ಮಂಜುನಾಥ ತಿಮ್ಮಯ್ಯ ಮೈಸೂರು
ನವರಾತ್ರಿ ರಂಗಿನೊಂದಿಗೆ ಬೆಳಕಿನ ಸಿಂಗಾರ, ದೀಪಗಳ ಚಿತ್ತಾರದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಕಂಗೊಳಿಸಲು ಸಜ್ಜಾಗುತ್ತಿದೆ. ಪ್ರವಾಸಿಗರ ಕಣ್ಮನ ಸೆಳೆಯಲೂ ತಯಾರಾಗುತ್ತಿದೆ…!
ಮೈಸೂರು ದಸರಾ ಮಹೋತ್ಸವದಲ್ಲಿ ಬೆಳಕಿನ ಚೆಲುವು ಅಗ್ರ ಆಕರ್ಷಣೆ. ಅದಕ್ಕಾಗಿ ದೀಪಾಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಲ ಅದ್ದೂರಿ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ, ಬೆಳಕಿನ ಅಲಂಕಾರವೂ ವೈಭವದಿಂದಲೇ ಕೂಡಿರಲಿದೆ. ಇನ್ನೂ ಒಂದು ವಾರದ ಹೊತ್ತಿಗೆ ಬೆಳಕಿನ ಚೆಲುವಿನಲ್ಲಿ ಮಿಂಚುಳ್ಳಿಯಂತೆ ಮಿನುಗುವ ಮೈಸೂರಿನ ಅಂದವನ್ನು ಕಣ್ಮುಂಬಿಕೊಳ್ಳಲು ಪ್ರವಾಸಿಗರು ದೌಡಾಯಿಸಬಹುದು. ಮಿಣುಕು ನೋಟ ದರ್ಶನವಾಗಲಿದೆ.
ಈ ಸಲ ದೀಪಾಲಂಕಾರವನ್ನು ಮತ್ತಷ್ಟು ವರ್ಣರಂಜಿತವಾಗಿ ಆಯೋಜಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಕ್ರಮ ಕೈಗೊಂಡಿದ್ದು, ಅದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಲೈಟಿಂಗ್ ಅಳವಡಿಕೆಯೂ ಬಿರುಸಿನಿಂದ ಸಾಗಿದೆ.
140 ಕಿ.ಮೀ. ರಸ್ತೆಗೆ ದೀಪಾಲಂಕಾರ ದಿಬ್ಬಣ
ನವರಾತ್ರಿ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿಯನ್ನು ಝಗಮಗಿಸುವಂತೆ ಮಾಡಲು ವಿವಿಧ ಬಗೆಯ ದೀಪಾಲಂಕಾರವನ್ನು ಮಾಡಲಾಗುತ್ತಿದೆ. ನಗರ ವ್ಯಾಪ್ತಿಯೊಳಗೆ 130ರಿಂದ 140 ಕಿ.ಮೀ. ರಸ್ತೆಗೆ ದೀಪಾಲಂಕಾರ ದಿಬ್ಬಣ ಇರಲಿದೆ. ಇದರೊಂದಿಗೆ ಅಂದಾಜು 100 ವೃತ್ತಗಳು ದೀಪಗಳ ಸಿಂಗಾರದಿಂದ ಹೊಳೆಯಲಿವೆ. ಸಯ್ಯಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ, ವಿವಿಧೆಡೆ ಸುಸ್ವಾಗತ ಕಮಾನುಗಳ ದೀಪದಿಂದ ಕಳೆಗಟ್ಟುವ ಮೂಲಕ ಪ್ರವಾಸಿಗರನ್ನು ಸ್ವಾಗತ ಕೋರಲಿವೆ.
ವಿವಿಧೆಡೆ ವಿದ್ಯುತ್ ದೀಪಗಳಿಂದ ಮಾಡಿರುವ ಅಂದಾಜು 80 ಆಕೃತಿಗಳು ರಾರಾಜಿಸಲಿವೆ. ಇವುಗಳು ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ಇನ್ನಿತರ ಪ್ರಮುಖ ವೃತ್ತಗಳಲ್ಲಿ ನೋಡಲು ಸಿಗಲಿವೆ.
ಒಂದೆಡೆ ಮೈಸೂರಿನ ರಸ್ತೆಗಳು ಹೊಳೆಯುವುದರೊಂದಿಗೆ ಸರ್ಕಾರಿ ಕಟ್ಟಡಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಥಳಥಳಿಸಲಿವೆ. ಸಿದ್ಧಾರ್ಥನಗರದಲ್ಲಿರುವ ಹೊಸ ಜಿಲ್ಲಾಡಳಿತ ಕಚೇರಿ, ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಮಹಾನಗರ ಪಾಲಿಕೆ, ಮುಡಾ, ಕಾಡಾ ಕಚೇರಿ, ಕೆ.ಆರ್.ಆಸ್ಪತ್ರೆ, ಕ್ರಾಫರ್ಡ್ ಭವನ, ರೈಲ್ವೆ ನಿಲ್ದಾಣದ ಕಚೇರಿ, ಮಹಾರಾಜ ಕಾಲೇಜು ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳೂ ದೀಪಾಲಂಕಾರದಲ್ಲಿ ಪ್ರಕಾಶಿಸಲಿವೆ.
ದಸರಾ ಸಂದರ್ಭದಲ್ಲಿ ನಿತ್ಯ ಸಂಜೆ 7ರಿಂದ ರಾತ್ರಿ 10ರ ವರೆಗೆ ಸತತ ಮೂರು ಗಂಟೆ ಕಾಲ ವೈವಿಧ್ಯಮಯವಾದ ಲಕ್ಷಾಂತರ ದೀಪಗಳು ಪ್ರಜ್ವಲಿಸಲಿವೆ. ಪ್ರವಾಸಿಗರು ದೀಪಾಲಂಕಾರವನ್ನು ವೀಕ್ಷಿಸಿ ಆನಂದಿಸಬಹುದು.
ದಸರಾ ದೀಪಾಲಂಕಾರಕ್ಕಾಗಿ ಸೆಸ್ಕ್ ವತಿಯಿಂದ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದು, ತುಂಡು ಗುತ್ತಿಗೆ ಮಾದರಿಯಲ್ಲಿ ಒಂದೊಂದು ರಸ್ತೆಯನ್ನು ಗುತ್ತಿಗೆ ವಹಿಸಲಾಗುತ್ತಿದೆ. ಈಗಾಗಲೇ ವಿವಿಧ ರಸ್ತೆಯಲ್ಲಿ ಬಗೆಬಗೆಯ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡುವುದಾಗಿ ಕೆಲ ಗುತ್ತಿಗೆದಾರರು ಕಲ್ಪಿತ ಮಾದರಿಯನ್ನು ಪ್ರದರ್ಶಿಸಿದ್ದಾರೆ. ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗಿನ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರದಲ್ಲಿ ಯಾವುದೇ ಬದಲಾವಣೆ ಮಾಡದೆ, ಈ ಹಿಂದೆ ಇದ್ದಂತೆ ಮುಂದುವರಿಸಲಾಗುತ್ತಿದೆ. ಅರಮನೆ ದೀಪಾಲಂಕಾರಕ್ಕೆ ಹೊಂದಿಕೊಂಡಂತೆ ಕಳೆದ ಬಾರಿ ಬಳಸಿದ ಬಲಬ್‌ಗಳ ಮಾದರಿಯನ್ನೇ ಈ ಸಲವೂ ಅಳವಡಿಸಲಾಗುತ್ತಿದೆ.
ಈ ಸಲದ ದೀಪಾಲಂಕಾರಕ್ಕೆ ಅಂದಾಜು 6.50 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. 2,42,012 ಯೂನಿಟ್ ವಿದ್ಯುತ್ ವ್ಯಯ ಸಾಧ್ಯತೆ ಇದೆ. ಜಂಬೂಸವಾರಿ ಮಾರ್ಗ ಹೊರತುಪಡಿಸಿ ಉಳಿದ ಎಲ್ಲ ರಸ್ತೆಗಳಲ್ಲೂ ವಿದ್ಯುತ್ ಮಿತ ಬಳಕೆ ಮಾಡಲು ಎಲ್‌ಇಡಿ ಲೈಟ್‌ಗಳನ್ನೇ ಬಳಸಲಾಗುತ್ತಿದೆ. ವಿವಿಧ ರಸ್ತೆಗಳಲ್ಲಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಈಗಾಗಲೇ ದೀಪಾಲಂಕಾರದ ಲೈಟಿಂಗ್ ಅಳವಡಿಕೆ ಕೆಲಸದಲ್ಲಿ ತೊಡಗಿದ್ದಾರೆ.
ದೀಪಾಲಂಕಾರಕ್ಕೆ ಒಂದೇ ವಿನ್ಯಾಸದ ಸೀರಿಯಲ್ ಸೆಟ್ ಲೈಟ್‌ಗಳನ್ನು ಉಪಯೋಗ ಮಾಡಲಾಗುತ್ತಿದೆ. ಗುತ್ತಿಗೆದಾರರು ಕಳೆದ ಕೆಲ ವರ್ಷಗಳ ಹಿಂದೆ ಅಳವಡಿಸಿರುವ ಸೀರಿಯಲ್ ಸೆಟ್‌ಗಳು, ಲೈಟ್‌ಗಳು, ಹಳೇ ವಿನ್ಯಾಸ ಪದ್ಧತಿಯನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಇದರಿಂದ ಹೊಸತನ ಕಾಣುತ್ತಿಲ್ಲ. ಎಲ್ಲೆಡೆ ಒಂದೇ ರೀತಿ ಗೋಚರವಾಗುತ್ತದೆ. ಈ ಸಲ ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು. ಹಿಂದಿನ ವರ್ಷ ದೀಪಾಲಂಕಾರದ ಫೋಟೋ ಗಮನಿಸಿ ಈ ಸಲ ಹೊಸ ವಿನ್ಯಾಸದಲ್ಲಿ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ದೀಪಾಲಂಕಾರಕ್ಕಾಗಿ ಕಳಪೆ ಗುಣಮಟ್ಟದ, ಕಡಿಮೆ ಬೆಲೆಯ ಚೈನಾ ಸೀರಿಯಲ್ ಸೆಟ್ ಬಳಸದಂತೆ ಸೂಚನೆ ನೀಡಲಾಗಿದೆ. 2 ವರ್ಷದ ಹಿಂದೆ ರಾಮಸ್ವಾಮಿ ವೃತ್ತದ ಬಳಿ ಮಳೆಯಿಂದಾಗಿ ಜೋತು ಬಿದ್ದ ಸೀರಿಯಲ್ ಸೆಟ್ ಬೆಂಕಿಗೆ ಆಹುತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಒತ್ತು ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸೆಸ್ಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸಲ 21 ದಿನಗಳ ಕಾಲ ದೀಪಾಲಂಕಾರ ಇರಲಿದೆ. ದಸರಾ ಮುಗಿದ ಬಳಿಕವೂ ದೀಪಾಲಂಕಾರ ಮುಂದುವರಿಯಲಿದೆ. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ಒಳಗೊಂಡಂತೆ ಅಕ್ಟೋಬರ್ ಅಂತ್ಯದವರೆಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಇರಲಿದೆ. ಕಳೆದ ಸಲವೂ ದಸರಾ ಬಳಿಕವೂ ದೀಪಾಲಂಕಾರವನ್ನು ವಿಸ್ತರಣೆ ಮಾಡಲಾಗಿತ್ತು
ಈ ಸಲ ದಸರಾವನ್ನು ವಿಭಿನ್ನ ಮತ್ತು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೀಪಾಲಂಕಾರವನ್ನು ಆಕರ್ಷಕವಾಗಿಸಲು ಕ್ರಮ ವಹಿಸಲಾಗಿದೆ. ದೀಪಾಲಂಕಾರವನ್ನು ಹೆಚ್ಚು ಸುಂದರವಾಗಿ ರೂಪಿಸಲಾಗುವುದು.ಜಿ.ಶೀಲಾ ವ್ಯವಸ್ಥಾಪಕ ನಿರ್ದೇಶಕಿ, ಸೆಸ್ಕ್