ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ಚಟುವಟಿಕೆಗಳ ಕಿರೀಟವಾದ ನಗರದ ಕಲಾಮಂದಿರ ನಿರ್ಮಾಣವಾಗಿ 39 ವರ್ಷಗಳು ಕಳೆದಿವೆ. ಹೀಗಾಗಿ ಕಲಾಮಂದಿರಕ್ಕೆ ಆಧುನಿಕ ಸ್ಪರ್ಶ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಕೈಗೊಂಡಿದೆ.
ಅಲ್ಲದೆ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಈಗಾಗಲೇ ಮಂಜೂರಾಗಿರುವ 59 ಲಕ್ಷ ರೂ. ವೆಚ್ಚದಲ್ಲಿ ಕಿರುರಂಗ ಮಂದಿರದ ದುರಸ್ತಿ ಕಾರ್ಯವೂ ಆರಂಭವಾಗಲಿದೆ.
1985ರಲ್ಲಿ ಕಲಾಮಂದಿರ ನಿರ್ಮಾಣವಾಯಿತು. 1989ರಲ್ಲಿ ಕಲಾಮಂದಿರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬರುವ ಅಲ್ಪ ಅನುದಾನದಲ್ಲಿ ಆಯಾ ಕಾಲಘಟ್ಟದಲ್ಲಿ ಕೆಲವೊಂದು ಕಾಮಗಾರಿಗಳು ನಡೆದಿವೆ.
ಇದೀಗ ಕಲಾಮಂದಿರ ಆಧುನೀಕರಣಗೊಳ್ಳಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕಲಾಮಂದಿರದ ಶೌಚಗೃಹ ಹಾಗೂ ಇತರ ದುರಸ್ತಿ ಕಾರ್ಯಕ್ಕೆ ಪ್ರಸ್ತಾವನೆ ಸಲ್ಲಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಿದೆ.
ಕಳೆದ ಬಾರಿ ಕಲಾಮಂದಿರದ ದುರಸ್ತಿಗೆ ಸರ್ಕಾರ 40 ಲಕ್ಷ ರೂ. ನೀಡಿತ್ತು. ಇದರಿಂದ ಕಲಾಮಂದಿರ ಹಾಗೂ ಕಿರುರಂಗಮಂದಿರಕ್ಕೆ ಬೇಕಾದ ಕೆಲವೊಂದು ಉಪಕರಣಗಳನ್ನು ಖರೀದಿಸಲಾಗಿತ್ತು. ಪ್ರಸ್ತುತ ಕಲಾಮಂದಿರದ ಚೇರ್‌ಗಳನ್ನು ಅಳವಡಿಸಿ 10 ವರ್ಷ ಆಗಿದ್ದು, ದುರಸ್ತಿ ಬೇಡುತ್ತಿವೆ. ಹೀಗಾಗಿ ಚೇರ್‌ಗಳನ್ನು ಬದಲಾವಣೆ ಮಾಡಬೇಕಿದೆ. ವೇದಿಕೆಯಲ್ಲಿ ವುಡನ್ ಫ್ಲೊರಿಂಗ್ ಮಾಡಬೇಕು.
ಹಳೇ ಕಟ್ಟಡವಾಗಿರುವುದರಿಂದ ನೀರು ಸೋರಿಕೆ ಸಮಸ್ಯೆ ಇದೆ. ಕಬ್ಬಿಣದ ಪೈಪ್ ಬಳಸಿರುವುದರಿಂದ ತುಕ್ಕು ಹಿಡಿದಿವೆ. ಕಲಾಮಂದಿರದ ವಿಶಾಲ ಛಾವಣಿಯಲ್ಲಿ ಟೈಲ್ಸ್‌ಗಳನ್ನು ಅಳವಡಿಸಿದ್ದು, ಮಳೆ ನೀರು ಸೋರಿಕೆ ಆಗುತ್ತಿದೆ. ಇದನ್ನು ದುರಸ್ತಿ ಮಾಡಬೇಕಿದೆ.
ಕಲಾಮಂದಿರ ಸಾಂಸ್ಕೃತಿಕ ಚಟುವಟಿಕೆಗಳ ಶಕ್ತಿ ಕೇಂದ್ರ. ಸರ್ಕಾರ ಇದನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕಿದೆ. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರ ಇಲಾಖೆಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಲಾಗುತ್ತಿದೆ. ಈ ಮೊದಲು ವಾರ್ಷಿಕ 32 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷ 16 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿತ್ತು. ಕಲಾಮಂದಿರಕ್ಕೆ ಕಾಯಂ ಹುದ್ದೆಗಳೇ ಇಲ್ಲ. ಇದುವರೆಗೂ ಅರೆಕಾಲಿಕ ನೌಕರರನ್ನೇ ಅವಲಂಬಿಸುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಕಲಾಪ್ರೆಮಿಗಳು ಒತ್ತಾಯಿಸಿದ್ದಾರೆ.
ಕಲಾಮಂದಿರದ ಕುರ್ಚಿಗಳ ಬದಲಾವಣೆ ಆಗಬೇಕಿದೆ. ಸದರಿ ಕುರ್ಚಿಗಳನ್ನು ಅಳವಡಿಸಿ ಅನೇಕ ವರ್ಷಗಳಾಗಿದ್ದು, ಬಹುತೇಕ ಕುರ್ಚಿಗಳು ಹಾಳಾಗಿವೆ. ಕಲಾಮಂದಿರದ ವಿಶಾಲ ಛಾವಣಿಯಲ್ಲಿ ಟೈಲ್ಸ್‌ಗಳನ್ನು ಅಳವಡಿಸಿದ್ದು, ಮಳೆ ನೀರು ಸೋರಿಕೆ ಆಗುತ್ತಿದೆ. ಅದನ್ನು ದುರಸ್ತಿ ಮಾಡಬೇಕಿದೆ. ದುರಸ್ತಿಯಾಗದಿದ್ದರೆ ಕಲಾ ಮಂದಿರಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಧ್ವನಿ-ಬೆಳಕಿಗೆ ಮತ್ತಷ್ಟು ಆಧುನಿಕ ಸ್ಪರ್ಶ ನೀಡಬೇಕಿದೆ. ನಗರದ ಬಹುತೇಕ ದೊಡ್ಡ ಕಾರ್ಯಕ್ರಮಗಳು ಕಲಾಮಂದಿರದಲ್ಲೇ ನಡೆಯುತ್ತವೆ. ಬಹುತೇಕ ನಾಟಕಗಳ ಪ್ರದರ್ಶನಕ್ಕೂ ಕಲಾಮಂದಿರ ವೇದಿಕೆ ಆಗುತ್ತಿದೆ. ಆದ್ದದರಿಂದ ಕಲಾಮಂದಿರದಲ್ಲಿ ಆಧುನಿಕವಾದ ಧ್ವನಿ-ಬೆಳಕಿನ ವ್ಯವಸ್ಥೆ ಮಾಡಬೇಕಿದೆ.
ಶೌಚಗೃಹ, ಕಾಂಪೌಂಡ್ ನಿರ್ಮಾಣ, ಕಮೋಡ್, ಪೈಪ್‌ಲೈನ್ ಸರಿಪಡಿಸಬೇಕಿದೆ. ಕಲಾಮಂದಿರದಲ್ಲಿನ ಶೌಚಗೃಹ ತುಂಬಾನೇ ಹದಗೆಟ್ಟಿದ್ದು, ಮೊದಲು ಶೌಚಗೃಹ ಸರಿಪಡಿಸುವ ಕೆಲಸವಾಗಬೇಕಿದೆ. ಕುಡಿಯುವ ನೀರಿಗಾಗಿ ಫಿಲ್ಟರ್ ಅಳವಡಿಸಬೇಕಿದೆ. ವಿಶೇಷಚೇತನರು ಕಚೇರಿಗೆ ಬರಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಅಂತಾರಾಷ್ಟ್ರೀಯ ಮಟ್ಟದ ಆರ್ಟ್ ಗ್ಯಾಲರಿ ನಿರ್ಮಿಸಬೇಕಿದೆ.
ಕಿರುರಂಗ ಮಂದಿರವು ಹವ್ಯಾಸಿ ಕಲಾತಂಡಗಳು ಕಾರ್ಯಕ್ರಮ ಅಥವಾ ನಾಟಕ ಪ್ರದರ್ಶಿಸಲು ಅನುಕೂಲವಾಗಿದೆ. ಇದರ ದುರಸ್ತಿಗಾಗಿ ಸರ್ಕಾರದಿಂದ ಈಗಾಗಲೇ 59 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟದ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ಧ್ವನಿ ಮತ್ತು ಬೆಳಕು ವ್ಯವಸ್ಥೆ ಹಾಗೂ ಕರ್ಟನ್ ಬದಲಿಸುವ ಕೆಲಸ ಆಗಬೇಕಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಈಗಾಗಲೇ ಮಂಜೂರಾಗಿರುವ 59 ಲಕ್ಷ ರೂ. ವೆಚ್ಚದಲ್ಲಿ ಕಲಾಮಂದಿರ ಆವರಣದ ಕಿರುರಂಗಮಂದಿರದ ಧ್ವನಿ ಮತ್ತು ಬೆಳಕು ಕೆಲಸ ಆರಂಭವಾಗಲಿದೆ. ಕಲಾಮಂದಿರದ ಶೌಚಗೃಹ ಹಾಗೂ ಇತರ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರವೇ ಕಲಾ ಮಂದಿರದ ಸಮಗ್ರ ಅಭಿವೃದ್ಧಿ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು.ಡಾ.ಎಂ.ಡಿ.ಸುದರ್ಶನ್ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.