ಮಂಜುನಾಥ ತಿಮ್ಮಯ್ಯ ಮೈಸೂರು
ಮೈಸೂರಿನ ಪ್ರಮುಖ ಪ್ರೇಕ್ಷಣೀಯ ತಾಣಗಳಿಗೂ ಪ್ರವೇಶ ಕಲ್ಪಿಸುವ ಏಕರೂಪದ ಟಿಕೆಟ್ ವ್ಯವಸ್ಥೆ ಈ ಸಲದ ದಸರಾದಲ್ಲಿ ಇರುವುದಿಲ್ಲ. ಹೀಗಾಗಿ, ಪ್ರವಾಸಿಗರ ಪರದಾಟಕ್ಕೆ ಕೊನೇ ಇಲ್ಲದಂತಾಗಿದೆ…!
ದಸರಾ ಅಂಗವಾಗಿ ಪ್ರವಾಸಿಗರು, ಸಾರ್ವಜನಿಕರ ಅನುಕೂಲಕ್ಕಾಗಿ ಏಕೀಕೃತ ಟಿಕೆಟ್ ವ್ಯವಸ್ಥೆಯನ್ನು ಹಿಂದೆ ಜಾರಿ ಮಾಡಲಾಗುತ್ತಿತ್ತು. ಆದರೆ, ಈ ಸಲ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಈ ವ್ಯವಸ್ಥೆಯನ್ನೇ ಕೈಬಿಟ್ಟಿದೆ.
ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು 5 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನಕ್ಕೆ ನೇರವಾಗಿ ತೆರಳಬಹುದಿತ್ತು. ಈ ವ್ಯವಸ್ಥೆಯಿಂದ ಪ್ರವಾಸಿಗರು ಈ ಸ್ಥಳಗಳಲ್ಲಿ ಪ್ರವೇಶ ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುತ್ತಿರಲಿಲ್ಲ.
ಇದು ಸಹಸ್ರಾರು ಪ್ರವಾಸಿಗರಿಗೆ ಅನುಕೂಲವಾಗಿತ್ತು. ಒಂದು ಟಿಕೆಟ್ ಬೆಲೆ 500 ರೂ. ಮತ್ತು ಮಕ್ಕಳಿಗೆ ಟಿಕೆಟ್ ದರವನ್ನು 250 ರೂ. ನಿಗದಿ ಪಡಿಸಲಾಗಿತ್ತು. ಈ ಟಿಕೆಟ್ ಪಡೆದವರು 5 ಪ್ರೇಕ್ಷಣೀಯ ಸ್ಥಳಿಗಳಿಗೂ ಭೇಟಿ ನೀಡಬಹುದಿತ್ತು. ಈ ವ್ಯವಸ್ಥೆ ಜಾರಿ ಕುರಿತು ಜಿಲ್ಲಾಡಳಿತ ಮರೆತು ಬಿಟ್ಟಿದೆ.
ಈ ಸಲ ಕೈಬಿಡಲಾಗಿದೆ: ಏಕೀಕೃತ ಟಿಕೆಟ್ ಅನ್ನು ಪ್ರವಾಸೋದ್ಯಮ ಇಲಾಖೆಯಿಂದ ಹಿಂದೆ ಮಾರಾಟ ಮಾಡಲಾಗುತ್ತಿತ್ತು. ಕೆಎಸ್‌ಟಿಡಿಸಿ ಹೋಟೆಲ್, ಟ್ರಾವೆಲ್ಸ್ ವಿಭಾಗದಲ್ಲಿ ಪಡೆದುಕೊಳ್ಳಬಹುದಿತ್ತು. ಕೆಎಸ್‌ಆರ್‌ಟಿಸಿ ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಮೃಗಾಲಯ, ಕೆಆರ್‌ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಟಿಕೆಟ್ ಲಭ್ಯ ಇತ್ತು. ಆದರೆ, ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಲಿಲ್ಲ. ಹೀಗಾಗಿ, ಈ ಸಲ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಬೋ ಟಿಕೆಟ್ ಯಾರು ತೆಗೆದುಕೊಳ್ಳುತ್ತಿಲ್ಲ. ಇದನ್ನು ಪಡೆದುಕೊಂಡು ಪ್ರವಾಸಿ ತಾಣಗಳಿಗೆ ಹೋಗದಿದ್ದರೆ ದುಡ್ಡು ವ್ಯರ್ಥವಾಗಲಿದೆ ಎಂಬ ಭಯ ಪ್ರವಾಸಿಗರಿಗೆ ಕಾಡುತ್ತಿದೆ. ಹೀಗಾಗಿ, ಈ ಉಸಾಬರಿಯೇ ಬೇಡ ಎಂಬ ಅಭಿಪ್ರಾಯ ಕೆಲವರಲ್ಲಿ ಇದೆ.
ಪ್ರವೇಶ ಟಿಕೆಟ್ ಹಣವನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕಿದೆ. ಅದಕ್ಕಾಗಿ ಹಣ ಹಂಚಿಕೆ ಸೂತ್ರವನ್ನು ಸಿದ್ಧಪಡಿಸಬೇಕು, ಪ್ರತ್ಯೇಕ ಕಾಂಬೋ ಟಿಕೆಟ್ ಮುದ್ರಣ ಮಾಡಬೇಕು. ಜತೆಗೆ, ಇವುಗಳಿಗೆ ಹೊಣೆಗಾರಿಕೆ, ಉತ್ತರದಾಯಿತ್ವವನ್ನೂ ನಿಗದಿಪಡಿಸಬೇಕಿದೆ. ಆದರೆ, ಅದುವೇ ಆಗುತ್ತಿಲ್ಲ. ಜತೆಗೆ, ಈ ಸಂಸ್ಥೆಗಳು ಈ ವ್ಯವಸ್ಥೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇದುವೇ ಈ ವ್ಯವಸ್ಥೆಗೆ ವಿಘ್ನವಾಗಿದೆ.
ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ, ಪ್ರವಾಸಿ ಸ್ನೇಹಿಯಾಗಿ ರೂಪಿಸಿದಾಗಲೇ ಯಶಸ್ಸಿಯಾಗಲು ಸಾಧ್ಯ. ಇದಕ್ಕಾಗಿ ಸ್ಪಷ್ಟ ಯೋಜನೆ ರೂಪಿಸಬೇಕು. ಪ್ರತ್ಯೇಕ ತಂತ್ರಾಂಶ(ಸಾಫ್ಟ್‌ವೇರ್) ರೂಪಿಸಿ, ಆನ್‌ಲೈನ್‌ನಲ್ಲೂ ಈ ಟಿಕೆಟ್ ದೊರೆಯುವಂತೆ ಮಾಡಬೇಕು. ಸಿನಿಮಾ ಟಿಕೆಟ್, ಬಟ್ಟೆ ಖರೀದಿಯಷ್ಟು ಸುಲಭವಾಗಿ ಈ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಬೇಕು. ಪಡೆದುಕೊಂಡ ಟಿಕೆಟ್ ರದ್ದುಪಡಿಸುವ ಅವಕಾಶವನ್ನೂ ಕಲ್ಪಿಸಬೇಕು. ಭೇಟಿ ನೀಡದಿದ್ದರೆ ಹಣ ವ್ಯರ್ಥವಾಗಲ್ಲ ಎಂಬ ಭರವಸೆಯನ್ನೂ ಮೂಡಿಸಬೇಕು. ಅದಕ್ಕಾಗಿ ಒಂದೆರಡು ತಿಂಗಳ ಅವಕಾಶ ಒದಗಿಸಬೇಕು. ಹೀಗೆ ವಿವಿಧ ಅನುಕೂಲಕರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಏಕರೂಪದ ಟಿಕೆಟ್ ವ್ಯವಸ್ಥೆ ಪ್ರವಾಸಿಗರ ಸ್ನೇಹಿಯಾಗಿ ರೂಪಿಸಬೇಕಿದೆ.
ಕಳೆದ ಸಲ ಪ್ರಚಾರದ ಕೊರತೆಯಿಂದಲೇ ಏಕರೂಪದ ಟಿಕೆಟ್ ವ್ಯವಸ್ಥೆ ವಿಫಲವಾಗಿದೆ. ಹಾಗಾಗಿ, ವ್ಯಾಪಕವಾಗಿ ಪ್ರಚಾರ ಮಾಡಬೇಕು. ಸುಲಭವಾಗಿ ಇದು ದೊರೆಯುವಂತೆ ಮಾಡಬೇಕು. ರಿಯಾಯಿತಿ ದರದಲ್ಲಿ ಇದು ದೊರೆಯುವಂತೆ ಮಾಡಬೇಕು. ಈ ರೀತಿ ಉಪಕ್ರಮಗಳ ಮೂಲಕ ಪ್ರವಾಸಿಗರು, ಸಾರ್ವಜನಿಕರನ್ನು ಆಕರ್ಷಿಸಬೇಕಾಗಿದೆ.
ನಗರದ ಪ್ರತಿ ಪ್ರವಾಸಿ ತಾಣಗಳಲ್ಲಿ ಪ್ರತ್ಯೇಕ ಟಿಕೆಟ್ ಪಡೆಯಲು ಪ್ರವಾಸಿಗರು ಈಗಲೂ ತೊಂದರೆ ಅನುಭವಿಸಬೇಕಾಗಿದೆ. ಜನದಟ್ಟಣೆ ಹೆಚ್ಚಿರುವ ದಸರಾ, ವಾರಾಂತ್ಯ, ಸಾರ್ವತ್ರಿಕ ರಜೆ ದಿನಗಳಲ್ಲಿ ಈ ಸಮಸ್ಯೆ ಇನ್ನೂ ಅಧಿಕ. ಈ ತಾಪತ್ರಯವನ್ನು ತಪ್ಪಿಸಲು ಏಕೀಕೃತ ಟಿಕೆಟ್ ಅಗತ್ಯವಾಗಿದೆ. ಇದರಿಂದ ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ, ನೂಕುನುಗ್ಗಲಿನಲ್ಲಿ ಕಿಸೆಗಳ್ಳತನವಾಗಿ ಹಣ, ಒಡವೆ ಕಳೆದುಕೊಂಡ ಕಹಿ ಘಟನೆಯನ್ನೂ ತಪ್ಪಿಸಬೇಕಿದೆ.
ಪ್ರವೇಶ ಟಿಕೆಟ್ ಜತೆಗೆ ವಾಹನಗಳ ಪಾರ್ಕಿಂಗ್‌ಗೂ ಪ್ರತ್ಯೇಕವಾಗಿ ಟಿಕೆಟ್ ಕೂಡ ತೆಗೆದುಕೊಳ್ಳಬೇಕಾಗಿದೆ. ಇದರಿಂದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಹೆಚ್ಚಿನ ಸಮಯ ಪ್ರವಾಸಿಗರಿಗೆ ಸಿಗುತ್ತಿಲ್ಲ. ಪ್ರತಿ ಸ್ಥಳದಲ್ಲಿ ಪ್ರತ್ಯೇಕ ಟಿಕೆಟ್ ಖರೀದಿಯಿಂದಲೂ ಆರ್ಥಿಕ ಹೊರೆಯಾಗುತ್ತಿದೆ. ಈ ಎಲ್ಲ ಪ್ರಹಸನವು ಕಿರಿಕಿರಿ ಉಂಟು ಮಾಡುತ್ತಿದೆ. ಇದನ್ನು ತಪ್ಪಿಸಿ ಸರಳ, ಸುಲಲಿತ, ಅಡೆತಡೆರಹಿತ ಪ್ರವಾಸ ಅನುಭವವನ್ನು ಪ್ರವಾಸಿಗರಿಗೆ ಉಣಬಡಿಸಬೇಕಾಗಿದೆ.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ ಆಡಳಿತ ಮಂಡಳಿ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ, ರೈಲ್ವೆ ಇಲಾಖೆ ನಡುವೆ ಹೊಂದಾಣಿಕೆ ಏರ್ಪಡುತ್ತಿಲ್ಲ. ಇವುಗಳು ಆಸಕ್ತಿಯನ್ನೂ ತೋರುತ್ತಿಲ್ಲ. ಇದರಿಂದ ಇದು ನನೆಗುದಿಗೆ ಬಿದ್ದಿದೆ.
ದಸರಾಕ್ಕೆ ಮಾತ್ರ ಏಕೀಕೃತ ಟಿಕೆಟ್ ವ್ಯವಸ್ಥೆ ಸಿಮೀತಗೊಳಿಸಬೇಡಿ. ಇದು ಶಾಶ್ವತವಾಗಿ ಕಾರ್ಯನಿರ್ವಹಣೆ ಮಾಡಬೇಕು. ವರ್ಷವಿಡೀ ಇದರ ಪ್ರಯೋಜನ ಪ್ರವಾಸಿಗರಿಗೆ ದೊರೆಯುವಂತಾಗಬೇಕು ಎಂಬುದು ದಶಕಗಳ ಬೇಡಿಕೆ. ಆದರೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗೆ ಇದಕ್ಕೆ ಮೂರ್ತರೂಪ ಕೊಡಲು ಈವರೆಗೂ ಸಾಧ್ಯವಾಗಿಲ್ಲ.
ವಿವಿಧ ಪ್ರವಾಸಿ ತಾಣಗಳ ಭೇಟಿಗಾಗಿ ಈ ಸಲದ ದಸರೆಯಲ್ಲಿ ಏಕರೂಪ ಟಿಕೆಟ್ ವ್ಯವಸ್ಥೆ ಜಾರಿ ಮಾಡುತ್ತಿಲ್ಲ. ಹಿಂದೆ ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯಲಿಲ್ಲ. ಆದ್ದರಿಂದ ದಸರಾ ಮುಗಿದ ಬಳಿಕ ಈ ಕುರಿತು ಪರಿಶೀಲನೆ ಮಾಡಲಾಗುವುದು.ಎಂ.ಕೆ.ಸವಿತಾ,ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ