ಮೈಸೂರು: ಹಸಿದ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ಹೋಟೆಲ್‌ಗಳು ಅನ್ನಪೂರ್ಣೇಶ್ವರಿಯ ಕೇಂದ್ರ ಬಿಂದುಗಳು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಣ್ಣಿಸಿದರು.
ಮೈಸೂರು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದಿಂದ ನಗರಲ್ಲಿ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನ್ನ ದೇವರ ಮುಂದೆ ಯಾವ ದೇವರು ಇಲ್ಲ. ಹಸಿವಿನಿಂದ ಬಳಲುವವನಿಗಷ್ಟೇ ಅನ್ನದ ಬೆಲೆ ಏನೆಂಬುದು ಗೊತ್ತಿದೆ. ಇಂದು ಹೋಟೆಲ್ ಉದ್ಯಮ ಬಹಳ ವಿಸ್ತಾರವಾಗಿ ಬೆಳೆದಿದ್ದು, ಕೋಟ್ಯಂತರ ಜೀವಗಳ ಹೊಟ್ಟೆ ತುಂಬಿಸುತ್ತಿವೆ. ಹೀಗಾಗಿ ಹೋಟೆಲ್ ಮಾಲೀಕರು ನಮ್ಮ ತಂದೆ ತಾಯಿ, ಅಣ್ಣ ತಮ್ಮಂದಿರು ಎಂದರು.
ಮನುಷ್ಯ ಏಕಾಂಗಿಯಾಗಿ ಏನನ್ನೂ ಸಾಧಿಸಲು ಆಗಲ್ಲ. ಸಾಂಘಿಕ ಸಹಕಾರದ ವ್ಯವಸ್ಥೆಯಿಂದ ಮತ್ತೊಬ್ಬರ ಸ್ನೇಹದಿಂದ ಸಾಧನೆ ಮಾಡಬೇಕಿದೆ. ಪ್ರತಿಯೊಬ್ಬರನ್ನೂ ಒಳಗೊಳ್ಳುವಂತೆ ಮಾಡುವುದು ಮಾತೃಹೃದಯ ಎಂದು ಹೇಳಿದರು.
ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ನಾನು ಪದವಿ ಮುಗಿದ ಬಳಿಕ ಕೆಲಕಾಲ ಹೋಟೆಲ್ನಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದೇನೆ. ಹೋಟೆಲ್‌ಗಳು ಇಲ್ಲದಿದ್ದರೆ ಅದೆಷ್ಟೋ ಜನರು ಹಣ ಇದ್ದರೂ ಹಸಿವಿನಿಂದ ಬಳಲಬೇಕಿತ್ತು ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಉದ್ದಿಮೆಗಳ ಬೆಳವಣಿಗೆ ಹಿಂದೆ ಸಹಕಾರ ಸಂಘಗಳ ಸಹಕಾರವಿದ್ದು, ದೊಡ್ಡ ಶಕ್ತಿಯಾಗಿ ಬೆಳೆದುನಿಂತಿದೆ. ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಸಹಕಾರ ಇದ್ದರಷ್ಟೇ ಸಹಕಾರಕ್ಕೆ ಸಿಗುವ ಬೆಲೆ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ದಸರಾ ಆಹಾರ ಮೇಳ ಅಯೋಜನೆ ಮಾಡುವುದಕ್ಕೆ ಮೂಲ ಕಾರಣ ಎಚ್.ವಿಶ್ವನಾಥ್. ನಾವು ಆತಿಥ್ಯ ನೀಡುವಂತಹ ನಮ್ಮ ಸಂಘಕ್ಕೆ ಶಾಸಕರು ಸಚಿವರು ಸಹಕಾರ ನೀಡುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಹೆಚ್ಚಾಗಿ ಯುವಕರು ಬರುತ್ತಿರುವುದು ಸಂತೋಷ ಆಗುತ್ತಿದೆ ಎಂದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಯಾವುದೇ ಪ್ರಕರಣಗಳು ಇಲ್ಲದೇ ಇರುವುದು ನಮ್ಮ ಸಂಸ್ಥೆಯ ಹೆಮ್ಮೆಯ ವಿಷಯ. ನಮ್ಮ ಕ್ಷೇತ್ರದವರಿಗೆ ನಮ್ಮ ಸಂಘ ಯಾವಾಗಳು ಬೆನ್ನೆಲುಬಾಗಿ ನಿಂತಿರುತ್ತದೆ ಎಂದು ಹೇಳಿದರು.
--------
ಸಾಧಕರಿಗೆ ಸನ್ಮಾನ ಪುರಸ್ಕಾರ
* ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 32 ಸಾಧಕರನ್ನು ಸನ್ಮಾನಿಸಲಾಯಿತು.
ಸಹಕಾರ ಕ್ಷೇತ್ರ: ರಾಮಚಂದ್ರೇಗೌಡ, ಡಿ.ವಿ.ಜೋಷಿ. ಹೋಟೆಲ್ ಉದ್ಯಮಿ : ಗೋಪಿನಾಥ್ ಗುಪ್ತ, ವಿ.ಧರ್ಮಪ್ರಕಾಶ್, ಕೃಷ್ಣಮೂರ್ತಿ, ರಾಮಣ್ಣ. ಸಿವಿಲ್ ಕ್ಷೇತ್ರ: ಅಶೋಕ ಗೋವಿಂದೇಗೌಡ, ಗ್ರೇಷಿಯಸ್ ರೋಡ್ರಿಗಸ್. ರಾಜಕೀಯ: ಬಿ. ಸಿದ್ದರಾಜು, ಮಾ.ವಿ.ರಾಮಪ್ರಸಾದ್, ಯಶಸ್ವಿನಿ ಸೋಮಶೇಖರ್. ಯುವ ಹೋಟೆಲ್ ಉದ್ಯಮಿ: ವಿಶಾಖ್ ಭಟ್, ಸುದೀಪ್, ರವಿನಂದನ್ ಶೆಟ್ಟಿ, ಕಿರಣ್ ಎ ತಂತ್ರಿ, ತ್ರಿವಿಕ್ರಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡ್ರೋನ್ ಸ್ಪೆಷಲಿಸ್ಟ್ : ಜಿ.ಎಸ್. ಸುಮೋಘ, ವೈದ್ಯಕೀಯ ಕ್ಷೇತ್ರ: ಡಾ. ಬಿ.ಎಸ್.ಮೈತ್ರಿ, ಲೆಕ್ಕ ಪರಿಶೋಧಕ ಕ್ಷೇತ್ರ: ಅರ್ಜುನ್ ಕೆ. ರಾವ್, ಕೆ. ಗಿರೀಶ್, ಎನ್.ಆಶ್ವಿನಿ. ಪ್ರತಿಭಾ ಪುರಸ್ಕಾರ: ಸಿಂಚನ ಎ. ಶೆಟ್ಟಿ, ವಿಖ್ಯಾತ ಪುರಾಣಿಕ್, ಬಿ ಚೇತನಾ, ಅನನ್ಯ ಹೆಗಡೆ, ಲಾವಣ್ಯ ಅವರನ್ನು ಗೌರವಿಸಲಾಯಿತು. ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಾದ ಸಿ.ಬಾನುಪ್ರಕಾಶ್, ಅನನ್ಯ ಅವರನ್ನು ಗೌರವಿಸಲಾಯಿತು.