ಜಿಲ್ಲೆ

ವಿಜೃಂಭಣೆಯಿಂದ ಜರುಗಿದ ಮೈಸೂರು ಕರಗ

ಆರ್.ಕೃಷ್ಣ

ಮೈಸೂರು: ಶತಮಾನದ ಸಂಭ್ರಮದ ಮೈಸೂರು ಕರಗ ಮಹೋತ್ಸವ ಶನಿವಾರ ರಾತ್ರಿ ನಗರದ ವಿವಿಧ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ನಾಡಹಬ್ಬ ದಸರಾ ಮಹೋತ್ಸವದಂತೆ ಸಾಂಸ್ಕೃತಿಕ ನಗರಿಯ ಮೆರಗು ಹೆಚ್ಚಿಸಿರುವ ಆಚರಣೆಗಳಲ್ಲಿ ಈಗ ಕರಗ ಮಹೋತ್ಸವ ಕೂಡ ಒಂದಾಗಿದೆ. ಮಿನಿ ದಸರಾದಂತೆ ನಗರದ ವಿವಿಧ ರಸ್ತೆಗಳಲ್ಲಿ ರಾತ್ರಿ ಇಡೀ ಸಾಗಿದ ಕರಗ ಉತ್ಸವನ್ನು ನೂರಾರು ಜನ ಕಣ್ಣುತುಂಬಿಕೊಂಡರು.
ಇಟ್ಟಿಗೆಗೂಡಿನ ರೇಣುಕಾದೇವಿ ಕರಗ ದೇವಸ್ಥಾನದಲ್ಲಿ ಐದು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಾ ಕಾರ್ಯಗಳು ಜರುಗಿದವು. ಶನಿವಾರ ರಾತ್ರಿ ದೇವಸ್ಥಾನದಿಂದ ಹೊರಟ ಕರಗಗಳು ವಿವಿಧ ರಸ್ತೆಗಳಲ್ಲಿ ಸುಮಾರು 12 ಕಿ.ಮೀ.ಯಷ್ಟು ಸಂಚರಿಸಿ ಭಾನುವಾರ ಬೆಳಗಿನ ಜಾವ ಇಟ್ಟಿಗೆಗೂಡಿನ ದೇವಸ್ಥಾನ ತಲುಪಿತು. ಭಾನುವಾರದಂದು ಓಕುಳಿ ತಂಬಿಟ್ಟಿನ ಆರತಿಯಂಥ ಆಚರಣೆಗಳೊಂದಿಗೆ ಕರಗ ಸಂಪನ್ನಗೊಳ್ಳಲಿದೆ. ಮೇ 19ರಂದು ಪಶ್ಚಿಮ ವಾಹಿನಿಯಲ್ಲಿ ಕರಗವನ್ನು ವಿಸರ್ಜಿಸಲಾಗುತ್ತದೆ.
ಕರಗ ಮಹೋತ್ಸವ ಶತಮಾನದ ಹಿನ್ನೆಲೆಯಲ್ಲಿ ವಿವಿಧ 26 ಕಲಾ ತಂಡಗಳು ಭಾಗವಹಿಸಿ ಗಮನ ಸೆಳೆದವು. ಇದು ಮತ್ತೊಮ್ಮೆ ನಾಡಹಬ್ಬ ದಸರಾ ಮೆರವಣಿಗೆಯನ್ನು ಮೆಲುಕು ಹಾಕುವಂತೆ ಮಾಡಿತು. ಕರಗಹೊತ್ತ ಕರಗಧಾರಿಗಳು ರಾತ್ರಿಯಿಡೀ ನಗರದ ವಿವಿಧ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರೊಟ್ಟಿಗೆ ನೂರಾರು ಭಕ್ತರು ಜಾಗರಣೆ ಇದ್ದು, ತಾವೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇಟ್ಟಿಗೆಗೂಡು ಕರಗವು ಚಾಮುಂಡೇಶ್ವರಿ ಹಾಗೂ ಮಾರಿಯಮ್ಮ ಶಕ್ತಿ ದೇವತೆಗಳ ಆರಾಧನೆಗೆ ಮಾಡಿಕೊಂಡು ಬರಲಾಗುತ್ತಿದೆ. ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ಚಾಮುಂಡಿ ಹಾಗೂ ಸಾಂಕ್ರಾಮಿಕ ರೋಗ, ಬರ, ಕ್ಷಾಮಗಳ ನಿವಾರಣೆಗಾಗಿ ಮಾರಿಯಮ್ಮನ ಆರಾಧನೆ ಮಾಡುವ ಸಂಪ್ರದಾಯ ನಡೆಯುತ್ತ ಬಂದಿದೆ.
ಅರಮನೆಗೆ ಸಮೀಪವೇ ಇರುವ ಇಟ್ಟಿಗೆಗೂಡು ಸುತ್ತಮುತ್ತ ಪ್ಲೇಗ್, ಕಾಲರಾ ಹಾವಳಿ ಹೆಚ್ಚಾಗಿದ್ದರಿಂದ ದೇವಿಯರ ಮೂರ್ತಿಗಳನ್ನು ಹೊತ್ತು ಕರಗ ಆಚರಣೆ ಆರಂಭಿಸಿದರು. ಇದರಿಂದ ಆ ವರ್ಷ ಸಾವಿನ ಪ್ರಮಾಣವೂ ಕಡಿಮೆ ಆಗಿ, ಮಳೆ ಬೆಳೆಯೂ ಹೆಚ್ಚಾಯಿತು. ಅಲ್ಲಿಂದ ಮೈಸೂರು ಕರಗ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ರೇಣುಕಾದೇವಿ ಕರಗ ದೇವಸ್ಥಾನದ ಟ್ರಸ್ಟಿಗಳು ಹೇಳುತ್ತಾರೆ.