ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿದರು. ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ರವಿಶಂಕರ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಕಂಬಣ್ಣ ಹಾಗೂ ಅಬಕಾರಿ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಧಿತರಿದ್ದರು. 
ಜಿಲ್ಲೆ

ಅನಧಿಕೃತ ಮದ್ಯ ಮಾರಾಟ ಕಂಡು ಬಂದರೆ ಪ್ರಕರಣ ದಾಖಲಿಸಿ

Mysuru

ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಜಿಲ್ಲೆಯಲ್ಲಿ ಅನಧಿಕೃತ ಮದ್ಯ ಮಾರಾಟ ಕಂಡು ಬಂದರೆ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಚ್.ಡಿ.ಕೋಟೆ, ಸರಗೂರು ಗುಡ್ಡಗಾಡು ಪ್ರದೇಶದಲ್ಲಿ ಕಳಬಟ್ಟಿ ಪ್ರಕರಣಗಳು ಕಂಡುಬಂದರೆ ಕೂಡಲೇ ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಪ್ರತಿದಿನ ಲಿಕ್ಕರ್ ಶಾಪ್‌ಗಳಿಗೆ ಭೇಟಿ ನೀಡಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಆಮಿಷವೊಡ್ಡಲು ಲಿಕ್ಕರ್ ಶಾಪ್‌ಗಳಲ್ಲಿ ಹಾಗೂ ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಜನರಿಗೆ ಲಿಕ್ಕರ್ ನೀಡಿ ಬೇರೆಯವರು ದುಡ್ಡು ಪಾವತಿ ಮಾಡುವ ಬಗ್ಗೆ ಗಮನಹರಿಸಿ. ಈ ಬಗ್ಗೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ಬಾರ್‌ಗಳಿಂದ ಮನೆಗಳಿಗೆ ಬಲ್ಕ್ ಆಗಿ ಲಿಕ್ಕರ್ ಸರಬರಾಜು ಮಾಡುವ ಬಗ್ಗೆ ಗಮನಹರಿಸಿ. ಹಳ್ಳಿಗಳ ಕಿರಾಣಿ ಅಂಗಡಿಗಳು ಹಾಗೂ ಮನೆಗಳಲ್ಲಿ ಮದ್ಯ ಮಾರಾಟದ ಕುರಿತು ಪರಿಶೀಲಿಸಿ, ಮಾರಾಟ ಕಂಡು ಬಂದರೆ ಪ್ರಕರಣ ದಾಖಲಿಸಿ. ಲಿಕ್ಕರ್ ಅಂಗಡಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪೋಸ್ಟ್‌ಗಳಲ್ಲಿ ಪರಿಶೀಲನೆ ಮಾಡಬೇಕು

ಅಬಕಾರಿ ಇಲಾಖೆ ವತಿಯಿಂದ ಚೆಕ್ ಪೋಸ್ಟ್‌ಗಳಲ್ಲಿ ಪರಿಶೀಲನೆ ಮಾಡಬೇಕು. ಮತದಾನ ಮುಂಚೆ 48 ಗಂಟೆಗಳ ಒಣ ದಿನಗಳಲ್ಲಿ ಲಿಕ್ಕರ್ ನಿಷೇಧವಾಗುವ ಸಂಬಂಧ ಆ ದಿನಗಳಲ್ಲಿ ಅಬಕಾರಿ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ತಮ್ಮ ಇಲಾಖೆ ವತಿಯಿಂದ ಸಿಬ್ಬಂದಿ ನಿಯೋಜಿಸಬೇಕು. ಕೇರಳದಿಂದ ಬರುವ ಕಮರ್ಷಿಯಲ್ ವಾಹನಗಳ ಪರಿಶೀಲನೆ ಮಾಡಬೇಕು. ಅಂತಾರಾಜ್ಯ ಗಡಿ ಭಾಗದ ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ವಾಣಿಜ್ಯ ತೆರಿಗೆಗಳ ಇಲಾಖೆಯವರು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜನರಿಗೆ ಆಮಿಷವೊಡ್ಡಲು ಹಲವು ಬಗೆಯಲ್ಲಿ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿರುತ್ತವೆ. ಹೆಚ್ಚಿನ ಮೊತ್ತದ ನಗದು ಹಣ, ಸೀರೆ, ಕುಕ್ಕರ್, ಪಾತ್ರೆ, ಬಟ್ಟೆಗಳು ಮತ್ತಿತರ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಣೆ ಮಾಡುವ ಸಂಭವವಿರುತ್ತದೆ. ಹೀಗಾಗಿ ವಾಹನಗಳ ತಪಾಸಣೆ ನಡೆಸಬೇಕು. ತಪಾಸಣೆ ಕಾರ್ಯದ ವಿಡಿಯೋ ಚಿತ್ರೀಕರಣ ಮಾಡಬೇಕು. ಯಾವುದೇ ಸಾಮಗ್ರಿ ಸಾಗಣೆ ಬಗ್ಗೆ ಸಂಶಯ ಬಂದಲ್ಲಿ ಸಮಗ್ರವಾಗಿ ತಪಾಸಣೆ ನಡೆಸಿ, ಅಕ್ರಮ ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

24 ಗಂಟೆಯೂ ಕಾರ್ಯ

ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವುದರಿಂದ, ಸರದಿ ಆಧಾರದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಬಂಧಪಟ್ಟ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ರವಿಶಂಕರ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಕಂಬಣ್ಣ ಹಾಗೂ ಅಬಕಾರಿ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಧಿತರಿದ್ದರು.