ಜಿಲ್ಲೆ

ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

Mangaluru - Hariprasad Rai



ಮಂಗಳೂರು : ಕ್ರೀಡೆಯಲ್ಲಿ ಎದುರಾಗುವ ಸೋಲುಗಳಿಂದ ಧೃತಿಗೆಡಬಾರದು. ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದ ಜತೆಗೆ ಶಿಸ್ತು ಮೈಗೂಡಿಸಿಕೊಂಡರೆ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಒಲಿಂಪಿಕ್ ಕ್ರೀಡಾಪಟು ಎಂ.ಆರ್.ಪೂವಮ್ಮ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಯುವಜನ ಒಕ್ಕೂಟದ ಆಶ್ರಯದಲ್ಲಿ ನಗರದ ಮಂಗಳ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ದಿನಗಳಿಂದಲೇ ಮಂಗಳಾ ಕ್ರೀಡಾಂಗಣದಲ್ಲೇ ಅಭ್ಯಾಸ ಮಾಡಿ ಒಲಿಂಪಿಕ್ ಸಹಿತ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶ ಪಡೆದೆ. ಎಳೆಯ ಕ್ರೀಡಾಪಟುಗಳು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ರಾಜ್ಯ, ದೇಶಕ್ಕೆ ಹೆಮ್ಮೆ ತರುವ ಕ್ರೀಡಾಪಟುಗಳಾಗಿ ಮೂಡಿಬರಬೇಕು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ವ್ಹೇಟ್ ಲಿಫ್ಟರ್ ಪುಷ್ಪರಾಜ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಸಂತೋಷ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ , ನೆಹರು ಯುವ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ, ಜಿಲ್ಲಾ ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಕುಮಾರ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಲಿಲ್ಲಿ ಪಾಸ್, ಮುಂತಾದವರು ಉಪಸ್ಥಿತರಿದ್ದರು. ವಿನೋದ್ ಸೂರಿಂಜೆ ವಂದಿಸಿದರು. ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.
ಮೈಸೂರು ವಿಭಾಗ ಮಟ್ಟದ 8 ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ವುಷು, ವೇಟ್ ಲಿಫ್ಟಿಂಗ್, ಕುಸ್ತಿ, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಟೇಕ್ವೋಂಡೊ ಸ್ಪರ್ಧೆಗಳು ನಡೆದವು.