ಮೈಸೂರು: ಚುಂಚನಗಿರಿ ಕ್ಷೇತ್ರ, ರಾಜ್ಯ ಒಕ್ಕಲಿಗರ ಸಂಘ ಸೇರಿದಂತೆ ನಾನಾ ಸಂಘ, ಸಂಸ್ಥೆಗಳು ಬೆಳೆಯಲು ಕೆ.ಎಚ್.ರಾಮಯ್ಯರಂತಹ ಹಿರಿಯರು ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಘಟಕದಿಂದ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ದಿ.ಕೆ.ಎಚ್.ರಾಮಯ್ಯ ಜಯಂತಿ ಹಾಗೂ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜರ ಸ್ಥಾನದಲ್ಲಿದ್ದ ರಾಮಯ್ಯ ಅವರು ಜನರಿಗೆ ಉಪಯೋಗವಾಗುವ ಸಂಘ, ಸಂಸ್ಥೆಗಳ ಸ್ಥಾಪನೆಗೆ ನೆರವಾಗಿದ್ದರು. ಕೇವಲ ಒಕ್ಕಲಿಗ ಜನಾಂಗಕ್ಕೆ ಅಲ್ಲದೇ ಎಲ್ಲ ವರ್ಗದವರಿಗೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು ಎಂದರು.
ಸುಸಂಸ್ಕೃತಿಯನ್ನು ಹೊಂದಿರುವ ಮೈಸೂರು ಎಲ್ಲರನ್ನು ತನ್ನೆಡೆಗೆ ಸೆಳೆದುಕೊಳ್ಳ್ಳುತ್ತದೆ. ಸಂಸದನಾಗಿ ನನ್ನನ್ನು ಎಲ್ಲರೂ ಪ್ರೀತಿಯಿಂದ ಅವಕಾಶ ಕೊಟ್ಟರು. 10 ವರ್ಷದಲ್ಲಿ ಶಕ್ತಿ ಮೀರಿ ಮೈಸೂರಿಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿದ್ದೀನಿ. ಟಿಕೆಟ್ ಸಿಗದಿದ್ದಾಗ ಪ್ರೀತಿ ಮತ್ತಷ್ಟು ಕೊಟ್ಟಿದ್ದಾರೆ. ಈ ಪ್ರೀತಿ ಮುಂದಿನ ದಿನಗಳಲ್ಲಿಯೂ ಇರಲಿ. ಮಲೆನಾಡು ನನ್ನ ಜನ್ಮ ಭೂಮಿಯಾದರೂ ಮೈಸೂರೇ ನನ್ನ ಕರ್ಮಭೂಮಿ, ರುದ್ರಭೂಮಿಯೂ ಅಗಲಿದೆ. ಹಾಗಾಗಿ ನಾನು ಮೈಸೂರಿನಲ್ಲಿಯೇ ಇರುತ್ತೇನೆ ಎಂದರು.
ಎಲ್ಲರನ್ನೂ ಸ್ವೀಕರಿಸುವ, ಪ್ರೀತಿಸಿ ಪ್ರೋತ್ಸಾಹಿಸುವ ಗುಣ ಮೈಸೂರಿಗೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕೆಲಸ ಮಾಡೋಣ, ಸದಾ ನಾನು ನಿಮ್ಮೊಟ್ಟಿಗೆ ಇರುತ್ತೇನೆ. ಮತ್ತಷ್ಟು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕೆ.ಎಚ್.ರಾಮಯ್ಯ ಕೇವಲ ಒಕ್ಕಲಿಗರಿಗೆ ಸೀಮಿತವಾಗದೆ ಹಿಂದುಳಿದ ವರ್ಗದ ಏಳಿಗೆಗೂ ಶ್ರಮಿಸಿದರು. ಸಮಾಜದ ಅಭಿವೃದ್ಧಿಗೆ ಸಹಕಾರ ಇಲಾಖೆ ತೆರೆಯಲು ಕಾರಣರಾಗಿದ್ದಾರೆ. ಇವರು ಒಕ್ಕಲಿಗರ ಸಂಘ ಸ್ಥಾಪಿಸಿದಾಗ ನಮ್ಮ ರಾಜ್ಯದ ಅಂದಿನ ಬಜೆಟ್‌ನಷ್ಟು ಹಣವನ್ನು ಸಂಘದಲ್ಲಿ ಇಟ್ಟು ದಾಖಲೆ ಬರೆದಿದ್ದಾರೆ. ಪ್ರತಿಯೊಬ್ಬರೂ ಇಂತಹ ಮಹನೀಯರ ಬಗ್ಗೆ ತಿಳಿಯಬೇಕು ಎಂದರು
ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಸಮಾಜದ ಏಳಿಗೆಗೆ ಶ್ರಮಿಸಿದ ಕೆ.ಎಚ್.ರಾಮಯ್ಯ ಅವರು ಶಿಕ್ಷಣ, ಸಹಕಾರ, ಸಂಘಟನೆಗೆ ಒತ್ತು ನೀಡಿದ್ದರು. ಅವರ ಸಮಾಧಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿದ್ದು, ಅದನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಅವರ ಜೀವನ, ಸಾಧನೆ, ಮಾಡಿರುವ ಸಾಮಾಜಿಕ ಸೇವಾ ಕಾರ್ಯಗಳು ಸೇರಿದಂತೆ ಚಿತ್ರಣವನ್ನು ತೆರೆದಿಡುವ ವಸ್ತುಪ್ರದರ್ಶನವನ್ನು ಅವರ ಸಮಾಧಿ ಬಳಿ ನಿರ್ಮಿಸಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಅದರ ಆದರ್ಶವನ್ನು ತಿಳಿಸು ಕಾರ್ಯ ಅಗಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಅಖಿಕ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಡಾ.ಸಿ.ವೈ. ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಂಗನಾಥ್, ಸಂಘಟಕರಾದ ವನಜಾಕ್ಷಿ, ಲಕ್ಷ್ಮೀ, ಮಂಜುಳಾ, ಭಾಗ್ಯಮ್ಮ, ನೇಹಾ, ಕೃಷ್ಣೇಗೌಡ, ಯಶ್ವಂತ್, ಲಿಂಗಪ್ಪ, ನರಸಿಂಹೇಗೌಡ, ಹನುಮಂತಯ್ಯ, ಸಿದ್ದೇಗೌಡ, ರಾಮಣ್ಣ, ದರ್ಶನ್‌ಗೌಡ, ವಿಷ್ಣು ಇತರರು ಇದ್ದರು.
ಹಲವರಿಗೆ ಸನ್ಮಾನ:
ವಿವಿಧ ಕ್ಷೇತ್ರದ ಕೆ.ಎನ್. ಧನ್ಯಕುಮಾರ್, ಡಾ.ಲಕ್ಷ್ಮೇಗೌಡ, ಎಸ್. ಜಯಪ್ರಕಾಶ್ (ಜೆ.ಪಿ), ಪ್ರೊ. ಸಿ.ಎಚ್.ಪ್ರಕಾಶ್, ಪಾಂಡುರಂಗ ಸತೀಶ್‌ಗೌಡ, ಶೋಭರಾಣಿಗೌಡ, ಜೆ. ರವಿಚಂದ್ರ ಹಂಚ್ಯಾ ಅವರಿಗೆ ಕೆ.ಎಚ್.ರಾಮಯ್ಯ ಸೇವಾರತ್ನ ಪ್ರಶಸ್ತಿ, ಎಸ್‌ಎಸ್‌ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.