ಜಿಲ್ಲೆ

ಹೋರಾಟಕ್ಕೆ ಸ್ಪಂದಿಸದ ಯಾವುದೇ ಸರ್ಕಾರ: ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎನ್.ದೇವರಾಜು ಬೇಸರ

ಮಂಡ್ಯ: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕರನ್ನು ’ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎನ್.ದೇವರಾಜು ಒತ್ತಾಯಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ರಾಜ್ಯ ಮತ್ತು ಜಿಲ್ಲಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕಳೆದ 34 ವರ್ಷದಿಂದ 10,450 ಗ್ರಾಮ ಸಹಾಯಕರು ಯಾವುದೇ ಸೇವಾಭದ್ರತೆ ಇಲ್ಲದೇ ಸೇವೆ ಸಲ್ಲಿಸಲಾಗುತ್ತಿದೆ. ಆದ್ದರಿಂದ ಸೇವಾಭದ್ರತೆಯನ್ನು ಒದಗಿಸಿಕೊಡಬೇಕೆಂದು ನಿರಂತರ ಹೋರಾಟ ಮಾಡಿಕೊಂಡು ಬಂದರೂ ಬೇಡಿಕೆಯನ್ನು ಯಾವುದೇ ಸರ್ಕಾರ ಈಡೇರಿಸಿಲ್ಲ ಎಂದು ಆಗ್ರಹ ಪಡಿಸಿದರು.

ಕಂದಾಯ ಇಲಾಖೆಯಲ್ಲಿ ಹಲವು ದಶಕ ಸೇವೆ ಸಲ್ಲಿಸುತ್ತಾ ಬಂದಿರುವ ವಾಲಿಕಾರ, ತೋಟ, ಚಕ್ರ, ಉಗ್ರಾಣಿ, ಸನದಿ, ಹಳಬ ಎಂದು ವಿವಿಧ ಹೆಸರುಗಳಿಂದ ಕರೆಯಿಸಿಕೊಳ್ಳುವ ಗ್ರಾಮ ಸಹಾಯಕರ ಕನಸು ಕಮರಿದೆ. ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿರುವ 20 ಸಾವಿರ ನೌಕರರನ್ನು ಕಾಯಂ ಮಾಡಿದೆ. ಆದರೆ ಗ್ರಾಮ ಸಹಾಯಕರ‌್ನು ಕಡೆಗಣಿಸುತ್ತಲೇ ಬಂದಿವೆ. ತಹಸೀಲ್ದಾರ್‌ರಿಂದ ಹಿಡಿದು ಗ್ರಾಮಲೆಕ್ಕಿಗರ ಕೈಕೆಳಗೆ ಡಿ ದರ್ಜೆ ನೌಕರರು ಮಾಡುವಂತೆ ಕೆಲಸ ಮಾಡುತ್ತಾರೆ. ಆದಾಗ್ಯೂ ಯಾವುದೇ ಸವಲತ್ತುಗಳಿಲ್ಲ. ಗೌರವಧನ ಕೇವಲ ಏಳು ಸಾವಿರ ರೂ ಮಾತ್ರ. ಭಾರತದ ಸಂವಿಧಾನದ ಪರಿಚ್ಛೇದ 309ರ ಪ್ರಕಾರ ಗ್ರಾಮ ಸಹಾಯಕರ ಸೇವೆಯನ್ನು ’ಡಿ’ ಗ್ರೂಪ್ ನೌಕರ ಎಂದು ಪರಿಗಣಿಸಿ ಸೇವಾಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಪರಮಾಧಿಕಾರ ರಾಜ್ಯಪಾಲರಿಗೆ ಇರುವುದನ್ನು ಹೈಕೋರ್ಟ್ ಕೂಡ ಹೇಳಿದೆ ಎಂದು ಮಾಹಿತಿ ನೀಡಿದರು.

ಸಂಘದ ಕಾನೂನು ಸಲಹೆಗಾರ ಪಾವಗಡ ಶ್ರೀರಾಮ್ ಮಾತನಾಡಿ, ಗ್ರಾಮಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಅಟಲ್ ಜೀ ಕೇಂದ್ರಕ್ಕೆ ಬರುವ ಎಲ್ಲ ಅರ್ಜಿಗಳ ಪರಿಶೀಲನೆ ವೇಳೆ ಮೇಲಧಿಕಾರಿಗಳಿಗೆ ಸಹಾಯ ಮಾಡುತ್ತಾರೆ. ಚುನಾವಣೆ, ನೆರೆಹಾವಳಿ, ಆಕಸ್ಮಿಕ ಬೆಂಕಿ ಘಟನೆ, ಕೋಮುಗಲಭೆ, ಜಾತ್ರೆ ಮತ್ತು ಸಾರ್ವಜನಿಕ ಹಾಗೂ ಸರ್ಕಾರ ವಿವಿಧ ಉತ್ಸವಗಳಲ್ಲಿ ನಿರಂತರ ಸೇವೆಗೆ ದುಡಿಸಿಕೊಳ್ಳುವ ಸರ್ಕಾರಕ್ಕೆ ನಮ್ಮ ಬೇಡಿಕೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ್, ಮೈಸೂರು ವಿಭಾಗದ ಉಪಾಧ್ಯಕ್ಷ ಬಸವರಾಜು, ಜಿಲ್ಲಾ ಗೌರವಾಧ್ಯಕ್ಷ ಎಂ.ಪಿ.ಜೈಶಂಕರ್, ಜಿಲ್ಲಾಧ್ಯಕ್ಷ ರಾಜಣ್ಣ, ಖಜಾಂಚಿ ಚಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಮು, ತಾಲೂಕು ಅಧ್ಯಕ್ಷ ರಾಜೇಶ್ ಗೌಡಗೆರೆ, ಮುಖಂಡರಾದ ಪ್ರತಾಪ್ ಮದಕರಿ, ಮಡಿವಾಳಪ್ಪ, ಮುದ್ದುಕೃಷ್ಣ, ಮಂಜುನಾಥ್ ಇತರರಿದ್ದರು.