ಮಂಜುನಾಥ ಟಿ.ಭೋವಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ವಿಶೇಷ ಶಾಲೆಗಳಿವೆ. ಅದರಲ್ಲಿ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆಯೂ ಒಂದು.
ನಗರದ ಲಕ್ಷ್ಮೀಪುರಂ ಆರ್‌ಟಿಒ ವೃತ್ತದ ಬಳಿ ಇರುವ ಈ ಶಾಲೆ, 60 ವರ್ಷಗಳಿಂದ ತಮಿಳುನಾಡು ಮೂಲದ ಮಕ್ಕಳಿಗೆ ಕಲಿಕಾ ತಾಣವಾಗಿ ಹೆಸರುವಾಸಿಯಾಗಿದೆ. ಮಾತ್ರವಲ್ಲ, ಜಿಲ್ಲೆಯ ಏಕೈಕ ಸರ್ಕಾರಿ ತಮಿಳು ಶಾಲೆ ಎಂಬ ಹಿರಿಮೆ ಹೊಂದಿದೆ.
2 ತಮಿಳು ಶಾಲೆಗಳಿಗೆ ಬೀಗ:
ಈ ಶಾಲೆಗೂ ಸರ್ಕಾರಿ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದೇ ಕಾರಣಕ್ಕೆ ಶಿವರಾಂಪೇಟೆ ಮತ್ತು ಯಾದವಗಿರಿ ರೈಲ್ವೆ ಕ್ವಾರ್ಟರ್ಸ್‌ನಲ್ಲಿದ್ದ ಎರಡು ಸರ್ಕಾರಿ ತಮಿಳು ಶಾಲೆಗಳಿಗೆ ಬೀಗ ಜಡಿದು ವರ್ಷಗಳೇ ಗತಿಸಿವೆ. ಅಂತೆಯೆ, ಅದೇ ದಾರಿಯಲ್ಲಿ ಸಾಗುತ್ತಿರುವ ಈ ಶಾಲೆಗೂ ಮುಚ್ಚುವ ಭೀತಿ ಎದುರಾಗಿದೆ.
ಮಕ್ಕಳ ಕೊರತೆ:
ಶಾಲೆಯಲ್ಲಿ ಮಕ್ಕಳ ಹಾಜರಾತಿ 10-15 ವರ್ಷದಿಂದ ಇಳಿಯುತ್ತಲೇ ಸಾಗಿದೆ. 2003-04ನೇ ಸಾಲಿನಲ್ಲಿ 126, 2004-05ರಲ್ಲಿ 140 ಮಕ್ಕಳು ಇದ್ದರು. ಅದು ಕ್ರಮೇಣ ಕಡಿಮೆಯಾಗಿದೆ. 2008ರಲ್ಲಿ ಮೂರು ಅಂಕಿಯಿಂದ ಎರಡು ಅಂಕಿಗೆ ಮಕ್ಕಳ ಸಂಖ್ಯೆ ಇಳಿಯಿತು. ಅಲ್ಲಿಂದ ಅದು ಸುಧಾರಣೆಯನ್ನೇ ಕಂಡಿಲ್ಲ.
ಈಗ ಬರೀ 26 ಮಕ್ಕಳಿದ್ದಾರೆ. ಈ ಪೈಕಿ 18 ಹೆಣ್ಣು ಮತ್ತು 8 ಗಂಡು ಮಕ್ಕಳಿದ್ದಾರೆ. ಈ ಪೈಕಿ 12 ಅಂಗವಿಕಲ ಮಕ್ಕಳು ಇರುವುದು ವಿಶೇಷ. 1ರಿಂದ 7ನೇ ತರಗತಿ ವರೆಗೆ ಕ್ರಮವಾಗಿ 1, 6, 2, 4, 2, 6, 5 ಮಕ್ಕಳಿದ್ದು, ಯಾವ ತರಗತಿಗಳಲ್ಲೂ 6 ಮಕ್ಕಳಿಗಿಂತ ಹೆಚ್ಚಿಲ್ಲ. ಇದುವೇ ದೊಡ್ಡ ಸಮಸ್ಯೆಯಾಗಿದೆ.
ತಮಿಳರಿಗೂ ಬೇಡವಾಯಿತು:
ಇಲ್ಲಿ ಯಾವುದೇ ಕನ್ನಡಿಗರು ಕಲಿಯುತ್ತಿಲ್ಲ. ಜತೆಗೆ, ಶಾಶ್ವತವಾಗಿ ನಗರದಲ್ಲೇ ವಾಸಿರುವ ತಮಿಳು ಭಾಷಿಗರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿಲ್ಲ. ಬದಲಿಗೆ, ಇಂಗ್ಲಿಷ್ ಸ್ಕೂಲ್‌ಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಇದು ವಲಸೆ ತಮಿಳುಗರಿಂದಲೇ ನಡೆಯುತ್ತಿದೆ. ವ್ಯಾಪಾರ, ಕೂಲಿ ಕೆಲಸ ಸೇರಿದಂತೆ ಇನ್ನಿತರ ಕಾರಣಕ್ಕೆ ತಾತ್ಕಾಲಿಕವಾಗಿ ಇಲ್ಲಿಗೆ ಬರುವ ತಮಿಳುನಾಡಿನ ಜನರ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಕೂಡ 3-4 ವರ್ಷದ ಬಳಿಕ ಮತ್ತೆ ಸ್ವಗ್ರಾಮಕ್ಕೆ ತೆರಳುತ್ತಿದ್ದಾರೆ. ತಮಿಳುನಾಡು ಸರ್ಕಾರ ಅಲ್ಲಿಯ ಜನರಿಗೆ ಲ್ಯಾಪ್‌ಟಾಪ್, ಟಿವಿ ಸೇರಿ ವಿವಿಧ ಸಲವತ್ತು, ಸೌಲಭ್ಯ ನೀಡುತ್ತಿದೆ. ಅವುಗಳಿಗೆ ಆಕರ್ಷಿತರಾದ ಇಲ್ಲಿಯ ತಮಿಳಿಗರು ಅಲ್ಲಿಗೆ ಹೋಗುತ್ತಿದ್ದಾರೆ. ಇದು ಕೂಡ ಮಕ್ಕಳ ಕೊರತೆಗೆ ಒಂದು ಕಾರಣವಾಗಿದೆ.
ರೈಲಿನಲ್ಲಿ ಬರುತ್ತಿದ್ದ ಮಕ್ಕಳು:
‘ಈ ಹಿಂದೆ ನಂಜನಗೂಡಿನಲ್ಲಿ ತಮಿಳು ಭಾಷಿಗರ ಸಂಖ್ಯೆ ಹೆಚ್ಚಿತ್ತು. ಅಲ್ಲಿಂದಲೇ 70 ಮಕ್ಕಳು ರೈಲಿನ ಮೂಲಕ ಬರುತ್ತಿದ್ದರು. ಅವರನ್ನು ಕರೆದುಕೊಂಡು ಬರಲು, ವಾಪಸ್ ರೈಲಿಗೆ ಕಳುಹಿಸಲು ಸಮೀಪದ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ನಾವು ಹೋಗುತ್ತಿದ್ದೆವು. ಈಗ ಅಲ್ಲಿಂದಲೂ ಮಕ್ಕಳು ಬರುತ್ತಿಲ್ಲ’ ಎಂದು ಬೇಸರದಿಂದ ಹೇಳುತ್ತಾರೆ ಶಿಕ್ಷಕಿ ಲತಾ ಅವರು.
‘ಇದು ಪಕ್ಕಾ ತಮಿಳು ಮಾಧ್ಯಮ ಶಾಲೆಯಾಗಿರುವುದರಿಂದ ಗಣಿತ, ವಿಜ್ಞಾನ, ಸಮಾಜವಿಜ್ಞಾನವನ್ನು ತಮಿಳು ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ. ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಾಗಿ ತಮಿಳು, ಕನ್ನಡ ಮತ್ತು ಇಂಗ್ಲಿಷ್ ಕಲಿಸಲಾಗುತ್ತಿದೆ. ಇಲ್ಲಿಯ ಮಕ್ಕಳ ಗ್ರಹಿಕಾ ಶಕ್ತಿ ಉತ್ತಮವಾಗಿದೆ. ಕನ್ನಡ, ಇಂಗ್ಲಿಷ್ ಚೆನ್ನಾಗಿ ಕಲಿಯುತ್ತಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಇಂಜಿನಿಯರಿಂಗ್, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳನ್ನು ಕಲಿತು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದು, ಕೆಲವರು ಭೂಸೇನೆ, ಪೊಲೀಸ್ ಇಲಾಖೆ, ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಶಿಕ್ಷಕಿ ಹೆಮ್ಮೆಯಿಂದ ಹೇಳಿದರು.
ಮೂಗು ಮುರಿಯುವಂತಿಲ್ಲ:
ಉಳಿದ ಸರ್ಕಾರಿ ಶಾಲೆಗಳಿಗಿಂತ ಇಲ್ಲಿ ಉತ್ತಮ ವ್ಯವಸ್ಥೆ, ಪಾರಂಪರಿಕ ಕಟ್ಟಡ, ಕಲಿಕೆಗೆ ಪೂರಕ ವಾತಾವರಣವೂ ಇದೆ. ಈ ಶಾಲೆಯನ್ನು ದತ್ತು ಪಡೆದಿರುವ ಮೈಸೂರು ತಮಿಳು ಸಂಘ ವಿವಿಧ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಹೀಗಾಗಿ, ಸರ್ಕಾರಿ ಶಾಲೆ ಎಂದು ಮೂಗುಮುರಿಯುವಂಥ ಸ್ಥಿತಿ ಇಲ್ಲಿಲ್ಲ.
ಸೌಲಭ್ಯಗಳಿಗೆ ಕೊರತೆ ಇಲ್ಲ:
ತಮಿಳು ಮಕ್ಕಳಿಗಾಗಿ 1961ರಲ್ಲಿ ಈ ಶಾಲೆಯನ್ನು ಪ್ರಾರಂಭಿಸಲಾಯಿತು. ಈಗಿರುವ ಕಟ್ಟಡ ಹಾರ್ಡ್ವಿಕ್ ಸಂಸ್ಥೆಗೆ ಸೇರಿದ್ದು, ಪ್ರತಿ ತಿಂಗಳು ಬಾಡಿಗೆಯನ್ನು ಈ ಹಿಂದೆ ನೀಡಲಾಗುತ್ತಿತ್ತು, ಈಗ ನೀಡುತ್ತಿಲ್ಲ. ಮುಖ್ಯ ಶಿಕ್ಷಕರು ಸೇರಿ ಇಲ್ಲಿ ಮೂವರು ಶಿಕ್ಷಕರಿದ್ದಾರೆ. ಸರ್ಕಾರಿ ಶಾಲೆಗೆ ದೊರೆಯುವ ಎಲ್ಲ ಸವಲತ್ತುಗಳೂ ಇಲ್ಲಿಗೆ ಸಿಗುತ್ತಿವೆ. ಸೌಲಭ್ಯಗಳಿಗೆ ಕೊರತೆಯಿಲ್ಲ.
ವಿಶೇಷ ಶಾಲೆ ಉಳಿಸಿ:
ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ತಮಿಳು ಶಾಲೆಗಳಿವೆ. ಮೈಸೂರು ಮತ್ತು ಮಂಡ್ಯ ನಗರದಲ್ಲಿ ತಲಾ ಒಂದು ಶಾಲೆ, ಚಾಮರಾಜನಗರ ಜಿಲ್ಲೆಯಲ್ಲಿ ಅಂದಾಜು 10 ಶಾಲೆಗಳಿವೆ. ಇವುಗಳೆಲ್ಲ ಮಕ್ಕಳ ಕೊರತೆಯಿಂದ ಮುಚ್ಚುವ ಭೀತಿಯಲ್ಲಿವೆ. ಮೈಸೂರಿನಲ್ಲಿರುವ ಏಕೈಕ ತಮಿಳು ಶಾಲೆಯನ್ನು ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ವಿಶೇಷ ಕಾಳಜಿ ವಹಿಸಬೇಕಿದೆ. ಇಲ್ಲವಾದರೆ, ಇದು ಕೂಡ ಇತಿಹಾಸದ ಪುಟದಲ್ಲಿ ಸೇರಿಹೋಗಲಿದೆ.
---------------
ಕಲ್ಯಾಣಗಿರಿ, ಬಂಡಿಪಾಳ್ಯ, ಬೆಲವತ್ತ ಸೇರಿ ಮೈಸೂರಿನ ವಿವಿಧ ಭಾಗಗಳಲ್ಲಿ ತಮಿಳು ಭಾಷಿಗರು ನೆಲೆಸಿದ್ದಾರೆ. ಅವರ ಮನೆಗೆ ಹೋಗಿ ‘ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ’ ಎಂದು ವಿನಂತಿಸಿಕೊಂಡಿದ್ದೇವೆ. ಆದರೆ, ಅಷ್ಟು ದೂರದಿಂದ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಾರೆ. ಜತೆಗೆ, ಶಾಶ್ವತವಾಗಿ ಇಲ್ಲಿಯೇ ನೆಲೆ ನಿಂತಿರುವ ತಮಿಳಿಗರು ‘ನಮಗೆ ಏಕೆ ಬೇಕು ತಮಿಳು ಮಾಧ್ಯಮ’ ಎಂಬ ಮನೋಭಾವ ಹೊಂದಿದ್ದಾರೆ.
ಲತಾ, ಶಿಕ್ಷಕಿ