ಜಿಲ್ಲೆ

ಮೈಸೂರು ಜಿಲ್ಲೆ ಭಾಗಶಃ ಬರಪೀಡಿತ

ಮಂಜುನಾಥ ತಿಮ್ಮಯ್ಯ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕೆ.ಆರ್.ನಗರ ತಾಲೂಕು ಹೊರತುಪಡಿಸಿ ಇಡೀ ಮೈಸೂರು ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಜನ-ಜಾನುವಾರಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ.


ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುಪಾಲು ಪ್ರದೇಶಗಳ ಮೇಲೆ ಬರದ ಕರಿಛಾಯೆ ಆವರಿಸಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 9 ತಾಲೂಕುಗಳಿವೆ. ಅದರಲ್ಲಿ 8 ತಾಲೂಕು ಬರ ಪಟ್ಟಿಯಲ್ಲಿವೆ.

ಎಚ್.ಡಿ.ಕೋಟೆ, ಹುಣಸೂರು, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ, ಸರಗೂರು, ಸಾಲಿಗ್ರಾಮ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ. ಜಿಲ್ಲೆಯಲ್ಲಿ ಕೆ.ಆರ್.ನಗರ ಮಾತ್ರ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿದೆ.


ಶೇ.18ರಷ್ಟು ಮಳೆ ಕೊರತೆ:


ಜಿಲ್ಲೆಯಲ್ಲಿ ಶೇ.18ರಷ್ಟು ಮಳೆ ಕೊರತೆಯಾಗಿದೆ. ಜನವರಿ 1ರಿಂದ ಸೆಪ್ಟೆಂಬರ್ 11ರವರೆಗೆ ವಾಡಿಕೆಯಂತೆ 541.5 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಈವರೆಗೆ 446.1 ಮಿ.ಮೀ.ನಷ್ಟು ಮಳೆಯಾಗಿದೆ. 2022ರಲ್ಲಿ ಈ ಅವಧಿಯಲ್ಲಿ 993 ಮಿ.ಮೀ.ನಷ್ಟು ಮಳೆಯಾಗಿತ್ತು.

ಕಳೆದ ಸಲ ಶೇ.82ರಷ್ಟು ಹೆಚ್ಚಿನ ಮಳೆ ದಾಖಲಾಗಿತ್ತು. ಪ್ರಸ್ತಕ ಸಾಲಿನಲ್ಲಿ ಅದಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. 95.4 ಮಿ.ಮೀ.ನಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ 837.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 108 ಮಿ.ಮೀ.ನಷ್ಟು ಮಾತ್ರ ಮಳೆ ಸುರಿದಿದೆ.

ಸಾಲಿಗ್ರಾಮದಲ್ಲಿ ಹೆಚ್ಚು, ಸರಗೂರಿನಲ್ಲಿ ಕಡಿಮೆ:


ಸರಗೂರು(-23), ಹುಣಸೂರು(-18), ಪಿರಿಯಾಪಟ್ಟಣ(-18) ಮೈಸೂರು ತಾಲೂಕಿನಲ್ಲಿ (-16) ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಉಳಿದಂತೆ ನಂಜನಗೂಡಿನಲ್ಲಿ ಶೇ.4, ತಿ.ನರಸೀಪುರದಲ್ಲಿ ಶೇ.9ರಷ್ಟು ಮಳೆ ಕೊರತೆಯಾಗಿದ್ದರೆ, ಎಚ್.ಡಿ.ಕೋಟೆ ತಾಲೂಕಿನಲ್ಲಿ ವಾಡಿಕೆಯಂತೆ ಸಮ ಪ್ರಮಾಣದ ಮಳೆಯಾಗಿದೆ. ಸಾಲಿಗ್ರಾಮದಲ್ಲಿ ಶೇ.11ರಷ್ಟು ಅಧಿಕ ಮಳೆಯಾಗಿದೆ.

ಆದಾಗ್ಯೂ, ಸಾಲಿಗ್ರಾಮ, ಎಚ್.ಡಿ.ಕೋಟೆ ತಾಲೂಕು ಬರ ಪಟ್ಟಿಗೆ ಸೇರಿವೆ. ಈ ಪಟ್ಟಿಯಿಂದ ಹೊರಗೆ ಇರುವ ಕೆ.ಆರ್.ನಗರ ತಾಲೂಕಿನಲ್ಲೂ ಶೇ.8ರಷ್ಟು ಮಳೆ ಕೊರತೆ ಉಂಟಾಗಿದೆ.
ಕಳೆದ ವರ್ಷ ಹುಣಸೂರು(ಶೇ.104), ಕೆ.ಆರ್.ನಗರ(ಶೇ.144), ಮೈಸೂರು(ಶೇ.101), ನಂಜನಗೂಡು(ಶೇ.100), ತಿ.ನರಸೀಪುರದಲ್ಲಿ(ಶೇ.124) ಅಧಿಕ ಮಳೆಯಾಗಿತ್ತು.

ಶೇ.69ರಷ್ಟು ಬಿತ್ತನೆ:


ಮಳೆ ಅಭಾವದಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಶೇ.69ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ 3.97 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 2.72 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಶೇ.87ರಷ್ಟು ಬಿತ್ತನೆ ಕೆಲಸ ಪೂರ್ಣಗೊಂಡಿತ್ತು.

ಪ್ರಸಕ್ತ ಸಾಲಿನಲ್ಲಿ ಮಳೆ ಆಶ್ರಿತ ಪ್ರದೇಶದಲ್ಲಿ ಶೇ.76ರಷ್ಟು ಮತ್ತು ನೀರಾವರಿ ಪ್ರದೇಶದಲ್ಲಿ ಶೇ.57ರಷ್ಟು ಮಾತ್ರ ರೈತರು ಬಿತ್ತನೆ ಮಾಡಿದ್ದಾರೆ. ತಿ.ನರಸೀಪುರ(ಶೇ.56) ಮತ್ತು ಹುಣಸೂರು ತಾಲೂಕಿನಲ್ಲಿ (ಶೇ.57) ಜಿಲ್ಲೆಯ ಸರಾಸರಿ ಬಿತ್ತನೆಗಿಂತ ಕಡಿಮೆಯಾಗಿದೆ.


ಈ ಸಲ ಭತ್ತ ನಾಟಿ ಬಹಳ ಕಡಿಮೆಯಾಗಿದೆ. 1.03 ಲಕ್ಷ ಹೆಕ್ಟೇರ್ ಪೈಕಿ 45,970 ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬಿತ್ತನೆಯಾಗಿದೆ. ರಾಗಿ ಬಿತ್ತನೆಯೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಶೇ.19ರಷ್ಟು ಮಾತ್ರ ಆಗಿದೆ. ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು 63,525 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹಾಕಿಕೊಳ್ಳಲಾಗಿತ್ತು. ಆದರೆ 11,925 ಹೆಕ್ಟೇರ್‌ನಲ್ಲಿ ಮಾತ್ರ ರಾಗಿ ಉಳುಮೆಯಾಗಿದೆ.

ಉಳಿದಂತೆ ಅವರೆ (ಶೇ.32), ಎಳ್ಳು (ಶೇ.40), ಸಿರಿಧಾನ್ಯ (ಶೇ.22), ತೊಗರಿ (ಶೇ.62), ನೆಲಗಡಲೆ (ಶೇ.88), ಕಬ್ಬಿನ ಹೊಸನಾಟಿಯಲ್ಲಿ (ಶೇ.65) ನೂರರಷ್ಟು ಗುರಿ ಸಾಧನೆಯಾಗಿಲ್ಲ. ಜೋಳ, ಮುಸುಕಿನಜೋಳ, ಉದ್ದು, ಹೆಸರು, ಅಲಸಂದೆ, ಸೂರ್ಯಕಾಂತಿ, ಹರಳು ಬಿತ್ತನೆ ಶೇ.100ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ.

ಈ ಬೆಳೆಗಳು ಉಳಿದ ಬೆಳೆಗಳ ಪ್ರದೇಶವನ್ನು ಆಕ್ರಮಿಸಿಕೊಂಡಿವೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬೀಳದಿದ್ದರೆ ಬಿತ್ತನೆ ಮಾಡಿರುವ ಈಗಿನ ಬೆಳೆಗಳಿಗೂ ಹಾನಿ ಉಂಟಾಗಲಿದೆ.

ನೀರಿಗೆ ತತ್ವಾರ ಇಲ್ಲ


ಸದ್ಯದ ಸ್ಥಿತಿಯಲ್ಲಿ ಜಿಲ್ಲೆಯ ಯಾವ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿಲ್ಲ. ಆದಾಗ್ಯೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಅದಕ್ಕಾಗಿ ನೀರಿಗೆ ತತ್ವಾರ ಉಂಟಾಗಲಿರುವ ಗ್ರಾಮಗಳನ್ನು ಗುರುತಿಸಲಾಗಿದೆ. ಜತೆಗೆ, ಜಿಲ್ಲಾದ್ಯಂತ ಇರುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ.

3 ತಿಂಗಳವರೆಗೂ ಮೇವಿನ ಕೊರತೆವಿಲ್ಲ:

ಸದ್ಯಕ್ಕೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿಲ್ಲ. ಈಗಿರುವ ಮೇವು ಇನ್ನೂ ಮೂರು ತಿಂಗಳವರೆಗೂ ಸಾಕಾಗಲಿದೆ. ಈಗಾಗಲೇ ನಾಟಿ ಮಾಡಿರುವ ಭತ್ತ, ರಾಗಿ ಕಟಾವು ಮಾಡಿದರೆ ಜಾನುವಾರುಗಳಿಗೆ ಮತ್ತಷ್ಟು ಮೇವು ದೊರೆಯಲಿದ್ದು, ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ನಗರ ತಾಲೂಕನ್ನು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಗ್ರಾಮಗಳಲ್ಲಿ ನೀರಿನ ಪ್ರಮಾಣ, ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಜಾನುವಾರು ಮೇವು ಲಭ್ಯತೆ ಕುರಿತು ಮಾಹಿತಿ ಕ್ರೋಡೀಕರಣ ಮಾಡಲಾಗುತ್ತಿದೆ. ರೈತರು ಗುಳೆ ಹೋಗದಂತೆ ನೋಡಿಕೊಳ್ಳಲು ಎಂ-ನರೇಗಾ ಯೋಜನೆಯಡಿ ಕೆಲಸ ನೀಡಿ ಅವರಿಗೆ ಆರ್ಥಿಕ ಸೌಲಭ್ಯ ದೊರೆಯುವಂತೆ ಮಾಡಲಾಗುವುದು.ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ