ಜಿಲ್ಲೆ

ಹಣಕಾಸು ವರ್ಗಾವಣೆ ಕುರಿತು ಅಗತ್ಯ ಮಾಹಿತಿ ನೀಡಿ

Mysuru

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಹಕಾರ ಮುಖ್ಯವಾಗಿದ್ದು ಹಣಕಾಸು ವರ್ಗಾವಣೆ ವಿಚಾರದಲ್ಲಿ ಅಗತ್ಯ ಮಾಹಿತಿ ನೀಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.


ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಣ ಸಾಗಣೆ ಮಾಡುವವರ ಬಳಿ ಅಗತ್ಯ ದಾಖಲೆಗಳಿರಬೇಕು. ಒಂದು ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ, ಒಂದೇ ಖಾತೆಯಿಂದ ಹೆಚ್ಚು ಜನರಿಗೆ ಹಣ ಹೋಗಿದ್ದರೆ ಅಥವಾ ಅಭ್ಯರ್ಥಿ, ಅಭ್ಯರ್ಥಿಯ ಹೆಂಡತಿಯ ಖಾತೆಯಿಂದ ಒಂದು ಲಕ್ಷ ರೂ.ಗಿಂತ ಹೆಚ್ಚು ಹಣ ವರ್ಗಾವಣೆ ಆಗಿದ್ದರೆ ಆ ವಿಷಯವನ್ನು ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಇನ್ನು ಹತ್ತು ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾವಣೆಯಾದ ವಿಷಯ ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಯ ಗಮನಕ್ಕೆ ಮಾಹಿತಿ ಇರಬೇಕಾಗುತ್ತದೆ ಎಂದರು.
ಎಟಿಎಂಗಳಿಗೆ ಹಣ ತುಂಬುವವರು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ಒಳಗೆ ಹಣ ತುಂಬಬೇಕು. ಪ್ರತಿ ಎಂಟಿಎಂಗೆ ಹಣ ತುಂಬಿರುವುದಕ್ಕೆ ಸೂಕ್ತ ದಾಖಲೆ ಹೊಂದಿರಬೇಕು. ಸಂಜೆ 5ರ ನಂತರ ದಾಖಲೆಗಳಿದ್ದರೂ ಹಣ ಸಾಗಣೆಗೆ ಅನುಮತಿ ಇರುವುದಿಲ್ಲ. ದಾಖಲೆಗಳ ಕೊರತೆಯಿಂದಾಗಿ ವಶಪಡಿಸಿಕೊಂಡ ಹಣ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ವಾಪಸ್ ಪಡೆಯಲು ಆಗದ ಕಾರಣ ಅಗತ್ಯ ದಾಖಲೆಗಳು ಮುಖ್ಯ ಎಂದರು.

ಲೀಡ್ ಬ್ಯಾಂಕ್ ಅಧಿಕಾರಿಗಳು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಅಗತ್ಯ ಮಾಹಿತಿಗಳನ್ನು ಎಲ್ಲ ಬ್ಯಾಂಕ್‌ಗಳಿಗೆ ನೀಡಬೇಕು ಎಂದರು. ವಿವಿಧ ಬ್ಯಾಂಕ್ ಮುಖ್ಯಸ್ಥರು, ಚುನಾವಣಾ ತಹಸೀಲ್ದಾರ್ ಇದ್ದರು.