ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಸ್ತಬ್ಧಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದು ವಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ವಿವಿಧ ಇಲಾಖೆ, ನಿಗಮ ಮಂಡಳಿಗಳ ಸ್ತಬ್ಧಚಿತ್ರಗಳು ನಾಡಿನ ವೈಭವವನ್ನು ಅನಾವರಣಗೊಳಿಸಿತು.
ಈ ಬಾರಿ ಒಟ್ಟು 46 ಸ್ತಬ್ಧಚಿತ್ರಗಳು ಪಾಲ್ಗೊಂಡಿತ್ತು. ಕೆಲವು ಸ್ತಬ್ಧಚಿತ್ರಗಳನ್ನು ಹೊರತು ಪಡಿಸಿದರೆ ಬಹುತೇಕ ಸ್ತಬ್ಧಚಿತ್ರಗಳು ಆಕರ್ಷಕ ವಾಗಿತ್ತು. ಬಹುತೇಕ ಎಲ್ಲ ಸ್ತಬ್ಧಚಿತ್ರಗಳಿಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನ ಹಿರಿಮೆ ಗರಿಮೆ ಸಾರುವಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸ್ತಬ್ಧಚಿತ್ರಗಳು ಯಶಸ್ವಿಯಾಯಿತು.
ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರ: ಬಾಗಲಕೋಟೆ ಜಿಲ್ಲೆ- ಮುಧೋಳ ಶ್ವಾನ, ಇಳಕಲ್ ಸಿರೆ ಮತ್ತು ದುರ್ಗಾಂಬ ದೇವಸ್ಥಾನದ ಸ್ತಬ್ಧಚಿತ್ರ, ಬಳ್ಳಾರಿ- ದುರ್ಗಮ್ಮ ದೇವಸ್ಥಾನ, ಮಿಂಚೇರಿ ಗುಡ್ಡ ಮತ್ತು ಬಳ್ಳಾರಿ ಕೋಟೆ, ಬೆಳಗಾವಿ-ರೇಣುಕಾದೇವಿ ದೇವಸ್ಥಾನ ಮತ್ತು ಕಮಲ ಬಸದಿ, ಬೆಂಗಳೂರು ಗ್ರಾಮಾಂತರೆ-ಮನ್ಯಾಪುರ ದೇವಸ್ಥಾನ, ಕಪಿಲೇಶ್ವರ ದೇವಸ್ಥಾನ ಮತ್ತು ಜೈನ ಬಸದಿ ಮತ್ತು ಸಿಂಪಾಡಿಪುರ ವೀಣೆ ಬೆಂಗಳೂರು ನಗರ- ಕಡಲೆಕಾಯಿ ಪರಸೆ ಮತ್ತು ಬಸವನಗುಡಿ, ಬೀದರ್- ನೂತನ ಅನುಭವ ಮಂಟಪ, ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ ಮತ್ತು ಪುನೀತ್ ರಾಜ್ ಕುಮಾರ್ ಪ್ರತಿಮೆಯ ಸ್ತಬ್ಧಚಿತ್ರ ಕಣ್ಮನ ಸೆಳೆಯಿತು.
ಚಿಕ್ಕಬಳ್ಳಾಪುರ- ಗ್ರೀನ್ ನಂದಿ ಆ್ಯಂಡ್ ಕ್ಲಿನ್ ನಂದಿ, ಭೋಗಾನಂದೀಶ್ವರ ದೇವಸ್ಥಾನ, ಚಿಕ್ಕಮಗಳೂರು- ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಮತ್ತು ಜಿಲ್ಲೆಯ ಸಪ್ತನದಿಗಳು, ಚಿತ್ರದುರ್ಗ- ವಾಣಿವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿ ರುವ ಮದಕರಿ ನಾಯಕ, ಪ್ರತಿಮೆ, ದೀಪ ಸ್ತಂಭ, ದಕ್ಷಿಣ ಕನ್ನಡ- ಕಂಬಳ, ಹುಲಿವೇಶ ಮತ್ತು ಭೂತ ಕೋಲ, ದಾವಣಗೆರೆ- ಸಂತೆಬೆನ್ನೂರು ಪುಷ್ಕರಣಿ, ಧಾರವಾಡ- ಸಂಗೀತ ದಿಗ್ಗಜರು, ಗದಕ- ಶ್ರೀ ಕ್ಷೇತ್ರ ಶ್ರೀಮಂತಗಡ ಹೊಳಲಮ್ಮ ದೇವಿ ಮತ್ತು ಶಿವಾಜಿ, ಹಾಸನ- ಬೇಲೂರು, ಹಳೆಬೀಡು ಮತ್ತು ಶ್ರವಣಬೆಳಗೊಳ ಗೊಮ್ಮಟೇಶ್ವರ, ಹಾವೇರಿ- ಗುರು ಗೋವಿಂದಭಟ್ಟರು, ಸಂತ ಶಿಶುನಾಳ ಷರೀಫರು ಮತ್ತು ಮುಕ್ತೇಶ್ವರ ದೇವಾಲಯ, ಕಲ್ಬುರ್ಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿಧಾನ ಸ್ತಬ್ಧಚಿತ್ರ ಜನಮನ ಗೆದ್ದಿತು.
ಕೊಡಗು- ಬ್ರಹ್ಮಗಿರಿ ಬೆಟ್ಟ, ಭಗಂಡೇಶ್ವರ ದೇವಸ್ಥಾನ, ತಲಕಾವೇರಿ ತೀರ್ಥೋದ್ಭವ ಮತ್ತು ಇರ್ಪು ಜಲಪಾತ, ಕೋಲಾರ- ಬಿಕೆಎಸ್ ಅಯ್ಯಂಗಾರ್, ಯೋಗಥಾನ್ ಮತ್ತು ಅಂತರಗಂಗೆ ಬೆಟ್ಟ, ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳು ಗೊಂಬೆಗಳು ಹಾಗೂ ಅಂಜನಾದ್ರಿ ಬೆಟ್ಟ, ಮಂಡ್ಯ- ಜಿಲ್ಲೆಯ ದೇವಾಲಯಗಳು, ಮೈಸೂರು- ಮೈಸೂರು ಸಿಲ್ಕ್, ಮೈಸೂರು ಪಾಕ್, ಮೈಸೂರು ಪೇಟೆ ಸೇರಿದಂತೆ ಜಿಲ್ಲೆಯ ವಿಶೇಷತೆಗಳು, ರಾಯಚೂರು- ಸಿರಿಧಾನ್ಯ ಬೆಳೆಗಳ ಅಭಿಯಾನ, ರಾಮನಗರ- ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ, ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ, ತುಮಕೂರು- ನಿಟ್ಟೂರಿನ ಎಚ್‌ಎಎಲ್ ತಯಾರಿಕಾ ಘಟಕ ಮತ್ತು ಪಾವಗಡದ ವಿಶ್ವದ ಮನನ ಪ್ರಥಮ ಬೃಹತ್ ಸೋಲಾರ್ ಪಾರ್ಕ್, ಉಡುಪಿ- ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ ಸೀರೆ ನೇಯ್ಗೆ ಮತ್ತು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ, ಉತ್ತರ ಕನ್ನಡ - ಕಾರಾವರ ನೌಕಾನೆಲೆ ಮತ್ತು ಐಎನ್‌ಎಸ್ ವಿಕ್ರಮ, ವಿಜಯಪುರ - ಸಿದ್ದರಾಮೇಶ್ವರ ದೇವಸ್ಥಾನ, ವಿಜಯಪುರ- ಉಗ್ರ ನರಸಿಂಹ, ದರೋಜಿ ಕರಡಿಧಾಮ ಮತ್ತು ಕಲ್ಲಿನ ರಥ, ಯಾದಗಿರಿ- ಸುರಪುರ ಕೋಟೆ ಸ್ತಬ್ಧಚಿತ್ರ ಜನಮನ ಗೆದ್ದಿತು.
ಇಲಾಖೆ, ನಿಗಮಗಳ ಸ್ತಬ್ಧಚಿತ್ರ: ಸ್ತಬ್ಧ ಚಿತ್ರ ಉಪ ಸಮಿತಿಯಿಂದ ಒಟ್ಟು 2 ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಗಿತು. ಸ್ವಾತಂತ್ರೃದ ಅಮೃತ ಮಹೋತ್ಸವ, ಮೈಸೂರಿನ ಸೋಮನಾಥಪುರ ಚನ್ನಕೇಶವ ದೇವಸ್ಥಾನ ಗಮನ ಸೆಳೆಯಿತು. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು ಆನೆಲಾಯ ಮತ್ತು ಹಂಪಿ, ಸಹಕಾರ ಇಲಾಖೆ- ಸಹಕಾರ ಕ್ಷೇತ್ರದಿಂದ ಜನರಿಗೆ ದೊರೆಯುತ್ತಿರುವ ಸೌಲಭ್ಯಗಳು, ಕಾವೇರಿ ನೀರಾವರಿ ನಿಗಮ- ನಿಮಗದಿಂದ ರೈತರಿಗೆ ಆದ ಅನುಕೂಲಗಳು, ಮೈಸೂರು ವಿಶ್ವವಿದ್ಯಾಲಯ- ವಿವಿಯ 106 ವರ್ಷಗಳ ಇತಿಹಾಸ, ಡಾ. ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮ-ಲಿಡ್ಕರ್ ಉತ್ಪನ್ನಗಳು, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಇಲಾಖೆ-ಐಟಿಐ, ಜಿಟಿಟಿಸಿ ಮತ್ತು ಕೌಶಲ್ಯ ತರಬೇತಿ ಸ್ತಬ್ಧಚಿತ್ರ, ಸಮಾಜ ಕಲ್ಯಾಣ ಇಲಾಖೆ-ಸಾಮಾಜಿಕ ನ್ಯಾಯ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ- ಡಿಡಿಯು ಯೋಜನೆ, ಬೆಳಕು ಯೋಜನೆ ಮತ್ತು ಪರಿವರ್ತಕ ಅಭಿಯಾನ, ಕೆಎಂಎಫ್- ನಂದಿನಿ ಕ್ಷೀರಧಾರೆ ಹಾಗೂ ಉತ್ಪನ್ನಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರೆಯಿಂದ ರಕ್ಷಣೆ, ನಮ್ಮ ಕ್ಲಿನಿಕ್ ಮತ್ತು ನಿಮ್ಮ ಆರೋಗ್ಯ ನಮ್ಮ ಬದ್ಧತೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ ಸ್ತಬ್ಧಚಿತ್ರಗಳು ಗಮನ ಸೆಳೆಯಿತು.
ಕೊಡಗು ಜಿಲ್ಲೆ ಪ್ರಥಮ ಸ್ಥಾನ: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿಯಲ್ಲಿ ಹಮ್ಮಿಕೊಂಡ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕೊಡಗು ಜಿಲ್ಲೆ ಪ್ರಥಮ, ಮೈಸೂರು ದ್ವಿತೀಯ ಹಾಗೂ ಚಿತ್ರದುರ್ಗ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಕೊಡಗು ಜಿಲ್ಲೆಯ ಸ್ತಬ್ಧಚಿತ್ರದಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಾನ ಬ್ರಹ್ಮಗಿರಿ ಬೆಟ್ಟ, ಭಾಗಮಂಡಲದ ಭಂಗಡೇಶ್ವರ ದೇವಸ್ಥಾನ, ಕಾವೇರಿ ಕುಂಡಿಕೆ, ಕೊಡಗಿನ ಜಲಪಾತಗಳು , ಕೊಡಗಿನ ಕಾಫಿ, ಕಿತ್ತಳೆ, ಏಲಕ್ಕಿ, ಕರಿಮೆಣಸು ಬೆಳೆಗಳು, ಡಿಜಿಟಲ್ ಗ್ರಂಥಾಲಯದ ಕಲಾಕೃತಿಗಳು ಗಮನ ಸೆಳೆಯಿತು.
ಮೈಸೂರು ಜಿಲ್ಲೆಯ ಸ್ತಬ್ಧಚಿತ್ರ ಮೈಸೂರಿನ ವಿಶೇಷತೆಗಳನ್ನು ಬಿಂಬಿಸಿತು. ಮೈಸೂರು ಪೇಟ, ಮೈಸೂರು ಪಾಕ್, ನಂಜನಗೂಡು ರಸಬಾಳೆ, ಮೈಸೂರು ದಸರಾ, ಮೈಸೂರು ಮಲ್ಲಿಗೆ, ಮಹಿಷಾಸುರ, ಬೆಟ್ಟದ ನಂದಿ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆಯ ಸ್ತಬ್ಧಚಿತ್ರವು ವಾಣಿವಿಲಾಸ ಜಲಾಶಯ, ರಾಜ ವೀರ ಮದಕರಿ ನಾಯಕ, ವೀರ ವನಿತೆ ಒನಕೆ ಓಬವ್ವ ಕಲಾಕೃತಿಗಳ ಮೂಲಕ ಜನರನ್ನು ಆಕರ್ಷಿಸಿತು.
ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳ ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ಐಟಿಐ, ಜಿಟಿಟಿಸಿ, ಕೌಶಲ್ಯ ತರಬೇತಿ’ ಕಲಾಕೃತಿಗಳನ್ನು ಒಳಗೊಂಡ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆಯಿತು. ಕೆಎಂಎಫ್ ನಿರ್ಮಿಸಿದ ‘ನಂದಿನಿ ಕ್ಷೀರಧಾರೆ ಮತ್ತು ಉತ್ಪನ್ನಗಳು’ ಸ್ತಬ್ಧಚಿತ್ರ ದ್ವಿತೀಯ, ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಮಗದ ‘ಲಿಡ್ಕರ್ ಉತ್ಪನ್ನಗಳು’ ಸ್ತಬ್ಧಚಿತ್ರ ತೃತೀಯ ಬಹುಮಾನ ಪಡೆಯಿತು.