ಮೈಸೂರು: ‘ಮಕರ ಸಂಕ್ರಾಂತಿ’ ಹಬ್ಬವನ್ನು ಸೋಮವಾರ ಸಡಗರ, ಸಂಭ್ರಮದೊಂದಿಗೆ ಆಚರಿಸಲು ಮೈಸೂರಿಗರು ತಯಾರಿ ಮಾಡಿಕೊಳ್ಳುತ್ತಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಜನರು ಉತ್ಸಾಹದಿಂದ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಾಶಿ ರಾಶಿ ಕಬ್ಬಿನ ಜಲ್ಲೆಗಳನ್ನು ರೈತರು ಹಾಗೂ ವರ್ತಕರು ತಂದು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಜನರು ಉತ್ಸಾಹದಿಂದ ಕಬ್ಬು, ಎಳ್ಳು, ಬೆಲ್ಲ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡುಬಂತು.
ಮೈಸೂರು ಭಾಗದ ಸಂಕ್ರಾಂತಿಯ ವೈಶಿಷ್ಟೃದಲ್ಲೊಂದಾಗಿದೆ. ಕಿಚ್ಚು ಹಾಯಿಸಿದ ಬಳಿಕ ಮನೆಗೆ ಮರಳುವ ರಾಸುಗಳಿಗೆ ಆರತಿ ಬೆಳಗಿ ಪೂಜೆ ಮಾಡಿ ಪ್ರಸಾದ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಎಳ್ಳು, ಬೆಲ್ಲ, ಕಬ್ಬು ಖರೀದಿ ಜೋರಾಗಿತ್ತು. ಕೆಲವರು ಎಳ್ಳು, ಬೆಲ್ಲ ಮಿಶ್ರಣದ ಪಾಕೆಟ್‌ಗಳನ್ನು ಖರೀದಿಸುತ್ತಿದ್ದು, ಕೆಲವರು ಎಳ್ಳು, ಬೆಲ್ಲ, ಕಡಲೆ ಬೀಜವನ್ನು ಪ್ರತ್ಯೇಕವಾಗಿ ಖರೀದಿಸಿದರು. ಸಂಕ್ರಾಂತಿ ಹಬದಲ್ಲಿ ಎಳ್ಳು-ಬೆಲ್ಲದ ಮಿಶ್ರಣ ಪ್ರಮುಖವಾಗಿದ್ದು, ಎಲ್ಲ ಮನೆಗಳಲ್ಲಿ ಎಳ್ಳು ಬೆಲ್ಲದ ಮಿಶ್ರಣ ಮಾಡುವ ಕಾರ್ಯ ಭರದಿಂದ ಸಾಗಿತು.