ಮೈಸೂರು: ದಸರಾ ಸಮೀಪಿಸುತ್ತಿದ್ದರೂ ನಗರದ ಹಲವಾರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಇನ್ನೂ ಕೈಗೊಂಡಿಲ್ಲವೆಂದು ಆರೊಪಿಸಿ ಮೈಸೂರು ಕನ್ನಡ ವೇದಿಕೆ ನಗರದ ಸಯ್ಯಜಿ ರಾವ್ ರಸ್ತೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಯುದ್ಧ ಎದುರಾದ ಶಸ್ತ್ರಾಭ್ಯಾಸ ಅಂದಅಹಾಗೆ ದಸರಾ ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇನ್ನೂ ಹಲವಾರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಕೈಗೊಂಡಿಲ್ಲ. ಈಗಾಗಲೇ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯನ್ನು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕೈಗೊಂಡರೆ ಹೆಚ್ಚಿನ ಸಮಯ ಬಾಳಿಕೆ ಬರುತ್ತದೆ. ಆದರೆ, ಮಳೆಗಾಲದಲ್ಲಿ ಕೈಗೊಂಡರೆ ಮತ್ತೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತದೆ. ಮಳೆಯ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡು ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ದಸರಾ ಗೋಲ್ಡ್ ಪಾಸ್ ಹಂಚಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದೆಯೇ ಹೊರತು ರಸ್ತೆಗಳ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ.ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ದಸರಾದಲ್ಲಿ ದೀಪಾಲಂಕಾರಕ್ಕೆಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ರಸ್ತೆಗಳು ಗುಂಡಿ ಬಿದ್ದು ಮೃತ್ಯುವಿಗೆ ಆಹ್ವಾನ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ ,ಪ್ಯಾಲೇಸ್ ಬಾಬು, ಎಲ್ಐಸಿ ಸಿದ್ದಪ್ಪ, ಗೋವಿಂದರಾಜು, ಸ್ವಾಮಿಗೌಡ ,ಹರೀಶ್ ಕುಮಾರ್, ಚಿನ್ನಪ್ಪ, ಶಿವುಗೌಡ ಹಾಗೂ ಇತರರು ಪಾಲ್ಗೊಂಡರು.