ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ ‘ವಾಟರ್ ಪ್ಲಸ್’ ನಗರ ಎಂಬ ಕೀರ್ತಿ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, 2024-25ನೆ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿಗೆ ‘ವಾಟರ್ ಪ್ಲಸ್’ ನಗರವೆಂಬ ಗರಿ ಮೂಡಿದೆ.
ಸ್ವಚ್ಛ ಭಾರತ್ ಮಿಷನ್ ವೆಬ್‌ಸೈಟ್‌ನಲ್ಲಿ ಇದೀಗ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮೈಸೂರು ಪ್ರತಿ ಬಾರಿ ತ್ಯಾಜ್ಯ ಮುಕ್ತ ನಗರ ಹಾಗೂ ಬಯಲು ಶೌಚಮುಕ್ತ ನಗರ ಪ್ರಶಸ್ತಿಯನ್ನು ನಿರಂತರವಾಗಿ ಪಡೆದುಕೊಂಡು ಬರುತಿತ್ತು. ಆದರೆ, ವಾಟರ್ ಪ್ಲಸ್ ನಗರ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ವಾಟರ್ ಪ್ಲಸ್ ನಗರ ಪ್ರಮಾಣಪತ್ರ ಪಡೆಯಲು ‘ಒಡಿಎಫ್++’ (ಬಯಲು ಶೌಚಮುಕ್ತ ನಗರ) ಮಾನದಂಡವನ್ನು ಪೂರೈಸಬೇಕು. ನಗರ ಒಡಿಎಫ್ ಸ್ಥಾನ ಪಡೆದರೂ ‘ಒಡಿಎಫ್++’ ಸ್ಥಾನ ಇದುವರೆಗೆ ಪಡೆಯಲು ಸಾಧ್ಯವಾಗಿರಲಿಲ್ಲ.
ಏನಿದು ವಾಟರ್ ಪ್ಲಸ್?: ‘ವಾಟರ್ ಪ್ಲಸ್’ ಅಂದರೆ ನಗರಗಳಲ್ಲಿನ ಜಲಮೂಲಗಳು, ನದಿಗಳು ಮತ್ತು ಕೊಳಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದನ್ನು ಒಳಗೊಂಡಿರುವ ಒಂದು ಸ್ವಚ್ಛತಾ ಕಾರ್ಯಕ್ರಮವಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, ನಗರಗಳನ್ನು ವಿವಿಧ ಸ್ವಚ್ಛತಾ ಮಾನದಂಡಗಳ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ.
ನದಿಗಳು ಮತ್ತು ತೊರೆಗಳಲ್ಲಿ ಶುದ್ಧ ಮತ್ತು ಮಳೆನೀರು ಹರಿಯುವುದನ್ನು ಖಚಿತಪಡಿಸಿಕೊಳ್ಳಬೇಕು. ಒಳಚರಂಡಿ ನೀರನ್ನು ಕಡ್ಡಾಯವಾಗಿ ಮರುಬಳಕೆ ಮಾಡಬೇಕು. ನಗರದಲ್ಲಿ ಇದೀಗ ಯುಜಿಡಿ ನೀರು ಮಳೆ ನೀರು ಚರಂಡಿಗೆ ಸೇರ್ಪಡೆಯಾಗದಂತೆ ಹಾಗೂ ದಳವಾಯಿ ಕೆರೆಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ವಾಟರ್ ಪ್ಲಸ್ ನಗರವನ್ನು ಪ್ರಥಮ ಬಾರಿಗೆ 2021ರಲ್ಲಿ ಇಂದೋರ್ ನಗರ ಪಡೆದುಕೊಂಡಿತ್ತು. ಅದಾದ ನಂತರ ವಿವಿಧ ನಗರಗಳು ಈ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ತ್ಯಾಜ್ಯಮುಕ್ತ ನಗರಿ: ನಗರವು 2019 ರಿಂದ ನಿರಂತರವಾಗಿ 5 ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ ಪ್ರಶಸ್ತಿ ಪಡೆಯುತ್ತಾ ಬರುತ್ತಿದ್ದು, ಈ ಬಾರಿಯೂ 5 ಸ್ಟಾರ್ ರೇಟಿಂಗ್ ದೊರೆತ್ತಿದೆ. ನಗರವು 7 ಸ್ಟಾರ್ ರೇಟಿಂಗ್ ಪಡೆಯಲು ಪ್ರಯತ್ನ ನಡೆಸಿದರೂ ಈ ಬಾರಿಯೂ ಸಹ ಅದು ಸಾಧ್ಯವಾಗಲಿಲ್ಲ. ಈ ಬಾರಿ ದೇಶದ 12 ನಗರಗಳು 7 ಸ್ಟಾರ್, 22 ನರಗಳು 22 ಸ್ಟಾರ್, 125 ನಗರಗಳು 3ಸ್ಟಾರ್, 791 ನಗರಗಳು 1ಸ್ಟಾರ್ ಪಡೆದಿವೆ. 7 ಸ್ಟಾರ್ ಪಡೆಯಲು ಶೇ.90 ರಷ್ಟು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಹಾಗೂ ಶೇ.90 ರಷ್ಟು ತ್ಯಾಜ್ಯ ಸಂಸ್ಕರಣೆ ಆಗಬೇಕು. 5 ಸ್ಟಾರ್ ಪಡೆಯಲು ಶೇ.90 ರಷ್ಟು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ, ಶೇ.80 ರಷ್ಟು ತ್ಯಾಜ್ಯ ಸಂಸ್ಕರಣೆ ನಡೆಯಬೇಕಾಗಿದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು. 2024ರಲ್ಲಿ ರಾಷ್ಟ್ರಮಟ್ಟದ ಸಮಗ್ರ ರ‌್ಯಾಂಕಿಂಗ್ ಕೈ ಬಿಡಲಾಗಿದ್ದು, ನಗರವು ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆದುಕೊಂಡಿದೆ.
ಹಲವು ಪ್ರಶಸ್ತಿಗಳು: ಸ್ವಚ್ಛತಾ ರ‌್ಯಾಂಕಿಂಗ್ ಜತೆಗೆ ಇದುವರೆಗೆ ಹಲವು ಪ್ರಶಸ್ತಿಗಳನ್ನು ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದೆ. 2018, 2020 ಮತ್ತು 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಪಡೆಯಿತು. 2021ರಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ, ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದಿದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಈ ಬಾರಿ ಮೈಸೂರನ್ನು ‘ವಾಟರ್ ಪ್ಲಸ್ ನಗರ’ ಎಂದು ಘೋಷಿಸಲಾಗಿದೆ. ‘ವಾಟರ್ ಪ್ಲಸ್ ನಗರ’ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ನಗರಕ್ಕೆ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆಯಲು ಸಹಕಾರಿಯಾಯಿತು. ಈ ಬಾರಿ ನಗರ ‘ಒಡಿಎಫ್++’ ಮತ್ತು 5 ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯಮುಕ್ತ ನಗರಿ ಪ್ರಶಸ್ತಿ ದೊರೆತ್ತಿದೆ. ಸ್ವಚ್ಛತೆಯಲ್ಲಿ ಮತ್ತಷ್ಟು ಸಾಧನೆ ತೋರಲು ನಗರದ ನಾಗರಿಕರು ನಗರ ಪಾಲಿಕೆಯೊಂದಿಗೆ ಕೈ ಜೋಡಿಸಬೇಕು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ