ಜಿಲ್ಲೆ

ಮೈಸೂರು ಜಿಲ್ಲಾ ಖೋ ಖೋ ಸಂಸ್ಥೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ವತಿಯಿಂದ ‘ಕರ್ನಾಟಕ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ’ಗೆ ಚಾಲನೆ

ಅವಿನಾಶ್ ಜೈನಹಳ್ಳಿ

ಮೈಸೂರು: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಬೇಗ ಭರ್ತಿ ಮಾಡಲು ಕ್ರಮ ವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಖೋ ಖೋ ಸಂಸ್ಥೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಮತ್ತು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಆಯೋಜಿಸಿರುವ ‘ಕರ್ನಾಟಕ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ 2024-25’ ಎರಡು ದಿನಗಳ ಪ್ರಕ್ರಿಯೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅವಶ್ಯಕತೆ ಇದೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ಡಾ.ಎಲ್.ಆರ್. ವೈದ್ಯನಾಥನ್ ವರದಿಯಂತೆ ಕಡ್ಡಾಯಗೊಳಿಸಬೇಕು. ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ವರ್ಗಾವಣೆ ಮಾಡಬಾರದು ಎಂದರು.

ರಾಷ್ಟ್ರೀಯ ಏಕತೆಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಅದ್ದರಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಮ್ಮ ಶಾಲಾ-ಕಾಲೇಜುಗಳಲ್ಲಿ ಉತ್ತಮ ಕ್ರೀಡಾಪಟು ಗಳಿದ್ದಾರೆ. ಇವರಿಗೆ ಸದಾವಕಾಶ ಕಲ್ಪಿಸಿ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಒದಗಿಸಬೇಕು. ಹಾಗಾಗಿ, ಸರ್ಕಾರ ಆದಷ್ಟು ಬೇಗ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ತುಂಬ ಬೇಕು ಎಂದು ಡಾ.ಸಿ.ಕೃಷ್ಣ ಆಗ್ರಹಿಸಿದರು.

ಸೂಕ್ತವಾಗಿ ಅನುಷ್ಠಾನವಾಗಬೇಕು:

ಸರ್ಕಾರ ಕ್ರೀಡಾ ಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸ ಬೇಕು. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂದು ಡಾ. ಕೃಷ್ಣ ಆಗ್ರಹಿಸಿದರು.

ಮೈಸೂರು ನಗರದಲ್ಲಿ ಅನೇಕ ವರ್ಷಗಳ ಬಳಿಕ ಕರ್ನಾಟಕ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ ಪ್ರಕ್ರಿಯೆ ಆಯೋಜಿಸಲಾಗಿದೆ. ಹೆಚ್ಚು ಜನ ತೀರ್ಪುಗಾರರನ್ನು ಕೊಡುಗೆಯಾಗಿನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ. ಇದರ ಫಲವಾಗಿ ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಖೋಖೋ ಪಂದ್ಯಾವಳಿ ಆಯೋಜನೆಗೆ ನೆರವಾಗಲಿದೆ. ಹೆಚ್ಚಿನ ಕ್ರೀಡಾ ಪ್ರತಿಭೆಗಳು ಹೊರ ಬರಲು ಸಹಕಾರಿಯಾಗಲಿದೆ ಎಂದರು.

ಇಂದಿನ ಪರೀಕ್ಷೆಯಲ್ಲಿ ಖೋ ಖೋ ಆಟಗಾರರು ಮತ್ತು ಬಿಪಿಎಡ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆಗಳ ಸೇವೆ ಮಾದರಿಯಾಗಿದೆ ಎಂದವರು ಹೇಳಿದರು.

ಮೈಸೂರು ಜಿಲ್ಲಾ ಖೋ ಖೋ ಸಂಸ್ಥೆಯ ಖಜಾಂಚಿ ಎಂ. ನಟರಾಜನ್ ಮಾತನಾಡಿ, ಇದು ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ ಆಗಿದ್ದು, ರಾಜ್ಯದ ವಿವಿಧ ಭಾಗದಿಂದ 70ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ ಎಂದರು. ತೀರ್ಪುಗಾರರ ಮಂಡಳಿಯ ಸಂಚಾಲಕ ಡಾ.ಸಿ.ಚಂದ್ರಶೇಖರ್, ಆಯೋಜಕರಾದ ಮನೋಹರ್, ಎಂ.ಎಸ್.ಮಂಜುನಾಥ್ ಇದ್ದರು.