ಜಿಲ್ಲೆ

ರೀಡ್ ಆ್ಯಂಡ್ ಟೇಲರ್ ಮುಚ್ಚಿದ್ದು ಸರಿಯಲ್ಲ

Mysuru

ಮೈಸೂರು: ನಂಜನಗೂಡಿನ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆಯನ್ನು ಏಕಾಏಕಿ ಮುಚ್ಚಿರುವ ಕ್ರಮ ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಮಿಕರ ಭದ್ರತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ಕಾರ್ಮಿಕ ಸಚಿವ ಶಿವರಾಮ್ ಕೆ.ಹೆಬ್ಬಾರ ನಿರ್ದೇಶಿಸಿದರು.

ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ಗುರುವಾರ ಸಭೆ ಕರೆದು ರೀಡ್ ಆ್ಯಂಡ್ ಟೇಲರ್ ಕಂಪನಿಯ ಪ್ರತಿನಿಧಿಗಳ, ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದರು.

1998ರಲ್ಲಿ ಪ್ರಾರಂಭವಾಗಿರುವ ಕಂಪನಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಈಗ ಕೋವಿಡ್-19 ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಫೆ.4ರಿಂದ ತಾತ್ಕಾಲಿಕವಾಗಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ಪುನಃ ಕೆಲಸ ಪ್ರಾರಂಭಿಸಲಾಗುತ್ತದೆಂದು ಪತ್ರದಲ್ಲಿ ಕಂಪನಿಯವರು ಉಲ್ಲೇಖಿಸಿದ್ದರು. ಆದರೆ, ಮೇ 14ರಂದು ಏಕಾಏಕಿ ಎಲ್ಲ ಕಾರ್ಮಿಕರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಇದು ಕಾರ್ಮಿಕ ನೀತಿಗೆ ವಿರುದ್ಧವಾಗಿದೆ ಎಂದು ಕಾರ್ಮಿಕ ಮುಖಂಡರು ಕಿಡಿಕಾರಿದರು.

3ನೇ ಹಂತದ ಲಾಕ್‌ಡೌನ್ ಮೇ 17ರಂದು ಮುಗಿಯುತ್ತಿತ್ತು. ಅದು ಮುಗಿಯುವ 3 ದಿನ ಮುಂಚಿತವಾಗಿ ಕಾರ್ಮಿಕರ, ಕಾರ್ಮಿಕ ಒಕ್ಕೂಟ ಸಹಿತ ಯಾರ ಬಳಿಯೂ ಚರ್ಚಿಸದೇ ನೌಕರರನ್ನು ವಜಾಗೊಳಿಸಿರುವುದು ಸರಿಯಲ್ಲ ಎಂದರು.

ಕಂಪನಿ ಬಳಿ ಹಣವಿಲ್ಲ: ಕಂಪನಿಯ ಪ್ರತಿನಿಧಿ ರವಿಶಂಕರ್ ದೇವರಕೊಂಡ ಮಾತನಾಡಿ, ತಮ್ಮ ಕಂಪನಿ ನಷ್ಟದಲ್ಲಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದಿದ್ದರೂ ಮಾರ್ಚ್ ತಿಂಗಳ ಸಂಬಳವನ್ನು ನೀಡಲಾಗಿದೆ. ಪ್ರತಿ ತಿಂಗಳಿಗೆ 4ರಿಂದ 4.5 ಕೋಟಿ ರೂ. ಖರ್ಚು ಬರುತ್ತದೆ. ಉತ್ಪಾದನೆ ಇಲ್ಲದ ಸಂದರ್ಭದಲ್ಲಿ 2ರಿಂದ 2.5 ಕೋಟಿವರೆಗೆ ಇತರ ಖರ್ಚು ಇರುತ್ತದೆ. ನಮಗೆ ವಿದ್ಯುತ್ ಬಿಲ್ ಕಟ್ಟಲೂ ಸಹಿತ ಹಣವಿಲ್ಲ. ಇದರಿಂದಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ವಿದ್ಯುತ್ ಇಲ್ಲದೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇದರ ಜತೆಗೆ ಯಾರಾದರೂ ಹೂಡಿಕೆದಾರರು ಮುಂದೆ ಬಂದರೆ ಕಂಪನಿಯನ್ನು ಪುನಃ ಪ್ರಾರಂಭಿಸಬಹುದು. ಇದಾಗದಿದ್ದರೆ ಸಂಬಳ ಕೊಡಲು ನಮ್ಮ ಬಳಿ ಹಣವಿಲ್ಲ ಎಂದು ಸಮಸ್ಯೆಯನ್ನು ತೋಡಿಕೊಂಡರು.

‘ಕಾರ್ಮಿಕರನ್ನು ವಜಾಗೊಳಿಸಿರುವ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲದೆ, ಇಂತಹ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಕಾರ್ಮಿಕರೊಂದಿಗೆ ಚರ್ಚೆಯನ್ನೂ ಮಾಡಿಲ್ಲ. ಇಂಥ ಆರೋಪ ಯಾವೊಬ್ಬ ಲಿಕ್ವಿಡೇಟರ್ ಮೇಲೂ ಬರುವುದು ಸರಿಯಲ್ಲ. ಹೀಗಾಗಿ ತುರ್ತಾಗಿ ಮೈಸೂರಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಎಂದು ಸಚಿವ ಶಿವರಾಮ ಹೆಬ್ಬಾರ ಸೂಚಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಕಾರ್ಮಿಕರಿಗೆ ಕೆಲಸ ಇಲ್ಲದಿದ್ದರೂ ವೇತನ ನೀಡಬೇಕು. ಅವರು ಸುಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಆದೇಶವನ್ನೂ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯನ್ನು ಪುನಃ ಪ್ರಾರಂಭಿಸಿ. ಜತೆಗೆ ಕಾರ್ಮಿಕರ ವಜಾ ಆದೇಶವನ್ನು ಹಿಂಪಡೆಯುವ ಬಗ್ಗೆ ಮರುಚಿಂತನೆ ಮಾಡಿ ಎಂದು ತಿಳಿಸಿದರು.