ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾಕಾಶಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ (ಗ್ಲೇಡ್ಸ್), ನಾಲ್ಕು ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಆತಿಥ್ಯ ವಹಿಸುತ್ತಿದ್ದು, ಕ್ರಿಕೆಟ್ ಆಸಕ್ತರ ಸಂಭ್ರಮ ಮುಗಿಲು ಮುಟ್ಟಿದೆ.
ನಗರದ ಗ್ಲೇಡ್ಸ್ ಮೈದಾನದಲ್ಲಿ ಜ.19ರಿಂದ 22ರವರೆಗೆ ಕರ್ನಾಟಕ ಮತ್ತು ಗೋವಾ ತಂಡಗಳ ರಣಜಿ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಇದು ಕರ್ನಾಟಕಕ್ಕೆ ಈ ಋತುವಿನ ರಣಜಿ ಟೂರ್ನಿಯ ಮೂರನೇ ಪಂದ್ಯವಾಗಿದೆ.
ಈ ಹಿಂದೆ ಕಡೆಯದಾಗಿ 2019ರ ಡಿಸೆಂಬರ್‌ನಲ್ಲಿ ಕರ್ನಾಟಕ ಮತ್ತು ಹಿಮಾಚಲಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯ ನಡೆದಿತ್ತು. ಇದೀಗ ಮತ್ತೆ ಗ್ಲೇಡ್ಸ್‌ನಲ್ಲಿ ರಣಜಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ತೇಲಿದ ನಗರದ ಕ್ರೀಡಾಭಿಮಾನಿಗಳು, ಮತ್ತೆ ‘ರಣಜಿ ಕ್ರಿಕೆಟ್’ ಸಂಭ್ರಮದಲ್ಲಿ ಮುಳುಗುವ ತವಕದಲ್ಲಿದ್ದಾರೆ.
ಕರ್ನಾಟಕ ತಂಡ, ಪ್ರತಿಷ್ಠಿತ ರಣಜಿ ಟೂರ್ನಿಯ ಸಿ ಗುಂಪಿನಲ್ಲಿ ಇದೆ. ತನ್ನ ಮೊದಲ ಪಂದ್ಯವನ್ನು ರಾಜನಗರ ಖ್ಯಾತಿಯ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಪಂಜಾಬ್ ವಿರುದ್ಧ ಆಡುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಪಡೆದಿರುವ ಕರ್ನಾಟಕ ತಂಡ ಗೆಲುವಿನ ಸನಿಯದಲ್ಲಿದೆ. ಎರಡನೇ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಜ.12ರಿಂದ 15ರವರೆಗೆ ಗುಜರಾತ್ ತಂಡದ ವಿರುದ್ಧ ಆಡಲಿದೆ.
ಜ.19ರಿಂದ 22ರವರೆಗೆ ನಡೆಯುವ ಪಂದ್ಯಕ್ಕೆ ಮಾನಸಗಂಗೋತ್ರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ (ಗ್ಲೇಡ್ಸ್)ಸಿದ್ಧಗೊಳ್ಳುತ್ತಿದ್ದು, ನಗರದ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯ ಗ್ಲೇಡ್ಸ್‌ನಲ್ಲಿ ಭಾನುವಾರ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೂಫಿಯ ಕರ್ನಾಟಕ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಆರಂಭವಾಗಿದೆ. ಈ ಪಂದ್ಯ ಜ.10ರವರೆಗೆ ನಡೆಯಲಿದೆ. ಕೋವಿಡ್ ಕಾರಣದಿಂದ ಇಷ್ಟು ವರ್ಷ ಮೈಸೂರಿನಲ್ಲಿ ರಣಜಿ ಪಂದ್ಯ ನಡೆದಿರಲಿಲ್ಲ. ಈ ವರ್ಷ ಮಹಾರಾಜ ಟ್ರೂಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರಿನಲ್ಲಿ ಆಯೋಜಿಸಿರಲಿಲ್ಲ.
ಎರಡು ತಂಡಗಳ ಆಟಗಾರರು ಜ.16 ಅಥವಾ 17ರಂದು ನಗರಕ್ಕೆ ಬಂದು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಅಭ್ಯಾಸ ನಡೆಸಲಿದ್ದಾರೆ.
ಕರ್ನಾಟಕ ತಂಡದ ಪರ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಅನುಭವಿ ಬ್ಯಾಟರ್ ಮನೀಷ್ ಪಾಂಡೆ, ಎಸ್.ಶರತ್, ಶುಭಾಂಗ್ ಹೆಗ್ಡೆ, ವೈಶಾಖ್ ಆಡುವ ನಿರೀಕ್ಷೆ ಇದೆ. ಸದ್ಯ ಹುಬ್ಬಳ್ಳಿ ಪಂದ್ಯದಲ್ಲಿ ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಭರ್ಜರಿ ಶತಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ಜ.19ರಿಂದ 22ರವರೆಗೆ ಪ್ರಸಕ್ತ ಸಾಲಿನ ಮೂರನೇ ರಣಜಿ ಪಂದ್ಯ ನಗರದ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ (ಗ್ಲೇಡ್ಸ್) ನಡೆಯಲಿದೆ. ಪಂದ್ಯಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸದ್ಯ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೂಫಿಯ ಕರ್ನಾಟಕ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಆರಂಭವಾಗಿದೆ.ಆರ್.ಕೆ.ಹರಿಕೃಷ್ಣಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೈಸೂರು ವಿಭಾಗದ ಸಂಚಾಲಕ