ಮೈಸೂರು: ದೇಶ-ಭಾಷೆ ಬಗ್ಗೆ ಅಭಿಮಾನ ಹಾಗೂ ಸಾಂಸ್ಕೃತಿಕ ನೆಲೆಯುಳ್ಳ ಪುಣ್ಯಭೂಮಿಯಲ್ಲಿ ಮಾತ್ರ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕದಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ.ರಾಮೇಗೌಡ (ರಾಗೌ) ಅವರಿಗೆ ಡಾ.ಮಳಲಿ ವಸಂತಕುಮಾರ್ ದತ್ತಿ ಪ್ರಶಸ್ತಿ ಪ್ರದಾನದಲ್ಲಿ ಅವರು ಮಾತನಾಡಿದರು.
ಯಾವುದೇ ದೇಶ-ಭಾಷೆ ಬಗ್ಗೆ ಅಭಿಮಾನ, ಸಾಂಸ್ಕೃತಿಕ ನೆಲೆಯುಳ್ಳ ಪುಣ್ಯಭೂಮಿಯಲ್ಲಿ ಮಾತ್ರ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಸಾಧ್ಯ. ಅದರಲ್ಲೂ ದತ್ತಿ ಕಾರ್ಯಕ್ರಮಗಳು ಮೈಸೂರು ಮಣ್ಣಿನ ಗುಣದ ಸಂಕೇತ. ಇಲ್ಲಿನ ಜನರ ಪ್ರೇರಣೆಯ ಪ್ರತಿಫಲ. ದತ್ತಿ ಕಾರ್ಯಕ್ರಮಗಳ ಮೂಲಕ ಸಾಧಕರನ್ನು ಗೌರವಿಸುವ ಸಂಪ್ರದಾಯ ಮುಂದುವರಿಯಬೇಕು ಎಂದು ಆಶಿಸಿದರು.
ಮಳಲಿ ವಸಂತಕುಮಾರ್ ಅವರು ನಾಡಿನ ಅಭೂತಪೂರ್ವ ಚೇತನವಾಗಿದ್ದರು. ಅವರ ಸಾಧನೆ ಕನ್ನಡ ಸಾಹಿತ್ಯ ಸಂಪತ್ತಿನ ಭಾಗವಾಗಿದೆ. ಅವರ ನೆನಪನ್ನು ಸದಾ ಹಸಿರಾಗಿರಿಸುವ ನಿಟ್ಟಿನಲ್ಲಿ ದತ್ತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ ಎಂದು ಬಣ್ಣಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು. ಡಾ.ಮಳಲಿ ವಸಂತಕುಮಾರ್ ಅವರ ಪತ್ನಿ ಶಾಂತಾ, ಪ್ರಾಧ್ಯಾಪಕಿ ಡಾ.ಎಚ್.ಪಿ.ಗೀತಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿ ಲತಾ ಮೋಹನ್ ಇತರರು ಇದ್ದರು.