ಮೈಸೂರು: ಮೈಸೂರು ಧಾರ್ಮಿಕ ಪ್ರತಿಷ್ಠಾನದಿಂದ ಸೆ.16ರಿಂದ 24ರವರೆಗೆ ನಗರದ ಜೆಎಲ್‌ಬಿ ರಸ್ತೆಯ ಮಾಧವ ಕೃಪಾದಲ್ಲಿ ಮೈಸೂರು ಗಣೇಶ ಉತ್ಸವ ಆಯೋಜಿಸಲಾಗಿದೆ.
ಈ ಪ್ರಯುಕ್ತ ಸೆ.16ರಂದು ಮಧ್ಯಾಹ್ನ 3ರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪ ಮೂರ್ತಿ ತಯಾರಿಸುವ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಪದಾಧಿಕಾರಿ ಚರಣ್ ಶಿವರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಸಿಂಥೆಟಿಕ್ ಬಣ್ಣದ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ನಗರದ ವಿವಿಧ ಶಾಲೆಗಳ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ. ಮೂರ್ತಿಗಳಲ್ಲಿ ಬೀಜದ ಉಂಡೆಗಳನ್ನು ಇರಿಸಲಿದ್ದು, ಅವುಗಳನ್ನು ಮನೆಯಲ್ಲಿ ಪೂಜಿಸಿ ಬಳಿಕ ಗಿಡ ಬೆಳೆಯುವಂತೆ ವಿಸರ್ಜಿಸುವುದಕ್ಕೂ ಪ್ರೋತ್ಸಾಹಿಸಲಿದ್ದೇವೆ ಎಂದರು.
ಉತ್ಸವದ ದಿನದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧೆಗಳು ಪೂಜಾ ಕಾರ್ಯಗಳು ನಡೆಯಲಿವೆ. ಸೆ.24ರಂದು ಕೋಟೆ ಆಂಜನೇಯ ದೇವಸ್ಥಾನದಿಂದ ನಗರದ ವಿವಿಧ 50 ಗಣೇಶ ಪೆಂಡಾಲ್‌ಗಳ ಗಣಪತಿಗಳೊಂದಿಗೆ ಸಾಮೂಹಿಕ ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಮಾಹಿತಿಗೆ ಮೊ.83109 44372 ಸಂಪರ್ಕಿಸಿ ಎಂದು ತಿಳಿಸಿದರು.
ಸಮಿತಿಯ ಸಂಚಾಲಕ ಎನ್.ಆರ್.ಮಂಜುನಾಥ್, ಸದಸ್ಯ ಸಿ.ಕೆ.ರುದ್ರಮೂರ್ತಿ ಇದ್ದರು.