ಜಿಲ್ಲೆ

ದಿನಸಿ ಕಿಟ್‌ಗಾಗಿ ಆರೇಳು ತಾಸು ಕಾದು ಹೈರಾಣಾದ ಜನತೆ

ಮೈಸೂರು : ದಿನಸಿ ಕಿಟ್‌ಗಾಗಿ ನಗರದಲ್ಲಿ ಬರೋಬ್ಬರಿ ಆರೇಳು ತಾಸು ಜನರು ಕಾಯ್ದು ಹೈರಾಣಾದರು.
ಪಾಲಿಕೆ ಮಾಜಿ ಸದಸ್ಯ ಶಿವಮಾದು ಅವರಿಂದ ಗುರುವಾರ ಕುಂಬಾರಕೊಪ್ಪಲಿನಲ್ಲಿರುವ ಮಹದೇಶ್ವರ ದೇವಸ್ಥಾನದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದು ನಡೆದಿದೆ.
ಕಿಟ್‌ಗಾಗಿ ಮೊದಲೇ ಒಂದು ಸಾವಿರ ಜನರಿಗೆ ಕೂಪನ್ ನೀಡಲಾಗಿತ್ತು. ಇದನ್ನು ಪಡೆದ ಕೆಲ ಫಲಾನುಭವಿಗಳು ಬೆಳಗ್ಗೆ 5 ಗಂಟೆಗೆ ಇಲ್ಲಿಗೆ ಬಂದಿದ್ದರು. ಆರು ಗಂಟೆ ಬಳಿಕ ಮತ್ತಷ್ಟು ಜನರು ಬಂದು ಸೇರಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಮಾರ್ಕಿಂಗ್‌ನಲ್ಲಿ ತಾವು ತಂದಿದ್ದ ಬ್ಯಾಗ್ ಇಟ್ಟು ಸರದಿಯನ್ನು ಕಾಯ್ದಿಟ್ಟರು. ಅದರ ಪಕ್ಕದ ಫುಟ್‌ಪಾತ್ ಮೇಲೆ ಕುಳಿತು ಕಿಟ್‌ಗಾಗಿ ಎದುರು ನೋಡುತ್ತಿದ್ದರು. ಆದರೆ, ಕಾರ್ಯಕ್ರಮ 11.30ರ ಸುಮಾರಿಗೆ ಪ್ರಾರಂಭವಾಯಿತು. ಗಣ್ಯರ ಭಾಷಣ ಮುಗಿದು ಕಿಟ್ ವಿತರಣೆ ಶುರುವಾಗಿದ್ದು ಮಧ್ಯಾಹ್ನ 12ಗಂಟೆ ಹೊತ್ತಿಗೆ. ಅಲ್ಲಿಯವರೆಗೆ ಕೂಪನ್ ಪಡೆದವರು ಜಾಗದಿಂದ ಕದಲಲಿಲ್ಲ. ಕಿಟ್ ಕೈಗೆ ಸಿಗುವ ಹೊತ್ತಿಗೆ ಇವರೆಲ್ಲ ಬಸವಳಿದು ಹೋಗಿದ್ದರು.
ಮಾಜಿ ಶಾಸಕ ವಾಸು, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯೆ ಕುಸುಮಾ ಕುಮಾರ್, ಪಾಲಿಕೆ ಮಾಜಿ ಸದಸ್ಯ ರಮೇಶ್‌ಮೋಹನ್ ಇನ್ನಿತರರಿದ್ದರು.