ಜಿಲ್ಲೆ

ಸ್ವಾಗತ ಕಮಾನು ಸ್ಥಳಾಂತರಕ್ಕೆ ನಿರ್ಧಾರ

ಸದೇಶ್ ಕಾರ್ಮಾಡ್

ಮೈಸೂರು: ಕುರುಬಾರಹಳ್ಳಿ ವೃತ್ತದಿಂದ ಲಲಿತಮಹಲ್ ಅರಮನೆ ಕಡೆಗೆ ತೆರಳುವ ಮಾರ್ಗದಲ್ಲಿರುವ ಪಾರಂಪರಿಕ ಸ್ವಾಗತ ಕಮಾನನ್ನು ಸ್ಥಳಾಂತರಿಸಲು ಹಾಗೂ ನಗರದ ವಿವಿಧೆಡೆ ಇರುವ ಪಾರಂಪರಿಕ ಸ್ವಾಗತ ಕಮಾನುಗಳಿಗೆ ಕಾಯಕಲ್ಪ ನೀಡಲು ನಗರ ಪಾಲಿಕೆ ನಿರ್ಧರಿಸಿದೆ.

ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ದುಸ್ಥಿತಿಯ ಕುರಿತು ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಜು.26 ರ ಸಂಚಿಕೆಯಲ್ಲಿ ‘ಕುದುರೆ ಲಾಯವಾದ ಸ್ವಾಗತ ಕಮಾನು’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ಜತೆಗೆ ಮಹಾರಾಣಿ ಮಹಿಳಾ ಕಾಲೇಜಿನಲ್ಲಿರುವ ಪಾರಂಪರಿಕ ಸ್ವಾಗತ ಕಮಾನಿಗೂ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಇದರ ಜತೆಗೆ ವೀರನಗೆರೆಯಲ್ಲಿರುವ ಪಾರಂಪರಿಕ ಕಾವಲು ಗೋಪುರ ಕಾಯಕಲ್ಪ ಕಾಣಲಿದೆ.

ಕುರುಬಾರಹಳ್ಳಿ ವೃತ್ತದಿಂದ ಲಲಿತಮಹಲ್ ಅರಮನೆ ಕಡೆಗೆ ತೆರಳುವ ಮಾರ್ಗದಲ್ಲಿರುವ ಪಾರಂಪರಿಕ ಸ್ವಾಗತ ಕಮಾನಿನಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು, ಸಮಸ್ಯೆ ಪರಿಹರಿಸಲು ಸ್ವಾಗತ ಕಮಾನಿನ ಕಟ್ಟಡವನ್ನು ಪಕ್ಕಕ್ಕೆ ಸ್ಥಳಾಂತರಿಸಿ ರಸ್ತೆ ವಿಸ್ತರಣೆ ಮಾಡಲು ನಗರ ಪಾಲಿಕೆ ತೀರ್ಮಾನಿಸಿದ್ದು, ಬುಧವಾರ ಮೇಯರ್ ಶಿವಕುಮಾರ್, ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾರಂಪರಿಕ ತಜ್ಞರ ಸಲಹೆ ಹಾಗೂ ಕಟ್ಟಡ ಸ್ಥಳಾಂತರಿಸುವ ತಜ್ಞರ ನೆರವಿನೊಂದಿಗೆ ಈ ಸ್ವಾಗತ ಕಮಾನು ಕಟ್ಟಡವನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದ್ದು, ಇದರಿಂದ ಒಟ್ಟು 30 ಅಡಿಗಳಷ್ಟು ರಸ್ತೆ ವಿಸ್ತರಣೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.

ನಗರದ ವಿನೋಬಾ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಆವರಣದಲ್ಲಿರುವ ಪಾರಂಪರಿಕ ಸ್ವಾಗತ ಕಮಾನು ದುಸ್ಥಿತಿಯಲ್ಲಿದ್ದು, ಈ ಸ್ವಾಗತ ಕಮಾನಿಗೆ ಕಾಯಕಲ್ಪ ನೀಡಿ ಸ್ವಾಗತ ಕಮಾನಿನ ಬಳಿಯಲ್ಲಿ ಮೈಸೂರು ಸಂಸ್ಥಾನದ ಮಹಾರಾಣಿಯಾಗಿದ್ದ ಕೆಂಪನಂಜಮ್ಮಣಿ ಅವರ ಪ್ರತಿಮೆಯೊಂದನ್ನು ನಿರ್ಮಿಸಿ ಆ ಜಾಗವನ್ನು ಸೆಲ್ಫಿ ಪಾಯಿಂಟ್ ಆಗಿ ಪರಿವರ್ತಿಸಲು ಗುರುವಾರ ಮೇಯರ್ ಶಿವಕುಮಾರ್, ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನಿನ ಕಟ್ಟಡವನ್ನು ಕೆಲವರು ಕುದುರೆ ಲಾಯವಾಗಿ ಪರಿವರ್ತಿಸಿದ್ದರು. ಕುದುರೆಗಳನ್ನು ಕಟ್ಟಿಹಾಕಿದ ಪರಿಣಾಮ ಗೋಡೆಗಳು ಕಿತ್ತುಬಂದು ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಈ ಕುರಿತು ‘ವಿಜಯವಾಣಿ’ ಗಮನ ಸೆಳೆಯುವ ವರದಿ ಪ್ರಕಟಿಸಿದ ನಂತರ ಸ್ಥಳದಿಂದ ಕುದುರೆಗಳನ್ನು ತೆರವುಗೊಳಿಸಿ ಕಟ್ಟಡದಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸ ಲಾಗಿದೆ. ಅಲ್ಲದೆ, ಸ್ವಾಗತ ಕಮಾನಿನ ಕಾಯಕಲ್ಪ ಕಾಮಗಾರಿ ಕೈಗೊಳ್ಳಲು ಡಿಪಿಆರ್ ತಯಾರಿಸುವ ಕಾರ್ಯ ನಡೆಯುತ್ತಿದ್ದು, ಒಂದು ವಾರದೊಳಗೆ ಡಿಪಿಆರ್ ಸಿದ್ಧಗೊಳ್ಳುವ ಸಾಧ್ಯತೆ ಇದೆ.

ನಗರದಲ್ಲಿರುವ ಪಾರಂಪರಿಕ ಸ್ವಾಗತ ಕಮಾನುಗಳು ನಗರದ ಪ್ರಮುಖ ಆಕರ್ಷಣೆಯಾಗಿವೆ. ಆದರೆ, ಕಾರಣಾಂತರಗಳಿಂದ ಈ ಸ್ವಾಗತ ಕಮಾನುಗಳು ನಿರ್ಲಕ್ಷೃಕ್ಕೆ ಗುರಿಯಾಗಿವೆ. ಸ್ವಾಗತ ಕಮಾನುಗಳನ್ನು ಅಭಿವೃದ್ಧಿ ಪಡಿಸಿ ಅವುಗಳಿಗೆ ದೀಪಾಲಂಕಾರ ಮಾಡಲಾ ಗುವುದು. ಈ ದೀಪಾಲಂಕಾರ ಪ್ರತಿನಿತ್ಯ ನಗರಕ್ಕೆ ಆಗಮಿಸುವ ಜನರನ್ನು ಆಕರ್ಷಿಸಲಿದೆ ಎಂದು ಮೇಯರ್ ಶಿವಕುಮಾರ್ ‘ವಿಜಯವಾಣಿ’ಗೆ ತಿಳಿಸಿದರು.

ನಗರದ ಹಳೇಯ ಜಿಲ್ಲಾಧಿಕಾರಿ ಕಚೇರಿ ಹಾಗೂ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಸ್ವಾಗತ ಕಮಾನು ಉತ್ತಮವಾಗಿದ್ದು, ಇವುಗಳಿಗೆ ಸುಣ್ಣಬಣ್ಣ ಬಳಿದು ಅಲಂಕಾರಗೊಳಿಸಲು ತೀರ್ಮಾನಿಸಲಾಗಿದೆ. ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಫೌಂಟೇನ್‌ವನ್ನು ಅಭಿವೃದ್ಧಿ ಪಡಿಸಲು ಪಾಲಿಕೆ ಉತ್ಸಾಹ ತೋರಿದೆ.

ಲಲಿತಮಹಲ್ ಅರಮನೆ ರಸ್ತೆಯ ಸ್ವಾಗತ ಕಮಾನಿನಿಂದ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸ್ವಾಗತ ಕಮಾನನ್ನು ಪಕ್ಕಕ್ಕೆ ಸ್ಥಳಾಂತರಿಸಿ ಕಾಯಕಲ್ಪ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದರ ಜತೆಗೆ ಸರ್ಕಾರಿ ಅತಿಥಿ ಗೃಹ ಮತ್ತು ಮಹಾರಾಣಿ ಕಾಲೇಜಿನ ಸ್ವಾಗತ ಕಮಾನು ಹಾಗೂ ವೀರನಗೆರೆಯಲ್ಲಿರುವ ಪಾರಂಪರಿಕ ಕಾವಲುಗೋಪುರದ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಶಿವಕುಮಾರ್, ಮೇಯರ್

ನಗರದಲ್ಲಿ ದುಸ್ಥಿತಿಯಲ್ಲಿರುವ ಪಾರಂಪರಿಕ ಸ್ವಾಗತ ಕಮಾನುಗಳ ಕಾಯಕಲ್ಪ ಕಾಮಗಾರಿ ಕೈಗೊಳ್ಳಲು ನಗರ ಪಾಲಿಕೆ ಮುಂದೆ ಬಂದಿದ್ದು, ಪಾಲಿಕೆಗೆ ಅಗತ್ಯ ಸಲಹೆ ಸಹಕಾರವನ್ನು ನೀಡಲಾಗುವುದು. ಸ್ವಾಗತ ಕಮಾನುಗಳನ್ನು ಪಾಲಿಕೆ ಮೇಯರ್, ಆಯುಕ್ತರೊಂದಿಗೆ ಪರಿಶೀಲಿಸಲಾಗಿದ್ದು, ಅವುಗಳ ಕಾಯಕಲ್ಪಕ್ಕೆ ಶೀಘ್ರದಲ್ಲಿಯೇ ಡಿಪಿಆರ್ ತಯಾರಿಸಿ ನಗರ ಪಾಲಿಕೆಗೆ ಸಲ್ಲಿಸಲಾಗುವುದು.
ಡಾ.ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ