ಜಿಲ್ಲೆ

ಮೈಸೂರು: ಪೌರಕಾರ್ಮಿಕರಿಗೆ ಸದ್ಯದಲ್ಲೇ ಸೂರು..!

ಸದೇಶ್ ಕಾರ್ಮಾಡ್

ಸದೇಶ್ ಕಾರ್ಮಾಡ್ ಮೈಸೂರು

ಮೈಸೂರನ್ನು ದೇಶದ ಸ್ವಚ್ಛ ನಗರಿಯನ್ನಾಗಿ ರೂಪಿಸುವಲ್ಲಿ ಪೌರ ಕಾರ್ಮಿಕರು ವಹಿಸಿರುವ ಪಾತ್ರ ಅಪಾರ. ನಗರವನ್ನು ಸ್ವಚ್ಛವಾಗಿ ಡಲು ಹಗಲಿರುಳು ಶ್ರಮಿಸುತ್ತಿರುವ ಸಾಕಷ್ಟು ಪೌರ ಕಾರ್ಮಿಕರಿಗೆ ಇಂದಿಗೂ ಸ್ವಂತದೊಂದು ಸೂರು ಇಲ್ಲ. ಈ ಸಮಸ್ಯೆ ಮನಗಂಡ ನಗರ ಪಾಲಿಕೆಯು ಕಾಯಂ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೂರು ತಿಂಗಳ ಒಳಗೆ ಮನೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ವೃತ್ತದಿಂದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳುವ ವರ್ತುಲ ರಸ್ತೆ (ಕೆಸರೆ) ಬಳಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ಜಿಪ್ಲಸ್-3 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮನೆ ನಿರ್ಮಾಣ ಕಾಮಗಾರಿ ಇದೀಗ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ವಿದ್ಯುತ್ ಸಂಪರ್ಕ ಹಾಗೂ ಸುಣ್ಣ ಬಣ್ಣ ಬಳಿಯುವ ಹಾಗೂ ಸಣ್ಣ ಪುಟ್ಟ ಕಾಮಗಾರಿಗಳು ಮಾತ್ರ ಬಾಕಿ ಉಳಿದಿದೆ.

ರಾಜ್ಯ ಸರ್ಕಾರದ ಅನುದಾನ, ಪ್ರಧಾನಮಂತ್ರಿ ಆವಾಸ್ ಯೋಜನೆ, ಶೇ.24.1 ನಿಧಿ ಹಾಗೂ ನಗರ ಪಾಲಿಕೆ ಅನುದಾನವನ್ನು ಬಳಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಬೇಡಿಕೆ ಹಲವಾರು ವರ್ಷಗಳಿಂದ ಕೇಳಿ ಬರುತಿತ್ತು. ಈ ಹಿನ್ನೆಲೆಯಲ್ಲಿ ಪುಷ್ಪಲತಾ ಜಗನ್ನಾಥ್ ಅವರು ಮೇಯರ್ ಆಗಿದ್ದ ಸಂದರ್ಭ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಯಿತಾದರೂ ಜಾಗ ಗುರುತಿಸಲು ಆದ ವಿಳಂಬ ಹಾಗೂ ಕೋವಿಡ್ ಕಾರಣಗಳಿಂದ ಮನೆಗಳ ನಿರ್ಮಾಣ ತಡವಾಯಿತು. ಆದರೆ, ಇದೀಗ ಪೌರ ಕಾರ್ಮಿಕರ ಕನಸಿನ ಮನೆ ಕೈಗೂಡುವ ಹಂತ ತಲುಪಿದೆ.

ಒಟ್ಟು 22.54 ಕೋಟಿ ರೂ. ವೆಚ್ಚದಲ್ಲಿ 158 ಸುವ್ಯಸ್ಥಿತ ಜಿ ಪ್ಲಸ್ 3 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಯನ್ನು 14.27 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ಮನೆಯು 1 ಲಿವಿಂಗ್ ಹಾಲ್, 2 ಬೆಡ್‌ರೂಂ, ತಲಾ ಒಂದು ಕಿಚನ್, ಬಾತ್ ರೂಂ, ಶೌಚಗೃಹವನ್ನು ಒಳಗೊಂಡಿದೆ. ಜಿ ಪ್ಲಸ್ 3 ಮನೆಗಳಿಗೆ ಲಿಫ್ಟ್ ವ್ಯವಸ್ಥೆಯನ್ನು ಸಹ ಒದಗಿಸಲಾಗುವುದು. ಮಹಡಿಗಳನ್ನು ಹತ್ತಿ ಇಳಿಯಲು, ವಸ್ತುಗಳನ್ನು ಸಾಗಾಟ ಮಾಡಲು ಲಿಫ್ಟ್ ನೆರವಾಗಲಿದೆ. ಪ್ರತಿ ಮನೆಗೆ ಪಾಲಿಕೆ 1.27 ಲಕ್ಷ ರೂ.ವಂತಿಕೆ ನೀಡಲಿದೆ. ರಾಜ್ಯ ಸರ್ಕಾರ 6 ಲಕ್ಷ ರೂ., ಶೇ.24.10 ನಿಧಿಯಡಿ 3 ಲಕ್ಷ ರೂ., ಫಲಾನುಭವಿ ವಂತಿಕೆ 2.50 ಲಕ್ಷ ರೂ., ಹೌಸಿಂಗ್ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.50 ಲಕ್ಷ ರೂ. ನೀಡಲಾಗುವುದು. ಆದರೆ, ಇಷ್ಟೊಂದು ಮೊತ್ತ ನಮಗೆ ಪಾವತಿಸಲು ಸಾಧ್ಯವಿಲ್ಲ. ಉಚಿತವಾಗಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು ಎಂಬುದು ಪೌರ ಕಾರ್ಮಿಕರ ಒತ್ತಾಯವಾಗಿದೆ.

ಎರಡು ಬಾರಿ ಜಾಗ ಬದಲು: ಪ್ರಾರಂಭದಲ್ಲಿ ಪೌರ ಕಾರ್ಮಿಕರಿಗೆ ಸೀವೇಜ್ ಫಾರ್ಮ್‌ಗೆ ಹೊಂದಿಕೊಂಡಿರುವ ಮೈಸೂರು-ಊಟಿ ರಸ್ತೆಯಲ್ಲಿರುವ ಎರಡು ಎಕರೆ ಜಾಗದಲ್ಲಿ ಜಿ ಪ್ಲಸ್ 3 ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯು 2014 ರಲ್ಲಿ ಸೀವೇಜ್ ಫಾರ್ಮ್ ಸುತ್ತಲಿನ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಿದ್ದು, ಪಾಲಿಕೆ ಗುರುತಿಸಿದ ಜಾಗವು 500 ಮೀಟರ್ ಒಳಗೆ ಇರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸದರಿ ಜಾಗವನ್ನು ಕೈಬಿಡಲಾ ಯಿತು. ನಂತರ ಪಾಲಿಕೆಯ ಮನವಿ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಳಲವಾಡಿಯಲ್ಲಿ 1.20 ಎಕರೆ ಜಾಗವನ್ನು ಒದಗಿಸಿತ್ತು. ಆದರೆ, ಮಳಲವಾಡಿಯಲ್ಲಿ ವಿವಿಧ ಕಾರಣಗಳಿಂದ ನಗರ ಪಾಲಿಕೆಗೆ ಮನೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಸರೆಯಲ್ಲಿರುವ ಪಾಲಿಕೆಗೆ ಸೇರಿದ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಈ ಜಾಗ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿಯಲ್ಲಿಯೇ ಇದ್ದು, ಸುಂದರವಾದ ಪರಿಸರವನ್ನು ಹೊಂದಿದ್ದು, ಮೈಸೂರು ನಗರಕ್ಕೂ ಹತ್ತಿರವಾಗಿದೆ.

ನಗರ ಪಾಲಿಕೆಯಲ್ಲಿ 400ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಸ್ವಂತ ಮನೆ ಇಲ್ಲ. ಈ ಯೋಜನೆ ಜಾರಿಗೆ ಬಂದರೆ 158 ಜನರಿಗೆ ಸ್ವಂತ ಸೂರು ಲಭ್ಯವಾಗಲಿದೆ. ಪೌರ ಕಾರ್ಮಿಕರ ಬಹುವರ್ಷಗಳ ಸ್ವಂತ ಮನೆಯ ಕನಸು ಸದ್ಯದಲ್ಲಿಯೇ ಕೈಗೂಡಲಿದೆ.

ಕೆಸರೆಯಲ್ಲಿರುವ ಪಾಲಿಕೆಗೆ ಸೇರಿದ ಜಾಗದಲ್ಲಿ ಪೌರ ಕಾರ್ಮಿಕರಿಗೆ ಜಿ ಪ್ಲಸ್ 3 ಮನೆಗಳ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಕೆಲವೇ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ನಂತರ ಈಗಾಗಲೇ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮನೆ ಕಾಮಗಾರಿ ಪೂರ್ಣಗೊಂಡು ಎಲ್ಲ ಮನೆಗಳಿಗೂ ಮೂಲಸೌಲಭ್ಯಗಳನ್ನು ಕಲ್ಪಿಸಿದ ನಂತರವಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುವುದು.

ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ