗ ಚರಿತ್ರೆ. ಇವರ ಋಣ ತೀರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಮಹಿಳಾ ಕೇಂದ್ರೀಕರಿಸಿಯೇ ಅನುಷ್ಠಾನಗೊಳಿಸಿದೆ. ಇವುಗಳ ಫಲಾನುಭವಿಗಳಾದ ವನಿತೆಯರು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ನ ‘ಕೈ’ ಭದ್ರ ಪಡಿಸಿದ್ದಾರೆ ಎಂಬ ನಂಬಿಕೆಯನ್ನು ಆ ಪಕ್ಷ ನಾಯಕರು ಹೊಂದಿದ್ದಾರೆ.
ಗ್ಯಾರಂಟಿ ಯೋಜನೆಯ ಕುರಿತು ಮತಯಾಚನೆಯಲ್ಲೂ ಕೈ ನಾಯಕರು ಹೆಚ್ಚು ಪ್ರಚಾರ ಮಾಡಿದ್ದರು. ಆ ಮೂಲಕ ಮಹಿಳೆಯರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಇದು ಬಿಜೆಪಿಯವರ ನಿದ್ದೆಗೆಡಿಸಿರುವುದಂತೂ ನಿಜ. ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತರಾಗಿ ಮಹಿಳೆಯರು ಕಾಂಗ್ರೆಸ್ ಕಡೆಗೆ ವಾಲಿರಬಹುದೇ? ಇದು ನಿಜವಾದರೆ ಆ ಪಕ್ಷವು ವಿಜಯದ ಗೆರೆ ದಾಟಲು ವೇಗ ದೊರೆತಂತಾಗಲಿದೆ.
ಅಥವಾ ಗ್ಯಾರಂಟಿ ಯೋಜನೆಗಿಂತ ನರೇಂದ್ರ ಮೋದಿ ಪ್ರಭಾವಕ್ಕೆ ವನಿತೆಯರು ಒಳಗಾಗಿರಬಹುದೇ? ಮೋದಿ ಮುಖ ನೋಡಿಕೊಂಡು ಬಿಜೆಪಿಗೆ ಮತ ಹಾಕಿದರೆ ಮತ್ತೆ ಕಮಲ ಅರಳಲು ಅನುಕೂಲವಾಗುತ್ತದೆ.
ಎರಡು ಆಯಾಮದಲ್ಲೂ ರಾಜಕೀಯ ಚರ್ಚೆ ತೀವ್ರವಾಗಿ ನಡೆಯುತ್ತಿವೆ. ಆ ಪಕ್ಷಗಳ ನಾಯಕರು ಈ ದಾಟಿಯಲ್ಲೇ ಫಲಿತಾಂಶದ ಕುರಿತು ವಿಶ್ಲೇಷಣೆ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರು, ಬೆಂಬಲಿತರು ಹಾಗೂ ಮತದಾರರು ವಿಭಿನ್ನ ದೃಷ್ಟಿಕೋನದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಯಾವ ಪಕ್ಷಕ್ಕೆ ಯಾವ ಅಂಶಗಳು ಪ್ಲಸ್ ಆಗಲಿದೆ, ಮೈನಸ್ ಆಗಲಿದೆ ಎಂದು ವಿಷಯಾಧಾರಿತವಾಗಿಯೂ ವಾದಗಳು ನಡೆಯುತ್ತಿವೆ. ಆದರೂ ಫಲಿತಾಂಶವನ್ನು ಯಾರಿಗೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇದುವೇ ಆಸಕ್ತಿ, ಕಾತರ ಸೃಷ್ಟಿಸಿದೆ.
ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಬಿಜೆಪಿ, ಕಾಂಗ್ರೆಸ್‌ನಲ್ಲಿ ಗೋಚರವಾಗುತ್ತಿಲ್ಲ. ಅಭ್ಯರ್ಥಿಯಿಂದ ಹಿಡಿದು ನಾಯಕರು, ಕಾರ್ಯಕರ್ತರಲ್ಲೂ ಈ ಭಾವ ಇದೆ. ಹೀಗಾದರೆ, ಹಾಗಾದರೆ ನಾವು ಜಯ ಗಳಿಸುತ್ತೇವೆ ಎಂಬ ವಾದ ಕೇಳಿ ಬರುತ್ತದೆಯೇ ಹೊರತು, ಆತ್ಮವಿಶ್ವಾಸ ಮಾತುಗಳು ವ್ಯಕ್ತವಾಗುತ್ತಿಲ್ಲ.
1951ರಿಂದ 18 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ 13ನೇ ಬಾರಿಗೆ ಗೆದ್ದಂತೆ ಆಗಲಿದೆ. 10 ವರ್ಷದ ಬಳಿಕ ಕ್ಷೇತ್ರವು ಕೈ ವಶವಾದಂತಾಗಲಿದೆ. ಭದ್ರಕೋಟೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಲಿದೆ. ಅಲ್ಲದೆ ಈ ಕ್ಷೇತ್ರದಿಂದ 47 ವರ್ಷಗಳ ಬಳಿಕ ಒಕ್ಕಲಿಗ ಸಮಾಜದ ವ್ಯಕ್ತಿ ಕಾಂಗ್ರೆಸ್‌ನಿಂದ ಜಯ ಸಾಧಿಸಿದಂತಾಗಲಿದೆ. ತುಳಸಿದಾಸ ಅವರು ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಕೊನೆಯ ಸಂಸದರು.
ವಿಧಾನಸಭೆ, ಪರಿಷತ್ ಸೇರಿದಂತೆ ವಿವಿಧ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ 59 ವರ್ಷದ ಎಂ.ಲಕ್ಷ್ಮಣ್ ಗೆದ್ದರೆ ಸಂಸತ್ ಪ್ರವೇಶದಿಂದ ರಾಜಕೀಯವಾಗಿ ಸುವರ್ಣಾವಕಾಶ ತೆರೆದುಕೊಳ್ಳುತ್ತದೆ. ಪರಾಜಯಗೊಂಡರೆ ಚುನಾವಣಾ ರಾಜಕೀಯ ಕೊನೆಗೊಳ್ಳಲೂಬಹುದು. ಜತೆಗೆ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮುಖಭಂಗವಾಗಲಿದೆ.
ಒಂದು ವೇಳೆ, ಬಿಜೆಪಿ ಜಯ ಸಾಧಿಸಿದರೆ ಹ್ಯಾಟ್ರಿಕ್ ವಿಜಯವಾಗಲಿದೆ. ಜತೆಗೆ ಈ ಪಕ್ಷಕ್ಕೆ 5ನೇ ಜಯವಾಗಲಿದೆ. 2 ಬಾರಿ ಜಯ ಕಂಡಿದ್ದ ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದರೂ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಂತಾಗಲಿದೆ. ಸಿ.ಎಚ್. ವಿಜಯಶಂಕರ್, ಪ್ರತಾಪ್ ಸಿಂಹ ನಂತರ 32 ವರ್ಷದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸತ್ ಪ್ರವೇಶಿಸಿದಂತಾಗಲಿದೆ.
ಅಲ್ಲದೆ ಇವರಿಗೆ ಮೊದಲ ಜಯವಾಗಲಿದೆ. ಪ್ರಥಮ ಪ್ರಯತ್ನದಲ್ಲೇ ಲೋಕಸಭೆ ಸದಸ್ಯರಾಗಲಿದ್ದಾರೆ. ಇದರೊಂದಿಗೆ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ. ರಾಷ್ಟ್ರಮಟ್ಟದಲ್ಲೂ ಮಿಂಚಬಹುದಾಗಿದೆ. ಸೋತರೆ ರಾಜಕೀಯವಾಗಿ ಹಿನ್ನಡೆಯಾಗಲಿದ್ದು, ಬಿಜೆಪಿಗೂ ಸತತ 2 ಬಾರಿ ಗೆದ್ದಿರುವ ಕ್ಷೇತ್ರವನ್ನೂ ಕಳೆದುಕೊಂಡಂತಾಗಲಿದೆ.
ಯದುವೀರ ಗೆದ್ದರೆ ಈ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ 2ನೇ ರಾಜವಂಶಸ್ಥರಾಗಲಿದ್ದಾರೆ. ಬಿಜೆಪಿಯಿಂದ ಈ ಸಾಧನೆ ಮಾಡಿದ ಮೊದಲ ರಾಜಮನೆತನ ಸದಸ್ಯರಾಗಲಿದ್ದಾರೆ. ಇವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 4 ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು.
ಬಿಜೆಪಿಯಿಂದ ಎರಡು ಬಾರಿ ಸೋತಿದ್ದರು. ಅಲ್ಲದೆ, ಅರಸು ಸಮುದಾಯದಿಂದ ಗೆದ್ದ 3ನೇ ವ್ಯಕ್ತಿಯಾಗಲಿದ್ದಾರೆ. ಈ ಸಮುದಾಯದಿಂದ ಹಿಂದೆ ಚಂದ್ರಪ್ರಭಾ ಅರಸ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಂಸದರಾಗಿದ್ದರು. ಯದುವೀರ್ ಗೆದ್ದರೆ 25 ವರ್ಷದ ಬಳಿಕ ಈ ಕ್ಷೇತ್ರವು ಅರಸು ಸಮುದಾಯಕ್ಕೆ ಒಲಿದಂತಾಗಲಿದೆ.