ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಜೂನ್ 4ರಂದು ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಅಂದು ಬೆಳಗ್ಗೆ 7.30ಕ್ಕೆ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಯನ್ನು ತೆರೆಯಲಾಗುತ್ತದೆ. ಆ ಸಮಯದಲ್ಲಿ ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರ್‌ಗಳು ಹಾಜರಿರಬಹುದು. 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಶೇ.70.62ರಷ್ಟು ಮತದಾನವಾಗಿದೆ. 20,92,222 ಮತದಾರರ ಪೈಕಿ 14,77,571 ಮತದಾರರು ಮತ ಚಲಾವಣೆ ಮಾಡಿದ್ದಾರೆ. 2019ರಲ್ಲಿ ಶೇ.69.25ರಷ್ಟು ಮತದಾನವಾಗಿತ್ತು ಎಂದು ಮಾಹಿತಿ ನೀಡಿದರು.
10,990 ಅಂಚೆಪತ್ರಗಳನ್ನು ಹಂಚಿಕೆ ಮಾಡಿದ್ದು, ಈವರೆಗೆ 8606 ಪೋಸ್ಟಲ್ ಮತಪತ್ರಗಳು ಬಂದಿವೆ. ಜೂ.4ರಂದು ಮತ ಎಣಿಕೆ ಕಾರ್ಯ ಪ್ರಾರಂಭವಾಗುವವರೆಗೆ ಅಂಚೆ ಮೂಲಕ ಅಂಚೆಪತ್ರವನ್ನು ಸ್ವೀಕರಿಸಲು ಅವಕಾಶವಿದೆ. ಹೀಗಾಗಿ, ಅಂಚೆಪತ್ರಗಳ ಸಂಖ್ಯೆ 10 ಸಾವಿರ ದಾಟುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಮೇಜುಗಳನ್ನು ವ್ಯವಸ್ಥೆ ಮಾಡಿದ್ದು, ಅಂಚೆ ಮತಪತ್ರ ಎಣಿಕೆಗೆ 25 ಮೇಜುಗಳ ವ್ಯವಸ್ಥೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಡಿಕೇರಿ-20, ವಿರಾಜಪೇಟೆ-20, ಪಿರಿಯಾಪಟ್ಟಣ-17, ಹುಣಸೂರು-20, ಚಾಮುಂಡೇಶ್ವರಿ-25, ಕೃಷ್ಣರಾಜ-19, ಚಾಮರಾಜ-18, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ಮತಗಳನ್ನು 21 ಸುತ್ತುಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಎಲ್ಲ ಅಭ್ಯರ್ಥಿಗಳು ಟೇಬಲ್‌ಗೆ ಒಬ್ಬರಂತೆ ಎಣಿಕೆ ಏಜೆಂಟರನ್ನು ನೇಮಿಸಬಹುದಾಗಿದೆ. ಇವರಿಗೆ ನಿಯೋಜಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಒಂದು ಟೇಬಲ್‌ಗೆ ಒಬ್ಬ ಅಭ್ಯರ್ಥಿ ಒಬ್ಬ ಏಜೆಂಟ್‌ಗೆ ಮಾತ್ರ ಟೇಬಲ್ ಬಳಿ ಇರಲು ಅವಕಾಶ ಇರುತ್ತದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯಕ್ಕಾಗಿ ಮೀಸಲು ಸಿಬ್ಬಂದಿ ಸೇರಿದಂತೆ 160 ಮೇಲ್ವಿಚಾರಕರು, 187 ಸಹಾಯಕರು, 171 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಇವರಿಗೆ ಎರಡು ದಿನಗಳ ತರಬೇತಿಯನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ವಿಧಾನಸಭೆಯ 5 ವಿದ್ಯುನ್ಮಾನ ಮತಯಂತ್ರದೊಂದಿಗೆ ಬ್ಯಾಲೆಟ್ ಯೂನಿಟ್ ಚೀಟಿಗಳನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಏಜೆಂಟರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದನ್ನು ಕಡ್ಡಾಯವಾಗಿ ಧರಿಸಿಕೊಂಡಿರಬೇಕು. ಮುಖ್ಯಪ್ರವೇಶ ದ್ವಾರದ ಬಳಿ ತಪಾಸಣೆ ಮಾಡಲಾಗುತ್ತದೆ. ಪಾಸ್ ಇಲ್ಲದಿದ್ದರೆ ಮತ ಎಣಿಕೆ ಕೇಂದ್ರದ ಒಳಗಡೆ ಪ್ರವೇಶ ಇರಲ್ಲ. ಶಿಸ್ತನ್ನು ಪಾಲಿಸದೆ ಇರುವ ಏಜೆಂಟರನ್ನು ಚುನಾವಣಾಧಿಕಾರಿ ಯಾವುದೇ ಪೂರ್ವ ಮುನ್ಸೂಚನೆ ನೀಡದೆ ಹೊರಗೆ ಹಾಕುವ ಅಧಿಕಾರ ಹೊಂದಿರುತ್ತಾರೆ. ಕೇವಲ ಪೆನ್ನು, ಹಾಳೆಯನ್ನು ತೆಗೆದುಕೊಂಡು ಬರಲು ಮಾತ್ರ ಅವಕಾಶ ಇರುತ್ತದೆ. ಮೊಬೈಲ್ ಫೋನ್ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಕತ್ತರಿ, ಚಾಕು, ಇನ್ನಿತರ ಹರಿತವಾದ ವಸ್ತುಗಳು, ಲೈಟರ್, ಬೆಂಕಿ ಪೊಟ್ಟಣ, ಸ್ಫೋಟಕ ಸಾಮಗ್ರಿಗಳಿಗೆ ನಿರ್ಬಂಧಿಸಲಾಗಿದೆ. ಯಾವುದೇ ಮೆರವಣಿಗೆ, ಪ್ರಚೋದನಕಾರಿ ಭಾಷಣ, ಗೆದ್ದ ಅಭ್ಯರ್ಥಿಗಳ ವಿಜಯೋತ್ಸವವನ್ನು ನಿಷೇಧಿಸಲಾಗಿದೆ. ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ ಎಂದು ಹೇಳಿದರು.
ಮತ ಎಣಿಕೆ ಕೇಂದ್ರ ಸುತ್ತ 100 ಮೀ. ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್‌ಲೆಸ್ ಫೋನ್, ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನೂ ನಿಷೇಧಿಸಲಾಗಿದೆ. ಇದು ಚುನಾವಣಾ ಸಿಬ್ಬಂದಿ, ಅಧಿಕಾರಿಗಳಿಗೆ ಅನ್ವಯವಾಗಲ್ಲ ಎಂದರು
ಮತ ಎಣಿಕೆ ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ ಅಧಿಕೃತ ಜಾಲತಾಣ(/https.results.eci.gov.in) ಮತ್ತು voter helpline ಆ್ಯಪ್ ಮೂಲಕ ಸಾರ್ವಜನಿಕರು ವೀಕ್ಷಿಸಬಹುದು. ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಪರದೆ ಮೂಲಕ ಫಲಿತಾಂಶವನ್ನು ನಿಯಮಿತವಾಗಿ ಪ್ರಕಟಿಸಲಾಗುವುದು ಎಂದು ಡಿಸಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಇತರರು ಇದ್ದರು.