ಜಿಲ್ಲೆ

ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌ಗೆ 27.60 ಲಕ್ಷ ರೂ. ಲಾಭ

ಮೈಸೂರು: ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌ಗೆ 2024-25ನೇ ಸಾಲಿನಲ್ಲಿ 27,60,359 ರೂ. ಲಾಭ ಬಂದಿದೆ ಎಂದು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಹೊಸಹುಂಡಿ ರಘು ತಿಳಿಸಿದರು.

ನಗರದ ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌ನ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲಾ ತೋಟದ ಬೆಳೆಗಾರರ ಸಂಘದಲ್ಲಿ 5926 ಸದಸ್ಯರಿದ್ದು 33 ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳಿವೆ. ನಗರದ 40 ಹಾಸ್ಟೆಲ್‌ಗಳಿಗೆ ತರಕಾರಿ ಸರಬರಾಜು ಮಾಡುತ್ತಿದ್ದೇವೆ. ಕಾಯಂಗೊಂಡಿರುವ 38 ನೌಕರರಿದ್ದು, ಹೊರಗುತ್ತಿಗೆಯಲ್ಲಿ 45 ನೌಕರರು ಕೆಲಸ ಮಾಡುತ್ತಿದ್ದಾರೆ ಎಂದರು.

2024-25ನೇ ಸಾಲಿನಲ್ಲಿ 3,37,25,386 ರೂ. ವಹಿವಾಟು ನಡೆದಿದ್ದು, ಸಂಘ ಲಾಭದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಪ್‌ಕಾಮ್ಸ್‌ನ ಹಳೇ ಮಳಿಗೆಗಳ ದುರಸ್ತಿಗೆ 35 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತೋಟದ ಬೆಳೆಗಾರರಿಗೆ, ರೈತರಿಗೆ, ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಅಭಿನಂದಿಸಿದ್ದಲ್ಲದೇ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.

ಮುಡಾ ಮಾಜಿ ಅಧ್ಯಕ್ಷ ವಿಜಯ್, ಸಂಘದ ಮಾಜಿ ಅಧ್ಯಕ್ಷರಾದ ಬೋರೇಗೌಡ, ಮಿರ್ಲೆ ಅಣ್ಣೇಗೌಡ, ಉಪಾಧ್ಯಕ್ಷರು, ಎಲ್ಲ ನಿರ್ದೇಶಕರು ಇದ್ದರು.