ಜಿಲ್ಲೆ

ಕಾವೇರಿ ವಿವಾದ : ಮೈಸೂರಿನಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ

ಮೈಸೂರು: ಜಿಲ್ಲೆಯ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ನದಿ ನೀರು ಉಳಿಸಲು ನಗರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲು ಭಾನುವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ಕ್ರಿಯಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾವೇರಿ ಕ್ರಿಯಾ ಸಮಿತಿಯಿಂದ ಶನಿವಾರ ಮತ್ತೊಂದು ಸಭೆ ನಡೆಸಿ ಹೋರಾಟದ ಅಂತಿಮ ರೂಪುರೇಷೆ ಸಿದ್ಧಪಡಿಸಲು ತೀರ್ಮಾ ನಿಸಲಾಯಿತು. ಕಾವೇರಿ ಕ್ರಿಯಾ ಸಮಿತಿಗೆ ಎಲ್ಲ ಸಂಘ ಸಂಸ್ಥೆಗಳ ಪ್ರಮುಖರನ್ನು ಸೇರಿಸಿಕೊಂಡು ಪದಾಧಿಕಾರಿಗಳನ್ನು ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಸಮಿತಿ ಸದಸ್ಯ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಘೋರ ಅನ್ಯಾಯವಾಗಿದ್ದು, ನದಿ ನೀರು ಉಳಿಸಲು ದೊಡ್ಡ ಮಟ್ಟದ ಹೋರಾಟ ನಡೆಸುವ ಅವಶ್ಯಕತೆ ಇದೆ. ಕೆ.ಆರ್. ವೃತ್ತದಲ್ಲಿ ಮುಂದಿನ ವಾರದಿಂದ ನಿರಂತರ ಹೋರಾಟ ನಡೆಸೋಣ ಎಂದರು.

ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿ ಇಲ್ಲದ ಸಂದರ್ಭ ಕಾವೇರಿ ವಿಚಾರವಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಹೋರಾಟ ನಡೆಸಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಕಾವೇರಿ ನದಿ ನೀರಿನ ವಿಚಾರವನ್ನು ಮರೆತ್ತಿದ್ದಾರೆ. ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ತೋರುತ್ತಿರುವ ಆಸಕ್ತಿ ಕಾವೇರಿ ನದಿ ನೀರು ಉಳಿಸುವ ವಿಚಾರದಲ್ಲಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಬೇಧ ಮರೆತು ಹೋರಾಟ

ಸಮಿತಿ ಸದಸ್ಯ ಪಿ.ಸಿ. ನಾಗರಾಜ್ ಮಾತನಾಡಿ, ಇದು ಒಂದು ಪಕ್ಷ ಅಥವಾ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ. ಕಾವೇರಿ ನದಿ ನೀರು ಉಳಿಸಲು ನಡೆಯುತ್ತಿರುವ ಹೋರಾಟದಲ್ಲಿ ಪಕ್ಷ ಬೇಧ ಮರೆತು ಎಲ್ಲರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಿತಿ ಸದಸ್ಯ ಎಂ. ಮಂಜುನಾಥ್ ಮಾತನಾಡಿ, ಕಾವೇರಿ ನದಿ ನೀರನ್ನು ಉಳಿಸುವ ನಿಟ್ಟಿನಲ್ಲಿ ತೀವ್ರ ತರದ ಹೋರಾಟ ನಡೆಸುವ ಅವಶ್ಯಕತೆ ಇದೆ. ಹಾಗಾಗಿ ಮೈಸೂರು ಬಂದ್‌ಗೆ ಕರೆ ನೀಡಬೇಕು. ಇದರ ಜತೆಗೆ ನ್ಯಾಯಾಲಯದಲ್ಲೂ ಹೋರಾಟ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರು, ಸಂಸದರು ಧ್ವನಿ ಎತ್ತಲಿ

ಸಮಿತಿ ಸದಸ್ಯ ಎಂ.ಜೆ. ಸುರೇಶ್ ಗೌಡ ಮಾತನಾಡಿ, ಕಾವೇರಿ ಹೋರಾಟ ಮೈಸೂರು ಹಾಗೂ ಮಂಡ್ಯಕ್ಕೆ ಸೀಮಿತವಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದರೂ ಬೆಂಗಳೂರಿನ ಜನರು ಕಾವೇರಿ ವಿಚಾರದಲ್ಲಿ ಹೋರಾಟಕ್ಕೆ ಧುಮುಕುತ್ತಿಲ್ಲ. ಕಾವೇರಿ ನದಿ ನೀರು ವಿಚಾರವಾಗಿ ಸಂಸದರು ಹಾಗೂ ಶಾಸಕರು ಮೌನ ವಹಿಸಿರುವುದು ಸರಿಯಲ್ಲ, ಅವರು ಈ ಬಗ್ಗೆ ಧ್ವನಿ ಎತ್ತಬೇಕು. ಹೋರಾಟವನ್ನು ತೀವ್ರಗೊಳಿಸಿ ರಾಜ್ಯಮಟ್ಟದಲ್ಲಿ ಕಾವೇರಿ ಕ್ರಿಯಾ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.

ಸಮಿತಿ ಸದಸ್ಯ ಮೋಹನ್ ಕುಮಾರ್ ಗೌಡ ಗೌಡ ಮಾತನಾಡಿ, ರಾಜಕಾರಣಿಗಳು ಅಧಿಕಾರ ಇಲ್ಲದ ಸಂದರ್ಭ ಕಾವೇರಿ ಹೋರಾಟ ದಲ್ಲಿ ಭಾಗವಹಿಸುತ್ತಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾವೇರಿ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ನದಿ ನೀರು ಉಳಿಸಲು ನಾವು ರಾಜಕೀಯ ರಹಿತವಾಗಿ ಹೋರಾಟ ನಡೆಸೋಣ ಎಂದು ಹೇಳಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಎಸ್.ಡಿ. ರಾಕೇಶ್, ಸಿದ್ದಲಿಂಗಪ್ಪ, ಬಿ.ಕೆ. ರಾಜೇಶ್, ಮಹೇಶ್ ಗೌಡ, ಎಸ್. ಬಸಪ್ಪ, ಮಹದೇವಸ್ವಾಮಿ ಹಾಗೂ ಇತರರು ಇದ್ದರು.